ತುಮಕೂರು:ದಲಿತ ಸಂಘರ್ಷ ಸಮಿತಿಯ ಆರಂಭದಿಂದಲೂ ಸಕ್ರಿಯವಾಗಿದ್ದ ಪಾರ್ಥಸಾರಥಿ ಚಳವಳಿಯಲ್ಲಿ ವಿಕಸಿತಗೊಂಡಿದ್ದ, ಪರಿಪೂರ್ಣ ಸಮಾಜದ ಬದಲಾವಣೆಯ ತುಡಿತ ಹೊಂದಿದ್ದ ಕ್ರಿಯಾಶೀಲ ಹೋರಾಟಗಾರ ಎಂದು ಚಿಂತಕ ಕೆ.ದೊರೈರಾಜು ಹೇಳಿದರು.
ನಗರದ ಐಎಂಎ ಸಭಾಂಗಣದಲ್ಲಿ ನಡೆದ ಒಳ ಮೀಸಲಾತಿ ಹೋರಾಟಗಾರ ದಿ.ಸಿ.ಎಸ್.ಪಾರ್ಥಸಾರಥಿರವರ ನುಡಿನಮನದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಸಂಕುಚಿತ ಮನೋಭಾವದ ವಿದ್ಯಾರ್ಥಿಯಾಗಿದ್ದ ಪಾರ್ಥ ಸಾರಥಿ, ಚಳವಳಿಯಿಂದ ವಿಸ್ತಾರವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು ಎಂದರು.
ನಿರ್ಲಕ್ಷಿತ ಸಮುದಾಯಗಳ ಮಕ್ಕಳಿಗಾಗಿ ಕಂಪ್ಯೂಟರ್ ಶಿಕ್ಷಣ ಪ್ರಾರಂಭಿಸಿದ್ದರು, ದೇವದಾಸಿ ಮಹಿಳೆಯರಿಗಾಗಿ ಮುಧೋಳದಲ್ಲಿ ಮಹಿಳಾ ಸ್ವಸಹಾಯ ಸಂಘವನ್ನು ಪ್ರಾರಂಭಿಸಲು ನೆರವಾಗಿದ್ದ, ನಿರುದ್ಯೋಗಿ ಯುವಕರಿಗೆ ಕೌಶಲ್ಯ ಕಲ್ಪಿಸಲು ಶ್ರಮಿಸುತ್ತಿದ್ದರು.ಪಾರ್ಥಸಾರಥಿ ಅವರಿಗಿದ್ದ ಸಮುದಾಯ ಕಳಕಳಿ ಬದ್ಧತೆ, ನಮ್ಮ ಸಮುದಾಯದ ರಾಜಕಾರಣಿಗಳಿಗೆ ಇದ್ದಿದ್ದರೆ ನಮ್ಮ ಸಮುದಾಯ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು, ಪಾರ್ಥ ಮಾಡಿದ ಕೆಲಸದಲ್ಲಿ ಒಂದರಷ್ಟು ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಮನವಿ ಮಾಡಿದರು.
ಹೈಕೋರ್ಟ್ ವಕೀಲರಾದ ಹೆಚ್.ವಿ.ಮಂಜುನಾಥ ಅವರು ಮಾತನಾಡಿ,ಹೋರಾಟದ ಚೈತನ್ಯ ಪಾರ್ಥ ಸಾರಥಿಯನ್ನು ಕಳೆದುಕೊಂಡಿದ್ದೆವು,ಸುಪ್ರೀಂ ಕೋರ್ಟ್ ವಕೀಲರಾದ ಸಂಜಯ್ ನೂಲಿ ಫೆÇೀನ್ ಮಾಡಿ ಏನಾಗಿತ್ತು ಎಂದು ವಿಚಾರಿಸಿದರು,ಯಾರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ನಂಬಿರಲಿಲ್ಲ, ತಳ ಸಮುದಾಯಗಳಿಗಾಗಿ ತುಮಕೂರಿನಿಂದ ಸುಪ್ರೀಂ ಕೋರ್ಟ್‍ವರೆಗೆ ಸಂಪರ್ಕವನ್ನು ಇಟ್ಟುಕೊಂಡಿದ್ದರು ಎಂದರು.

ಒಳ ಮೀಸಲಾತಿ, ಸಮುದಾಯದ ವಿಚಾರಕ್ಕಾಗಿ ಸಾಕಷ್ಟು ಭಾರೀ ನನ್ನೊಂದಿಗೆ ಪಾರ್ಥಸಾರಥಿ ಮಾತನಾಡುತ್ತಿದ್ದರು, ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ನೀಡಿ ತಳ ಸಮುದಾಯಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತೆಗೆದಿಟ್ಟು, ಹೋರಾಟವನ್ನು ರೂಪಿಸಿದ್ದರು, ಅವರಿಂದಲೇ ನಾನು ಸುಳ್ಳು ಜಾತಿ ಪ್ರಮಾಣಪತ್ರದ ಬಗ್ಗೆ ಮಾತನಾಡುವಂತೆ ಆಗಿದೆ ಎಂದರು.
ಸಮಾಜ ಕೊಳೆಯನ್ನು ತೊಳೆಯುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ ಪಾರ್ಥ ಸಾರಥಿ ಅಜ್ಞಾತ ಹೋರಾಟಗಾರ, ಮುಖ್ಯವಾಹಿನಿಯ ಹೋರಾಟಗಳಿಂದ ದೂರವಿದ್ದರು, ಚಳವಳಿಗಳ ಬೆನ್ನೆಲುಬಾಗಿ ನಿಂತಿದ್ದರು, ಬೌದ್ಧಿಕವಾಗಿ ದಲಿತ ಸಮುದಾಯದ ಹೋರಾಟದ ಕೆಂಡವನ್ನು ಆರದಂತೆ ನೋಡಿಕೊಂಡ ಧೀಮಂತ ವ್ಯಕ್ತಿತ್ವ ಎಂದರು.
ರೇμÉ್ಮ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಪಾರ್ಥಸಾರಥಿ ಅವರು ದಲಿತ ಹೋರಾಟದ ಮುಖ್ಯ ವೇದಿಕೆಯಲ್ಲಿ ಕೆಲಸ ಮಾಡಿದರು, ಬೀದಿ ಹೋರಾಟವನ್ನು ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ವರ್ಗೀಕರಣ ಮಾಡಿಸಿದ ರೂವಾರಿ, ಅವಕಾಶ ವಂಚಿತ ಸಮುದಾಯದ ಪರವಾಗಿ ಹಗಲು ರಾತ್ರಿ ಕೆಲಸ ಮಾಡಿದ ಹೋರಾಟಗಾರ ಎಂದು ಸ್ಮರಿಸಿದರು.
ಪ್ರತಿದಿನ ಸಮುದಾಯದ ಪರವಾಗಿ ತುಡಿಯುತ್ತಿದ್ದ, ದುಡಿಯುತ್ತಿದ್ದ ಪಾರ್ಥಸಾರಥಿ ಅವರಿಗೆ ಒಳ ಮೀಸಲಾತಿಯಿಂದ ಎಡ-ಬಲ ಸಮುದಾಯಗಳಿಗೆ ಅನುಕೂಲವಾಗಲಿದೆ, ಎರಡು ಸಮುದಾಯಗಳು ಒಂದಾಗದೇ ಹೋದರೆ ಅವಕಾಶಗಳು ಕುಂಠಿತವಾಗಲಿದೆ ಎಂದು ನಂಬಿ ಆರೋಗ್ಯವನ್ನು ಬದಿಗಿಟ್ಟು ಹೋರಾಟ ಮಾಡಿದರು.
ಸಮುದಾಯಕ್ಕಾಗಿ ಯಾವುದೇ ವಿಚಾರಧಾರೆಯುಳ್ಳ ಸಂಘ ಸಂಸ್ಥೆಗಳೊಂದಿಗೆ ಒಡನಾಟವನ್ನು ಇಟ್ಟುಕೊಂಡು ಸಮುದಾಯದ ಹಕ್ಕನ್ನು ಪ್ರತಿಪಾದಿಸಿ, ಸಮುದಾಯಕ್ಕಾಗಿ ದಕ್ಕಬೇಕಿರುವ ಸೌಲಭ್ಯವನ್ನು ಕಲ್ಪಿಸಲು ತೆರೆಮರೆಯಲ್ಲಿ ದುಡಿಯುತ್ತಿದ್ದ ಪಾರ್ಥ ಸಾರಥಿ ವೇದಿಕೆಗೆ ಬರುತ್ತಿರಲಿಲ್ಲ, ವೇದಿಕೆಯಿಂದ ದೂರ ಇರುತ್ತಲೇ ಹೋರಾಟಕ್ಕೆ ಅಗತ್ಯವಾದ ಮಾಹಿತಿಯನ್ನು ಒದಗಿಸುತ್ತಿದ್ದರು ಎಂದರು.
ಕುವೆಂಪು ವಿಶ್ವವಿದ್ಯಾಲಯದ ಪೆÇ್ರ.ಶಿವಾನಂದ ಕೆಳಗಿನಮನಿ ಮಾತನಾಡಿ,ವಿಶ್ವವಿದ್ಯಾಲಯಗಳಲ್ಲಿ ಇರುವವರು ಸಮುದಾಯ, ಹೋರಾಟದಿಂದ ದೂರ ಇರುತ್ತಾರೆ ಆದರೆ ಇವರೊಂದಿಗಿನ ಒಡನಾಟ ನನ್ನ ವ್ಯಕ್ತಿತ್ವ ಬದಲಾಗಲು ಕಾರಣವಾಯಿತು, ಇಡೀ ಭಾರತದಲ್ಲಿ ಮಾತಂಗ ಸಮುದಾಯ ನೆಲೆಯನ್ನು ಸುದೀರ್ಘವಾಗಿ ಅಧ್ಯಯನ ಮಾಡಿದ್ದರು.ವೈಯಕ್ತಿಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮುದಾಯಕ್ಕಾಗಿ ದುಡಿದ ಪಾರ್ಥಸಾರಥಿ ಅವರು, ವಿಶ್ವವಿದ್ಯಾಲಯಗಳಿಂದ ಉನ್ನತ ಹುದ್ದೆಗಳವರಿಗೆ ನನ್ನ ಸಮುದಾಯದವರು ಇರಬೇಕು ಎಂದು ಆಲೋಚಿಸುತ್ತಿದ್ದರು, ಅವರ ಪ್ರಾಮಾಣಿಕ ಸಮುದಾಯದ ಸೇವೆಯಿಂದ ಉನ್ನತ ಅಧಿಕಾರಿಗಳು, ರಾಜಕಾರಣಿಗಳ ಸಂಪರ್ಕ ಹೊಂದಿದ್ದರು ಸಹ ತನಗಾಗಿ ಏನು ಮಾಡಿಕೊಳ್ಳಲಿಲ್ಲ ಎಂದು ಸ್ಮರಿಸಿದರು.
ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಪಾರ್ಥಸಾರಥಿ ಅವರಿಗಿದ್ದ ಸಮುದಾಯದ ಕಾಳಜಿ ಬೇರೆ ಹೋರಾಟಗಾರರಲ್ಲಿ ಕಾಣಲಿಲ್ಲ,ರಾಜಕಾರಣಿಗಳಂತೆ ಸಮುದಾಯಕ್ಕಾಗಿ 24 ಗಂಟೆ ಆಲೋಚಿಸುತ್ತಿದ್ದ ವ್ಯಕ್ತಿ, ಸಮುದಾಯ ದವರಿಗಾಗಿ ಹಗಲು ರಾತ್ರಿ ಕಳಕಳಿಯಿಂದ ಕೆಲಸ ಮಾಡುತ್ತಿದ್ದ ಅದಮ್ಯ ಉತ್ಸಾಹ ಹೊಂದಿದ್ದ ವ್ಯಕ್ತಿ ಇಷ್ಟು ಬೇಗ ನಮ್ಮನ್ನು ಅಗಲಿರುವುದು ಸಮುದಾಯಕ್ಕೆ ಆಗಿರುವ ನಷ್ಟ.ಒಳಮೀಸಲಾತಿಗಾಗಿ,ಸಮುದಾಯಕ್ಕಾಗಿ ಆರೋಗ್ಯವನ್ನು ಬದಿಗಿಟ್ಟು ಹೋರಾಟ ಮಾಡಿದ್ದರಿಂದ ಅವರು ಇಷ್ಟು ಬೇಗ ನಮ್ಮನ್ನು ಅಗಲಿದರು, ಈಗ ಹೋರಾಟಕ್ಕಿಂತಲೂ ಚೀರಾಟ ಜಾಸ್ತಿ ಆಗಿದೆ, ಪಾರ್ಥಸಾರಥಿ ಚೀರಾಟ ಮಾಡದೇ ಸಮುದಾಯಕ್ಕಾಗಿ ಹೋರಾಡಿದ ಧೀಮಂತ ಹೋರಾಟಗಾರ ಎಂದು ಸ್ಮರಿಸಿದರು.