ದೇಶದ ಚುಕ್ಕಾಣಿ ಹಿಡಿಯುವವರು ನರೇಂದ್ರ ಮೋದಿಯೋ-ರಾಹುಲ್ ಗಾಂಧಿಯೋ ಎದುರು ನೋಡುತ್ತಿರುವ ಜಗತ್ತು-ವಿ.ಸೋಮಣ್ಣ

ತುಮಕೂರು: ಹೊರ ದೇಶದವರು ಎನ್‍ಡಿಎ ಕೂಟದ ನರೇಂದ್ರ ಮೋದಿಯೋ ಅಥವಾ ಇಂಡಿಯಾ ಒಕ್ಕೂಟದ ರಾಹುಲ್ ಗಾಂಧಿಯೋ ಭಾರತದ ಚುಕ್ಕಾಣಿ ಹಿಡಿಯುವವರು ಯಾರು ಎಂಬುದನ್ನು ಎದುರು ನೋಡುತ್ತಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

ಸೋಮವಾರದ ನಗರದ ಪತ್ರಿಕಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ವಿ.ಸೋಮಣ್ಣ, ತುಮಕೂರು ಲೋಕಸಭಾ ಚುನಾವಣೆ ಸ್ಪರ್ಧೆ ನನಗೆ ಅನಿರೀಕ್ಷಿತವಾಗಿ ಸಿಕ್ಕ ಅವಕಾಶ ಪಕ್ಷ ಈ ಅವಕಾಶ ನೀಡಿದೆ. ಅನೇಕರು ಅನೇಕ ರೀತಿಯಲ್ಲಿ ಮಾತನಾಡಬಹುದು, 45 ವರ್ಷಗಳಿಂದ ರಾಜಕೀಯ ಜೀವನದಲ್ಲಿ ನಾನು ಮಾಡಿಕೊಂಡುಬಂದ ಕಾಯಕ, ಸಂಸ್ಕಾರ ಜೀವನ ತೆರೆದ ಕನ್ನಡಿ ಇದ್ದಂತೆ. ತುಮಕೂರು ಜಿಲ್ಲೆಯ ವಾತಾವರಣ ಅಸ್ತಿರಗೊಳಿಸಲು ನಾನು ಬಂದಿಲ್ಲ, ಅಸ್ತಿರಗೊಂಡಿರುವುದನ್ನು ಸುಸ್ತಿರಗೊಳಿಸಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡುವ ಆಶಯದೊಂದಿಗೆ ಬಂದಿದ್ದೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

ಈ ಚುನಾವಣೆ ದೇಶದ ಜವಾಬ್ದಾರಿ ನಿರ್ವಹಣೆ ನಿರ್ಧರಿಸುವ ಮಹತ್ವದ ಚುನಾವಣೆ. ಈ ದೇಶವನ್ನು ಯಾರು ಸಮರ್ಥವಾಗಿ ಮುನ್ನಡೆಸಬೇಕು, ಮುಂದಿನ ತಲೆಮಾರಿಗೂ ದೇಶವನ್ನು ಸುಭದ್ರವಾಗಿ ಕಾಪಾಡುವ ದೊಡ್ಡ ಸಂದೇಶ ನೀಡುವಂತಹ ಈ ಚುನಾವಣೆ ಬಗ್ಗೆ ಹೊರ ದೇಶದವರೂ ಕುತೂಹಲದಿಂದ ಗಮನಿಸುತ್ತಿದ್ದಾರೆ. ಎನ್‍ಡಿಎ ಕೂಟದ ನರೇಂದ್ರ ಮೋದಿ ಹಾಗೂ ‘ಇಂಡಿಯಾ’ ಒಕ್ಕೂಟದಿಂದ ರಾಹುಲ್ ಗಾಂಧಿಯೋ ಇನ್ಯಾರೂ ದೇಶದ ಆಡಳಿತ ಚುಕ್ಕಾಣಿ ಹಿಡಿಯಬೇಕು ಎನ್ನುವ ವಿಚಾರದಲ್ಲಿ ಇವರಲ್ಲಿ ಯಾರು ಸಮರ್ಥರು ಎಂದು ನಿಧರಿಸುವ ಚುನಾವಣೆ ಇದಾಗಿದೆ. ಆದರೆ ಜಗತ್ತು ಮೆಚ್ಚಿನ ನಾಯಕ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ, ಈ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನನ್ನು ಆಯ್ಕೆ ಮಾಡಿ ಮೋದಿಯವರ ಕೈ ಬಲಪಡಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‍ನವರು ನನ್ನನ್ನು ಹೊರಗಿನ ಅಭ್ಯರ್ಥಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರು ಇಂತಹ ಕ್ಷಲ್ಲಕ ರಾಜಕಾರಣ ಮಾಡಿಕೊಂಡೇ ಬಂದವರು. ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ, ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ, ರಾಹುಲ್ ಗಾಂಧಿ ವಯನಾಡಿನಲ್ಲಿ ಸ್ಪರ್ಧೆ ಮಾಡಲು ಯಾರು ಕರೆತಂದರು? ನಾನು ಪಕ್ಕದ ಜಿಲ್ಲೆಯವನಷ್ಟೇ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಬೆಂಗಳೂರು ಗ್ರಾಮಾಂತರ ಕ್ಷೇತ್ರದವರು, ಅವರು ಬೆಂಗಳೂರು ನಿವಾಸಿಯಲ್ಲವೆ? ಗೃಹ ಸಚಿವ ಡಾ.ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರದ ನಿವಾಸಿಯೆ? ಸಚಿವ ಕೆ.ಎನ್.ರಾಜಣ್ಣ ಮಧುಗಿರಿಯಲ್ಲಿ ವಾಸ ಮಾಡುತ್ತಿದ್ದಾರೆಯೆ? ನಾನೂ ತುಮಕೂರಿನಲ್ಲಿ ಮನೆ ಮಾಡಿ ವಾಸ ಮಾಡುತ್ತಿದ್ದೇನೆ ಎಂದು ವಿ.ಸೋಮಣ್ಣ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ತುಮಕೂರು ಜಿಲ್ಲೆಗೂ ನನಗೂ 35 ವರ್ಷಗಳ ಅವಿನಾಭಾವ ಸಂಬಂಧವಿದೆ. ನನ್ನ ಆರಾಧ್ಯ ದೈವ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಸೇವೆ ಮಾಡಿಕೊಂಡು ಬಂದಿದ್ದೇನೆ. ಆದಿಚುಂಚನಗಿರಿ ಸಂಸ್ಥಾನದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಪರಮ ಭಕ್ತ ನಾನು, ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿರುವ ನನಗೆ ಜಿಲ್ಲೆಯ ಸಮಗ್ರ ಪರಿಚಯವಿದೆ, ಇಲ್ಲಿನ ಸಮಸ್ಯೆಗಳು, ಅಗತ್ಯತೆಗಳ ಬಗ್ಗೆಯೂ ಗೊತ್ತಿದೆ ಎಂದರು.

ಯಾವುದೇ ಯೋಜನೆಗಳು ಕಾಗದದ ಮೇಲೆ ಉಳಿಯಬಾರದು, ಅವು ಸಕಾಲದಲ್ಲಿ ಕಾರ್ಯಗತಗೊಳ್ಳಬೇಕು ಎಂಬುದು ಈ ಸೋಮಣ್ಣನ ಆಶಯ, ಅನೇಕ ಯೋಜನೆಗಳು ಹಲವಾರು ವರ್ಷಗಳಿಂದ ಪೂರ್ಣಗೊಳ್ಳದೆ ಉಳಿದಿವೆ. ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ, ಇಂತಹ ಯೋಜನೆಗಳಿಗೆ ವೇಗ ನೀಡಿ ಮುಗಿಸುವುದು ನನ್ನ ಆದ್ಯತೆ. ಇದಲ್ಲದೆ, ಜಿಲ್ಲೆಯ ಹೆದ್ದಾರಿಗಳ ಅಭಿವೃದ್ಧಿ, ಗ್ರಾಮ ಪಂಚಾಯ್ತಿ, ಹೋಬಳಿ ಕೇಂದ್ರಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಉನ್ನತ ದರ್ಜೆಗೇರಿಸುವುದು, ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದು, ಆಸ್ಪತ್ರೆ, ಶಾಲಾ ಕಾಲೇಜುಗಳ ಸ್ಥಾಪನೆ, ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುವುದು ಮುಂತಾದ ಮೂಲಭೂತ ಬೇಡಿಕೆಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ.

ಚುನಾವಣೆಯಲ್ಲಿ ಕ್ಷೇತ್ರದ ಮತದರರು ಅಶೀರ್ವಾದ ಮಾಡಿ ನನ್ನನ್ನು ಲೋಕಸಭಾ ಸದಸ್ಯನನ್ನಾಗಿ ಆಯ್ಕೆ ಮಾಡಿದರೆ ಆರಂಭದ ಏಳೆಂಟು ತಿಂಗಳಲ್ಲೇ ಗಮನಾರ್ಹ ಕಾರ್ಯ ಮಾಡಿ ಜನರ ಮೆಚ್ಚುಗೆ ಗಳಿಸುತ್ತೇನೆ. ಇದು ನನ್ನ ಕಾರ್ಯವೈಖರಿ, ಈವರೆಗಿನ ನನ್ನ ಕ್ಷೇತ್ರಗಳಲ್ಲಿ ನನ್ನ ಕೆಲಸ ಸಾಕ್ಷಿಯಾಗಿವೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷ ಚಿ.ನಿ.ಪುರುಷೋತ್ತಮ್ ಅವರು ವಿ.ಸೋಮಣ್ಣ ಅವರಿಗೆ ಸಂವಿಧಾನ ಕೃತಿ ನೀಡಿ ಸ್ವಾಗತಿಸಿದರು, ಪತ್ರಕರ್ತರ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಸೋಮಣ್ಣರ ಗಮನಕ್ಕೆ ತಂದ ಅವರು, ಸಂಸದರಾಗಿ ಆಯ್ಕೆಯಾದರೆ ಈ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಶಾಸಕ ಸುರೇಶ್‍ಗೌಡ, ಜಿಲ್ಲಾ ಬಿಜೆಪಿ ಅಧÀ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಬಿಜೆಪಿ ಮುಖಂಡರಾದ ಎಸ್.ಪಿ.ಚಿದಾನಂದ್, ಅನಿಲ್‍ಕುಮಾರ್, ಎಸ್.ಶಿವಪ್ರಸಾದ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ರಾಷ್ಟ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್, ರಾಷ್ಟ್ರೀಯ ಮಂಡಳಿ ಸದಸ್ಯ ಶಾಂತರಾಜು, ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ, ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *