ನನಗೆ ನೀಡುವ ಮತ ಮೋದಿ ಅವರಿಗೆ ನೀಡಿದ ಮತಗಳಾಗಲಿವೆ-ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ

ತುಮಕೂರು:ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿರುವ ನರೇಂದ್ರಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಪ್ರಪಂಚದ ದೊಡ್ಡ ದೊಡ್ಡ ನಾಯಕರು ಬಯಸುತ್ತಿದ್ದು,ನೀವು ನನಗೆ ನೀಡುವ ಮತ, ಮೋದಿ ಅವರಿಗೆ ನೀಡಿದ ಮತಗಳಾಗಲಿವೆ ಎಂದು ತುಮಕೂರು ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

ನಗರದ ಎಸ್.ಐ.ಟಿ. ಕಾಲೇಜು ಮುಂಭಾಗದಿಂದ ಗಂಗೋತ್ರಿ ರಸ್ತೆ, ಎಸ್.ಐ.ಟಿ. ಮುಖ್ಯ ರಸ್ತೆ,ಎಸ್.ಎಸ್.ಪುರಂ ರಸ್ತೆಯ ಮೂಲಕ ಭದ್ರಮ್ಮ ವೃತದವರೆಗೆ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಭಾಗವಹಿಸಿ, ಪ್ರಚಾರ ನಡೆಸಿದ ಅವರು,ಇದು ಸಿದ್ದರಾಮಯ್ಯನವರ ಗ್ಯಾರಂಟಿಗಳಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ, ದೇಶದ ಭದ್ರತೆಗಾಗಿ ನಡೆಯುತ್ತಿರುವ ಚುನಾವಣೆ ಎಂದರು.

ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂಬುದು ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇ ಗೌಡ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಅವರು ಸೂಚನೆಯಾಗಿತ್ತು.ಆದರಂತೆ ನಮ್ಮ ಪಕ್ಷದ ನಾಯಕರು ನನಗೆ ಟಿಕೇಟ್ ನೀಡಿದ್ದಾರೆ. ಸಿದ್ದಗಂಗಾ ಶ್ರೀಗಳು ಮತ್ತು ಆದಿಚುಂಚನಗಿರಿ ಸ್ವಾಮೀಜಿಗಳ ಆಶೀರ್ವಾದ ನನಗಿದೆ.ಅಲ್ಲದೆ ಇಂದು ಬೆಳಗ್ಗೆಯಿಂದ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಮಠಗಳಿಗೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ.ತುಮಕೂರು ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ದಿ ಪಡಿಸಲಿದ್ದೇನೆ ಎಂಬ ಭರವಸೆಯನ್ನು ಸೋಮಣ್ಣ ನೀಡಿದರು.

ತುಮಕೂರು ಬೆಂಗಳೂರಿಗೆ ಕೇವಲ 70 ಕಿ.ಮಿ.ದೂರದಲ್ಲಿದೆ.ಬೆಂಗಳೂರಿಗೆ ದೊರೆಯುವ ಎಲ್ಲಾ ಸೌಲಭ್ಯಗಳು ಇಲ್ಲಿಗೆ ಸಿಗಬೇಕಿದೆ.ಮೂರು ಬಾರಿ ತುಮಕೂರು ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಜಿಲ್ಲೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿದೆ.ಹಾಗಾಗಿ ನನ್ನ ಮೊದಲ ಆದ್ಯತೆ ಕುಡಿಯುವ ನೀರು,ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ,ಮೇಟ್ರೋ ವಿಸ್ತರಣೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಯೋಜನೆಗಳ ನಮ್ಮ ಕಣ್ಣಮುಂದಿವೆ.ಅವುಗಳನ್ನು ಜಾರಿಗೆ ತರುತ್ತೇವೆ ಎಂದರು.

ನಾನು ಹೊರಗಿನವನು ಎಂಬ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ.ಅವರಿಗಿಂತ ತುಮಕೂರು ಜಿಲ್ಲೆಯ ಪ್ರತಿ ಇಂಚು ಗೊತ್ತಿದೆ.ಒಂದು ಕಾಲದಲ್ಲಿ ತುಮಕೂರು ಎಷ್ಟಿತ್ತು. ಇಂದು ಎಷ್ಟಾಗಿದೆ.ಯಾರು ಹೊರಗಿನವರಲ್ಲ.ಗೋವಿಂದರಾಜ ನಗರ, ಬಿನ್ನಿಪೇಟೆ ರೀತಿಯಲ್ಲಿಯೇ ತುಮಕೂರು ಜಿಲ್ಲೆಯನ್ನು ಅಭಿವೃದ್ದಿ ಮಾಡಿ ತೋರಿಸುತ್ತೇನೆ.ನನ್ನ ಮೇಲೆ ನಂಬಿಕೆ ಇಡೀ ಎಂದು ಮತದಾರರಲ್ಲಿ ಮನವಿ ಮಾಡಿದರು.

ಶಾಸಕ ಬಿ.ಸುರೇಶಗೌಡ ಮಾತನಾಡಿ,ಈ ಬಾರಿಯ ಲೋಕಸಭೆಯಲ್ಲಿ ವಿ.ಸೋಮಣ್ಣ ಸೇರಿದಂತೆ ಭಾಜಪದ ಅಭ್ಯರ್ಥಿಗಳು ನೆಪಮಾತ್ರ.ನಮ್ಮೆಲ್ಲರ ಅಭ್ಯರ್ಥಿ ನರೇಂದ್ರಮೋದಿ.ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸುವುದೇ ನಮ್ಮ ಮುಂದಿರುವ ಗುರಿ.ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ದಿವಾಳಿಯಗಿದೆ.ನಾವೆಲ್ಲರೂ ಕೇವಲ ಕಾಗದದ ಮೇಲೆ ಶಾಸಕರಾಗಿದ್ದೇವೆ.ಒಂದು ನೈಯಾಪೈಸೆ ಅನುದಾನ ತರಲು ನಮ್ಮಿಂದ ಸಾಧ್ಯವಾಗಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ 2013ರ ಸಿದ್ದರಾಮಯ್ಯ ಅಲ್ಲ. ಶಾಸಕರನ್ನು ಸಮಾಧಾನ ಪಡಿಸಲು ಇನ್ನಿಲ್ಲದಂತೆ ಅಧಿಕಾರ ನೀಡಿ, ಸರಕಾರದ ಹಣವನ್ನು ಪೋಲು ಮಾಡುತಿದ್ದಾರೆ. ಈ ಸರಕಾರ ಲೋಕಸಭಾ ಚುನಾವಣೆಯ ನಂತರ ಉಳಿಯುವುದು ಕಷ್ಟ.ಹಾಗಾಗಿ ಜನರು ಬಿಜೆಪಿಗೆ ಮತ ನೀಡಿ, ದೇಶದ ಅಭಿವೃದ್ದಿಯಲ್ಲಿ ಪಾಲುದಾರರಾಗುವಂತೆ ಮನವಿ ಮಾಡಿದರು.

ಮೆರವಣಿಗೆಯಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ್,ಮಾಜಿ ಸಚಿವ ಭೈರತಿ ಬಸವರಾಜು, ಸಂಸದ ಜಿ.ಎಸ್.ಬಸವರಾಜು,ಶಾಸಕರಾದ ಜಿ.ಬಿ.ಜೋತಿಗಣೇಶ್, ಇಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಬ್ಯಾಟರಂಗೇಗೌಡ, ಶಿವಪ್ರಸಾದ್,ಚಿದಾನಂದಗೌಡ,ಬಿ.ಕೆ.ಮಂಜುನಾಥ್,ವೈ.ಹೆಚ್.ಹುಚ್ಚಯ್ಯ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *