
ತುಮಕೂರು: ಉಡುಪಿಯಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರಮೋದಿ ಅವರಿಗೆ ಸಂಘಟಕರು ಗೌರವಿಸಿ ತೊಡಿಸಿದ ವಿಶೇಷ ಮೈಸೂರು ಪೇಟ ಸಾರ್ವಜನಿಕರ ಗಮನ ಸೆಳೆದು ಪ್ರಶಂಸೆಗೊಳಪಟ್ಟಿತ್ತು. ಅದಕ್ಕೆ ಕಾರಣ ಮೈಸೂರು ಪೇಟದಲ್ಲಿ ಬಳಸಲಾಗಿದ್ದ ಅಲಂಕೃತ ಮುತ್ತಿನ ಮಣಿ, ವಿಶೇಷ ಜರಿ ಹಾಗೂ ನವಿಲುಗರಿಯ ಅಲಂಕಾರ.
ಮತ್ತೊಂದು ವಿಶೇಷವೆಂದರೆ ಗೌರವ ಸ್ವೀಕರಿಸಿದ್ದ ಪ್ರಧಾನಿ ನರೇಂದ್ರಮೋದಿಯವರು ಕಾರ್ಯಕ್ರಮ ಮುಗಿಯುವವರೆಗೂ ಈ ವಿಶೇಷ ಮೈಸೂರು ಪೇಟವನ್ನು ಧರಿಸಿದ್ದು ಸಾರ್ವಜಿಕರ ಗಮನ ಸೆಳೆಯಲು ಮತ್ತೊಂದು ಕಾರಣವಾಗಿತ್ತು.
ಈ ವಿಶೇಷ ಪ್ರಶಂಸೆಗೆ ಭಾಜರಾದವರು ತುಮಕೂರಿನ ಕುಶಲಕರ್ಮಿ ಉಷಾ ಭಾಸ್ಕರ್ ವಿಶ್ವಕರ್ಮ ಎಂಬುದು ತುಮಕೂರಿನ ಹೆಮ್ಮೆ.
ತುಮಕೂರು ಜಿಲ್ಲೆ ಅನೇಕ ವಿಶೇಷತೆಗಳಿಂದ ಕೂಡಿದ ವೈವಿದ್ಯತೆಯಿಂದ ಕೂಡಿದ ಜಿಲ್ಲೆ ಎಂಬುದು ಈಗಾಗಲೇ ಜಗಜ್ಜಾಹೀರು. ಸಿದ್ದಗಂಗೆ ಪುಣ್ಯ ಕ್ಷೇತ್ರ, ವಿದ್ಯಾಸಂಸ್ಥೆಗಳಿಂದ ಕೂಡಿದ ವಿದ್ಯಾಕಾಶಿ, ಅನೇಕ ಪಾರಂಪಣಿಕ ತಾಣಗಳನ್ನು ಹೊಂದಿರುವ ಐತಿಹಾಸಿಕ ಕೋಟೆ ಕೊತ್ತಲಗಳ ನಾಡು, ಕಲ್ಪತರು ಬೀಡು, ಕೈಗಾರಿಕೆ, ಉದ್ಯಮಗಳ ವಲಯ ಹೀಗೆ ಅನೇಕ ವಿಶೇಷತೆಗಳನ್ನು ಹೊಂದಿದೆ.

ಅಂತೆಯೇ ಹಲವು ವಿಶೇಷತೆಗಳಿಂದ ಆಗಾಗ ಗಮನ ಸೆಳೆಯುವುದೂ ಉಂಟು. ಈ ಹಿಂದೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತರ ಮುಡಿಗೇರಿದ್ದ ಕಿರೀಟ ತುಮಕೂರಿನಲ್ಲಿ ತಯಾರಿಸಲಾಗಿದ್ದು ಎಂಬ ಸುದ್ದಿಯೂ ಪ್ರಚಲಿತಲಿತ್ತು. ಅಮರಶಿಲ್ಪಿ ಜಕಣಾಚಾರಿಯವರ ಊರಿನಲ್ಲಿ ಕುಶಲತೆಗೆ ಕೊರತೆ ಇಲ್ಲವೆಂಬಂತೆ ಮತ್ತೊಂದು ತುಮಕೂರಿನ ಪ್ರತಿಭೆ ತಯಾರಿಸಿದ ವಿಶೇಷ ಮೈಸೂರು ಪೇಟ ಉಡುಪಿಯ ಕೃಷ್ಣಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿಯ ಮುಡಿಗೇರಿದ್ದು ಹೆಮ್ಮೆಯೇ ಸರಿ.
ಉಡುಪಿಯ ಪರ್ಯಾಯ ಪುತ್ತಿಗೆ ಮಠದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವಿಸಲಾಗಿತ್ತು. ಈ ಕಾರ್ಯಕ್ರಮ ಸಲುವಾಗಿ ಹೂವಿನ ಅಲಂಕಾರದ ಜವಾಬ್ದಾರಿಯನ್ನು ಉಡುಪಿಯ ವಿಷ್ಣು ಫ್ಲವರ್ ಡೆಕೋರೇಷನ್ ಅವರಿಗೆ ವಹಿಸಲಾಗಿತ್ತು. ಅವರಿಂದ ತುಮಕೂರಿನ ಎಸ್ಎಲ್ಎನ್ ಫ್ಲವರ್ ಡೆಕೋರೇಷನ್ನ ಯೋಗನಂದ ಅವರು ಹೂವಿನ ಸರಬರಾಜಿನ ಉಪ ಗುತ್ತಿಗೆ ವಹಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಗೌರವಿಸಲು ವಿಶೇಷ ಪೇಟ ಅವಶ್ಯವಿದ್ದು ಇದನ್ನು ಮಾಡಿಕೊಡುವಂತೆ ಉಷಾ ಭಾಸ್ಕರ್ ಅವರಿಗೆ ಯೋಗನಂದ ಅವರು ತಿಳಿಸಿದ್ದರು. ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಪೇಟ, ಬಾಸಿಂಗ, ಚತ್ರಿ ಚಾಮರ, ಕೊಬ್ಬರಿಯ ಕೆತ್ತನೆ ಕುಸುರಿಯ ಕೌಶಲ್ಯ ಹೊಂದಿದ್ದ ಉಷಾ ಅವರು ಈ ಅವಕಾಶವನ್ನು ಸ್ವೀಕರಿಸಿದರು.
ಮನೆಯಲ್ಲಿ ತಮ್ಮ ಕುಟುಂಬದ ಕಸುಬು ಕೂಡ ಕುಸುರಿ ಕಎಲಸವೇ ಆಗಿದ್ದರಿಂದ ಕಲೆ ರಕ್ತವಾಗಿ ಬಂದಿದೆ. ಆದರೆ ತಾವಿನ್ನೂ ಅಷ್ಟು ಪರಿಪಕ್ವವಾಗಿ ಕಲೆಯನ್ನು ಕಲಿತಿಲ್ಲ. ಆದರೆ ಬಾಲ್ಯ ಸ್ನೇಹಿತರೂ ಆದ ಎಸ್ಎಲ್ಎನ್ ಫ್ಲವರ್ ಡೆಕೋರೇಟರ್ಸ್ನ ಯೋಗನಂದ ಅವರು ತಿಳಿಸಿದಂತೆ ಮೋದಿಯವರಿಗೆ ತೊಡಿಸಲು ಪೇಟ ಮಾಡಿಕೊಡಲು ಒಪ್ಪಿ ತುಮಕೂರಿನ ಹಲವಾರು ಅಂಗಡಿಗಳನ್ನು ಸಂಪರ್ಕಿಸಿ ಮಣಿ, ಜರಿ ಸಂಗ್ರಹಿಸಿ ಉತ್ತಮ ಪೇಟ ತಯಾರಿಸಿ ಉಡುಪಿಗೆ ಕಳಿಸಿದ್ದೆ. ಪೇಟವನ್ನು ನವಿಲುಗರಿ ಹಾಗೂ ಮುತ್ತಿನ ಮಣಿಗಳಿಂದ ಅಲಂಕಾರ ಮಾಡಿದ್ದು ವಿಶೇಷ ಆಕರ್ಷಣೆಗೆ ಕಾರಣವಾಗಿತ್ತು ಎನ್ನುತ್ತಾರೆ ಉಷಾ ಭಾಸ್ಕರ್ ಅವರು.
ಪೇಟ ಸಿದ್ಧಪಡಿಸಿ ಕಳಿಸಿದ ನಂತರ ಉಡುಪಿ ಮಠದಿಂದ ತಾವಲ್ಲದೆ ಇನ್ನೂ ಐದಾರು ಜನರಿಗೆ ಪೇಟ ಮಾಡಲು ತಿಳಿಸಿರುವ ಬಗ್ಗೆ ತಿಳಿದು ತಮ್ಮಪೇಟ ಆಯ್ಕೆಯಾಗುವುದೋ ಇಲ್ಲವೋ ಎಂಬ ಗೊಂದಲದಲ್ಲಿದ್ದೆ. ಆದರೆ ಕಾರ್ಯಕ್ರಮದ ದಿನ ತಾವು ಟಿವಿಯಲ್ಲಿ ನೋಡಿದಾಗ ತಾವು ಮಾಡಿದ ಪೇಟವನ್ನೇ ಪ್ರಧಾನಿಯವರಿಗೆ ತೊಡಿಸಿದ್ದು ಖುಷಿ ತಂದಿತು. ನಂತರ ಹಲವರಿಂದ ತಮ್ಮ ಕೌಶಲ್ಯದ ಬಗ್ಗೆ ಪ್ರಶಂಸೆಯೂ ಬಂದಿತು ಎಂದು ಉಷಾ ಭಾಸ್ಕರ್ ಅವರು ಖುಷಿಯಿಂದ ಹೇಳುತ್ತಾರೆ.
ಸದ್ಯ ಹವ್ಯಾಸವಾಗಿ ಕುಟುಂಬದ ಬಿಡುವಿನಲ್ಲಿ ಇಂತಹ ಕುಶಲ ಕೆಲಸಗಳನ್ನು ಮಾಡುತ್ತಿದ್ದೆ ಮುಂದಿನ ದಿನಗಳಲ್ಲಿ ಸರ್ಕಾರಗಳ ಸೌಲಭ್ಯಗಳ್ನು ಬಳಸಿಕೊಂಡು ಸಣ್ಣ ಉದ್ಯಮ ಆರಂಭಿಸುವ ಉದ್ದೇಶವಿದೆ ಎಂದು ಹೇಳುವ ಉಷಾ ಭಾಸ್ಕರ್ ಅವರ ವೃತ್ತಿಜೀವನ ಮತ್ತಷ್ಟು ಉತ್ತಮವಾಗಲಿ ಎಂದು ಆಶಿಸೋಣ.