
“ಯಾ ಮತ್” ಅಂದ್ರೆ ಬಂದು ಹತ್ತಿರ ನಿಲ್ತಾನೆ ಸಾರ್.. “ಗದೆ ಸಲಾಂ” ಅಂದ್ರೆ ಸೊಂಡಿಲು ಎತ್ತಿ ಮೇಲೆ ಮಾಡ್ತಾನೆ.. “ಸೋಲ್” ಅಂದ್ರೆ ಕಾಲು ಎತ್ತುತ್ತಾನೆ.. ಬೈಟ್ ಅಂದ್ರೆ ಕೂತ್ಕೋತಾನೆ.. ಭಾರಿ ತುಂಟ.. ಮದ ಏರಿದಾಗ ಎಲ್ಲೆಲ್ಲೋ ಹೋಗಿಬಿಡ್ತಾನೆ.. ನಾನು ರಾತ್ರಿ ಎಲ್ಲಾ ನಿದ್ದೆಗೆಟ್ಟು ಹುಡುಕಿಕೊಂಡು ಬರ್ಬೇಕು. ಬ್ರಶ್’ನಲ್ಲಿ ಉಜ್ಜಿ ಸ್ನಾನ ಮಾಡಿಸಿದ್ರೆ ಹಾಯಾಗಿ ಮಲಗಿ ಬಿಡ್ತಾನೆ.. ನನ್ ಕಂದ ಸಾರ್ ಇವನು.. ನನ್ ರಾಜ.. ಓದು-ಗೀದು ಹತ್ತಿಲ್ಲ ಸಾರ್.. ಆನೆ ನೋಡಿಕೊಳ್ಳೋದೇ ಖುಷಿ..
ಹೀಗೆ.. ಅರ್ಜುನನ ಬಗ್ಗೆ ಹೇಳುತ್ತಾ ಹೋದ.. ಮನೆ ಮಗನಂತೆ ಕೂಸನ್ನು ನೋಡಿಕೊಂಡಿದ್ದ ಮಾವುತ ವಿನು ಮಾತನಾಡುತ್ತಿದ್ದಂತೆ ಎದೆ ಉಬ್ಬಿ ಬಂದಿತ್ತು..
ಹ್ಯಾಂಡ್ ಪೋಸ್ಟಿನಲ್ಲಿ ಇಳಿದು.. ನಾಗರಹೊಳೆ ಒಳಗೆ ಸುಮಾರು 50 ಕಿಲೋ ಮೀಟರ್ ಸಾಗಿದರೆ ಸಿಗುವುದೇ ಬಳ್ಳೆ ಗ್ರಾಮ..
2021ರಲ್ಲಿ ಇದೇ ಬಳ್ಳೆ ಸಾಕಾನೆ ಕ್ಯಾಂಪಿನಲ್ಲಿ ಸಂಕ್ರಾಂತಿಗೂ ಮುನ್ನವೇ ಜನ ಸಿಹಿ ಹಂಚಲು ಶುರು ಮಾಡಿದ್ರು. ಹಲವು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ.. ತಾಯಿ ಚಾಮುಂಡಿಯನ್ನು ಬೆನ್ನ ಮೇಲೆ ಹೊತ್ತು ಸಾಗಿದ್ದ ಅರ್ಜುನ ಎಂಬ ಅರವತ್ತು ದಾಟಿದ ಮುದ್ದಾದ ಕೂಸು ಬಳ್ಳೆ ಶಿಬಿರಕ್ಕೆ ಬರುವುದರಲ್ಲಿತ್ತು..
ಅರ್ಜುನ ಬಂದವನೇ.. ಖುಷಿ ಸುದ್ದಿ ಕೊಟ್ಟುಬಿಟ್ಟ.. ಅಪ್ಪನಾಗುವ ಮೂಲಕ ಮುಂದಿನ ಉತ್ತರಾಧಿಕಾರಿಯ ಆಗಮನದ ಬಗ್ಗೆ ಜಗತ್ತಿಗೇ ಸಾರಿ ಹೇಳಿದ್ದ.. ಅರ್ಜುನನ ಹೆಂಡತಿ ದುರ್ಗಾಪರಮೇಶ್ವರಿ.. ಅದೇ ಶಿಬಿರದಲ್ಲಿದ್ದ ಹೆಣ್ಣಾನೆ.
ಎಷ್ಟಾದರೂ ಅರ್ಜುನ ಅಪ್ಪನಾಗುತ್ತಿದ್ದಾನೆ ಅಂದ್ರೆ ಸುಮ್ನೇನಾ.. ಅವನ ಹೆಂಡತಿಯನ್ನು ಅತ್ಯಂತ ಜತನದಿಂದ ನೋಡಿಕೊಳ್ತಿದ್ರು. ದುರ್ಗಾಪರಮೇಶ್ವರಿಗೆ ಬೇಕಾದ ಆಹಾರ ಕೊಟ್ಟು ಸುಖಪ್ರಸವವಾಗಲಿ ಎಂದು ಕಾವಾಡಿಗರು, ಮಾವುತರು ತಾಯಿ ಚಾಮುಂಡೇಶ್ವರಿಯಲ್ಲಿ ಹರಕೆ ಹೊತ್ತಿದ್ರು. ಆದ್ರೆ ದುರ್ವಿಧಿ.. ಇನ್ಫೆಕ್ಷನ್’ಗೆ ತುತ್ತಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದುರ್ಗಾಪರಮೇಶ್ವರಿ ತೀರಿ ಹೋದ್ಲು.. ಅಲ್ಲಿಗೆ.. ಹೆಂಡತಿ ಮಗುವನ್ನು ಕಳೆದುಕೊಂಡ ಅರ್ಜುನ ಅನಾಥವಾದ..
64 ವಯಸ್ಸು ದಾಟಿದ್ದ ಅರ್ಜುನ.. ನೋವನ್ನೆಲ್ಲ ನುಂಗಿ.. ನಿವೃತ್ತಿಯಾಗಿ..ಚಂದವಾಗಿದ್ದ. ಕಳೆದ ವಾರವೇ ಕ್ಯಾಂಪಿಗೆ ತೆರಳಲು ಕಾಯುತ್ತಿದ್ದ. ಆದರೆ.. ಶಿಬಿರಕ್ಕೆ ವಾಪಾಸ್ ಕಳಿಸದೇ ಆರು ಆನೆಗಳ ಜೊತೆಗೆ ಅವನನ್ನೂ ಅಲ್ಲಿಯೇ ಉಳಿಸಿಕೊಂಡುಬಿಟ್ರು..ಅಲ್ಲೇ ಆಗಿದ್ದು ಎಡವಟ್ಟು..
64ರ ಮಗು ಅರ್ಜುನ ದಣಿದಿದ್ದ.. ಅಂಥ ಕೂಸನ್ನು ದೈತ್ಯ ಕಾಡಾನೆ ಸೆರೆ ಹಿಡಿಯಲು ಒತ್ತಾಯವಾಗಿ ಬಳಸಿ ಸಾಯಿಸಿಬಿಟ್ರು.
ಇತ್ತೀಚೆಗೆ ಎರಡು ಸಾಕಾನೆಗಳನ್ನು ಮಹಾರಾಷ್ಟ್ರಕ್ಕೆ ಮಾರಿಬಿಟ್ರು.. ಅದರಲ್ಲೊಬ್ಬ “ಭೀಮ”. ಅವನಿದ್ದಿದ್ದರೆ ಅರ್ಜುನನ ಬದಲಾಗಿ ಅವನೇ ಮೊನ್ನೆಯ ಕಾರ್ಯಾಚರಣೆಯಲ್ಲಿ ಬಳಕೆ ಆಗುತ್ತಿದ್ದ.
ಅರ್ಜುನನ ದೇಹ ಸ್ಥಿತಿ.. ವಯಸ್ಸು.. ಎಲ್ಲಾ ಗೊತ್ತಿದ್ದೂ.. ಅವನಿಗೇ ಗುಂಡು ಹೊಡೆದು ಮನುಷ್ಯರು ಅನ್ನುವ ಪರಮ ಪಾಪಿಗಳು ಮಾಡಿದ್ದು ಮಹಾ ಅನ್ಯಾಯ..
ದೊಡ್ಡ ದೊಡ್ಡ ಪಶು ವೈದ್ಯರಿದ್ದರೂ ಆಗ ತಾನೇ ತರಬೇತಿಯಲ್ಲಿದ್ದ ಅರೆ ಬೆಂದ ವೈದ್ಯನನ್ನು ಬಳಸಿದ್ದು ಇನ್ನೊಂದು ಘೋರ ಅಪರಾಧ.
ಮನುಷ್ಯನ ಘನಘೋರ ಸ್ವಾರ್ಥಕ್ಕೆ.. ಪರಮ ದಡ್ಡತನಕ್ಕೆ.. ತಪ್ಪು ನಿರ್ಧಾರಕ್ಕೆ ದೇವರಂಥ ಕೂಸೊಂದು ಇವತ್ತು ಪ್ರಾಣ ಕಳೆದುಕೊಂಡಿದೆ..
“ಎದ್ದೇಳೋ.. ನನ್ ಕಂದ..” ಎಂದು ಹೊರಳಾಡಿ ಚೀರಾಡಿದ ವಿನುವಿನಂಥ ಮಾವುತನಿಗೆ.. ಸಮಾಧಾನ ಹೇಳುವವರಿಲ್ಲ.. ಸೊಂಡಿಲಿಂದ ನೇವರಿಸಿ.. ಪ್ರೀತಿ ಕೊಡುವವರಿಲ್ಲ..
ಪ್ರತಿ ಪ್ರಾಣಿಯ ಕಂಗಳಲ್ಲೂ ದೇವರನ್ನೇ ಹುಡುಕುವ ನನ್ನಂಥವನಿಗೆ.. ವರ್ಷಗಳೇ ಕಳೆದರೂ ಈ ನೋವಿನಿಂದ ಹೊರಬರಲು ಆಗುವುದಿಲ್ಲ..
ಅದಕ್ಕೇ.. ದೊಡ್ಡವರು ಹೇಳಿದ್ದು.. ಪ್ರಾಣಿಗಳೇ ಗುಣದಲಿ ಮೇಲು.. ಮಾನವನದಕ್ಕಿಂತ ಕೀಳು..
ಕ್ಷಮಿಸು ಅರ್ಜುನ.. The system murdered you.
ಚಿದಾನಂದ ಶರ್ಮ.
Face Book ನಿಂದ.