ತುಮಕೂರು: ರಾಜ್ಯದಲ್ಲಿ ಈ ವರ್ಷ 692 ರೈತರ ಆತ್ಮಹತ್ಯೆಯಾಗಿದೆ. ಸಾವಿನ ಸರಣಿ ಮುಂದುವರೆದಿದೆ. ಆದರೆ ಮೃತ ರೈತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡುವುದಿರಲಿ, ಯಾವ ಸಚಿವರೂ ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಸೌಜನ್ಯ ತೋರಲಿಲ್ಲ. ದಲಿತ ವರ್ಗದ ಹಣವನ್ನು ಲೂಟಿ ಮಾಡಿರುವ ಸರ್ಕಾರ ಮುಸಲ್ಮಾನರಿಗೆ ಹತ್ತು ಕೋಟಿ ರೂ. ನೀಡುವುದಾಗಿ ಹೇಳಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಸರ್ಕಾರ ಹಿಂದೂಗಳನ್ನು ಕಡೆಗಣಿಸಿದೆ. ರಾಜ್ಯದ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯನ್ನು ಮತಾಂಧರ ಕೈಗೆ ಕಾಂಗ್ರೆಸ್ ಕೊಟ್ಟಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ.ಗಳನ್ನು ಸಿದ್ದರಾಮಯ್ಯ ಸರ್ಕಾರ ಲೂಟಿ ಮಾಡಿದೆ. ಪಕ್ಷ ಕಟ್ಟಿದ ದಲಿತ ನಾಯಕ ಡಾ.ಪರಮೇಶ್ವರ ಅವರನ್ನು ಸೋಲಿಸಿ ಮುಖ್ಯಮಂತ್ರಿ ಆಗುವುದನ್ನು ತಡೆದದ್ದು ಕಾಂಗ್ರೆಸ್. ದಲಿತ ಶಾಸಕ ಕಾಂಗ್ರೆಸ್‍ನ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿಯಿಟ್ಟ ಮತಾಂಧರ ಬೆನ್ನಿಗೆ ನಿಂತು ಅವರ ಮೇಲಿನ ಕೇಸುಗಳನ್ನು ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮಗೆ ತಾವೇ ಭಾರತ ರತ್ನ ನೀಡಿಕೊಂಡ ನೆಹರೂ, ಇಂದಿರಾಗಾಂಧಿಯವರು ಬಾಬಾ ಸಾಹೇಬ್ ಅಂಬೇಡ್ಕರ್‍ರವರಿಗೆ ಭಾರತರತ್ನ ನೀಡಲಿಲ್ಲ ಎಂದು ಹೇಳಿದ್ದಾರೆ.
ದಲಿತರ ಮೇಲೆ ಹಲ್ಲೆಗಳಾದಾಗ ಕಾಂಗ್ರೆಸ್ ಬಾಯಿಬಿಡುವುದಿಲ್ಲ, ಬದಲಾಗಿ ಹಲ್ಲೆ ನಡೆಸಿದವರ ಪರವಾಗಿ ನಿಲ್ಲುತ್ತದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ದಲಿತ ಯುವಕನನ್ನು ಮತಾಂಧ ಕೊಲೆ ಮಾಡಿ 24 ಗಂಟೆ ಕಳೆದರೂ ಒಂದೇ ಒಂದು ಹೇಳಿಕೆ ನೀಡಿಲ್ಲ. ಅಲ್ಪಸಂಖ್ಯಾತರಿಗೆ ಸಾಲದ ಗ್ಯಾರಂಟಿ, ಯೋಜನೆ ಗ್ಯಾರಂಟಿ, ಮತಾಂಧರಿಗೆ ರಕ್ಷಣೆ ಗ್ಯಾರಂಟಿ, ಲವ್ ಜಿಹಾದ್ ಗ್ಯಾರಂಟಿ, ಗಲಭೆಕೋರರಿಗೆ, ಭಯೋತ್ಪಾದಕರಿಗೆ ಕೇಸು ರದ್ದು ಗ್ಯಾರಂಟಿ. ಇವು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಎಂದು ಟೀಕಿಸಿದ್ದಾರೆ.
ಈ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ. ತನ್ನದೇ ಪಕ್ಷದ ಚುನಾಯಿತ ಪ್ರತಿನಿಧಿಯ ಮಗಳಿಗೆ ಬದುಕಿನ ಗ್ಯಾರಂಟಿಯಿಲ್ಲ, ಸಾವಿಗೀಡಾದ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್, ಆರೋಪಿ ಫಯಾಜ್ ಮನೆಗೆ ಪೊಲೀಸ್ ಭದ್ರತೆ ಕೊಡುತ್ತದೆ. ಭಾಗ್ಯಲಕ್ಷ್ಮಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಕೈ ಸರ್ಕಾರ ರಾಜ್ಯದ ಲಕ್ಷ್ಮೀಯರ ಪ್ರಾಣಕ್ಕೆ ಕುತ್ತು ತಂದಿದೆ. ಕರ್ನಾಟಕದಲ್ಲಿ ಪರೀಕ್ಷೆ ಬರೆಯಲು ಬಂದ ಹಿಂದೂ ಹೆಣ್ಣುಮಕ್ಕಳ ಮಂಗಳಸೂತ್ರವನ್ನು ತೆಗೆಸುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂಗಳ ಬಗ್ಗೆ ತನಗಿರುವ ಧೋರಣೆ ವ್ಯಕ್ತಪಡಿಸಿದೆ ಎಂದು ರವಿಶಂಕರ್ ಹೆಬ್ಬಾಕ, ಟಿ.ಆರ್.ಸದಾಶಿವಯ್ಯ ಹೇಳಿದ್ದಾರೆ.