ತುಮಕೂರು :ಹದಿಹರೆಯದ ವಯೋಮಾನದವರಲ್ಲಿ ಆತ್ಮಹತ್ಯೆ ಪ್ರಯತ್ನದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಇದನ್ನು ಪೋಷಕರು ಮತ್ತು ಶಿಕ್ಷಕ ವರ್ಗ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಮನೋ ವೈದ್ಯ ಡಾ. ಅನಿಲ್ ಕುಮಾರ್ ತಿಳಿಸಿದರು.
ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ಹಾಗೂ ಸರ್ಕಾರಿ ಪದವಿ ಪೂರ್ವಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಜುನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಮುಂದಿರುವ ಆದ್ಯತೆಯ ಆಯ್ಕೆಗಳೇನು ಎಂಬುದನ್ನು ಪರಿಗಣಿಸದೆ ಅನ್ಯ ವಿಷಯಗಳಿಗೆ ಹೆಚ್ಚು ಆಸಕ್ತರಾಗುತ್ತಿದ್ದಾರೆ. ಮಾನಸಿಕ ಗೊಂದಲಗಳಿಗೆ ಸಿಲುಕುತ್ತಾರೆ. ಈ ಸಂಕಟಗಳಿಂದ ಹೊರಬರಲಾಗದೆ ಆತ್ಮಹತ್ಯೆ ಹಾದಿ ಹಿಡಿಯುವ ಪ್ರಯತ್ನಗಳು ನಡೆಯುತ್ತವೆ. ಈ ಬಗ್ಗೆ ಎಚ್ಚರವಹಿಸಬೇಕಾಗಿದೆ ಎಂದರು.
ವಿದ್ಯಾರ್ಥಿಗಳ ಮೊದಲ ಆದ್ಯತೆ ಶಿಕ್ಷಣದ ಕಲಿಕೆಯಷ್ಟೇ ಆಗಿರಬೇಕು. ಆದರೆ ಸಹವಾಸ ದೋಷ ಇತ್ಯಾದಿಗಳಿಂದಾಗಿ ಬೇರೆ ವಿಷಯಗಳತ್ತ ಮನಸ್ಸು ಕೊಟ್ಟಾಗ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾರೆ. ಮೊಬೈಲ್ ಬಳಕೆ, ಮಾದಕ ವಸ್ತುಗಳ ಮೋಹ, ಪಾರ್ಕ ಗಳಲ್ಲಿ ಸುತ್ತಾಟ ಇವುಗಳೆಲ್ಲ ವಿದ್ಯಾರ್ಥಿಯ ಭವಿಷ್ಯವನ್ನೇ ಹಾಳು ಮಾಡುತ್ತವೆ. ಒತ್ತಡ ನಿರ್ವಹಣೆ ಮತ್ತು ವ್ಯಕ್ತಿತ್ವ ರೂಪಿಸಿಕೊಂಡರೆ ಇವುಗಳಿಂದ ಹೊರಬರಬಹುದು, ಅದಕ್ಕೆ ತಕ್ಕ ಯೋಜನೆ ಮತ್ತು ಸಿದ್ದತೆಗಳ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಭಾರತದಲ್ಲಿ ಪ್ರತಿವರ್ಷ ಅಂದಾಜು 1,60,000 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಇದರ ಸಂಖ್ಯೆ 15000 ಇದೆ. ಪ್ರತಿ 40 ಸೆಕೆಂಡ್ ಗಳಿಗೆ ಒಂದು ಆತ್ಮಹತ್ಯೆ ಸಾವಾಗುತ್ತಿದೆ. ಒಬ್ಬನ ಸಾವಾದರೆ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಆದಕಾರಣ ವ್ಯಕ್ತಿಗಳಲ್ಲಿ ಕಂಡುಬರುವ ಮಾನಸಿಕ ಖಿನ್ನತೆ, ಒಂಟಿತನ, ಅಥವಾ ಯಾವುದೇ ಅಸಹಜ ನಡವಳಿಕೆಗಳನ್ನು ಅತ್ಯಂತ ಸೂಕ್ಷ್ಮತೆಯಿಂದ ಗಮನಿಸಬೇಕು. ಬದಲಾವಣೆಗೆ ತರುವ ಪ್ರಯತ್ನಗಳಾದರೆ ಖಂಡಿತಾ ಒಂದು ಜೀವ ಉಳಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತಾ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಫಲಿತಾಂಶವೇ ಮುಖ್ಯವಾಗಬಾರದು. ಮರಳಿ ಪ್ರಯತ್ನಗಳಿಂದ ಉತ್ತಮ ಅಂಕಗಳಿಸಲು ಸಾಧ್ಯವಿದೆ. ಯುವ ಜನತೆಯಲ್ಲಿ ಫಲಿತಾಂಶ ಮತ್ತು ಪ್ರೇಮ ವೈಫಲ್ಯಗಳೇ ಅನಾಹುತಗಳಿಗೆ ಕಾರಣವಾಗುತ್ತಿದ್ದು ಇದರಿಂದ ಹೊರಬರುವ ಪ್ರಯತ್ನ ಮಾಡಬೇಕು. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಅರ್ಥಮಾಡಿಕೊಂಡು ಭವಿಷ್ಯದ ಬದುಕಿನತ್ತ ಚಿಂತಿಸಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಲೇಖಕಿ ಬಾ.ಹ.ರಮಾಕುಮಾರಿ ಅವರು ಕ್ಷುಲ್ಲಕ ಕಾರಣಗಳಿಗೆ ಮನಸ್ತಾಪ ಮಾಡಿಕೊಳ್ಳುವ ಗೀಳು ಹದಿ ಹರೆಯದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ಜಾಲತಾಣಗಳು, ವಿವಿಧ ಮಾಧ್ಯಮಗಳ ದೃಶ್ಯಗಳು, ಅವುಗಳ ಅನುಕರಣೆ ಅಪಾಯಕಾರಿ ಪರಿಸ್ಥಿತಿಗೆ ತಂದೊಡ್ಡಬಹುದು. ಸವಾಲು ಸ್ವೀಕರಿಸುವ ಧೈರ್ಯಗಾರಿಕೆ ಹಾಗೂ ಭಾವನೆಗಳನ್ನು ಇತರ ಆತ್ಮೀಯರಲ್ಲಿ ಹಂಚಿಕೊಳ್ಳುವ ಮನಸ್ಸು ಮಾಡಿದಾಗ ಕೆಲವು ಅತಿರೇಕಗಳನ್ನು ತಪ್ಪಿಸಬಹುದು ಎಂದರು.
ಮಹಿಳಾ ಇಲಾಖೆ ಅಭಿವೃದ್ದಿ ಅಧಿಕಾರಿ ಆರ್.ಜೆ,ಪವಿತ್ರ ಮುಖ್ಯ ಅತಿಥಿಗಳಾಗಿ ಮಾತನಾಡಿ ತಂದೆ ತಾಯಿ ಕಷ್ಟಪಟ್ಟು ದುಡಿದು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾರೆ. ಚೆನ್ನಾಗಿ ಓದಿ ಸಮಾಜದಲ್ಲಿ ಉತ್ತಮ ವ್ಯಕಿಯಾಗಲಿ ಎಂದು ಹಂಬಲಿಸುತ್ತಾರೆ. ಅವರ ಆಸೆಗಳನ್ನು ನೆರವೇರಿಸುವ ಕಡೆಗೆ ವಿದ್ಯಾರ್ಥಿಗಳು ಮುಂದಾಗಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದು ಸತ್ಪ್ರಜೆಗಳಾಗಬೇಕೆಂದು ಕರೆ ನೀಡಿದರು.
ಪ್ರಾಂಶುಪಾಲ ರಾಜಕುಮಾರ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಅರಿವು ಕಾರ್ಯಕ್ರಮಗಳಿಂದ ಮಕ್ಕಳು ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತವೆ. ಬದುಕು ಹಸನಾಗಿಸಿಕೊಳ್ಳುವ ಕಡೆಗೆ ಹೆಚ್ಚು ಗಮನಹರಿಸಿ ಎಂದು ಕರೆ ನೀಡಿದರು.
ಪಾರ್ವತಮ್ಮ, ಗಂಗಲಕ್ಷ್ಮಿ ಮತ್ತು ಹೇಮಾ ಅವರ ತಂಡ ಜಾಗೃತಿ ಗೀತೆಗಳನ್ನು ಹಾಡಿದರು. ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ದಸ್ತಗಿರ್ ವಂದಿಸಿದರು. ರಾಜೇಶ್ವರಿ ಚಂದ್ರಶೇಖರ್, ಎ.ಎನ್. ಸವಿತಾ, ಉಪನ್ಯಾಸಕರುಗಳಾದ ಆರಿಫ್ ಮೊಹಮದ್, ಎನ್.ಎಸ್.ಎಸ್ ಅಧಿಕಾರಿ ನಾಗರಾಜು ಮೊದಲಾದವರು ಉಪಸ್ಥಿತರಿದ್ದರು.