ತುಮಕೂರು : ತೃತೀಯ ಲಿಂಗಿಗಳಿಗೂ ದೇಶದ ಸಂವಿಧಾನದ ಆಶಯದಂತೆ ಸಮಾನ ಹಕ್ಕು-ಅವಕಾಶಗಳು ದೊರೆಯಬೇಕೆಂದು ವಿಹಾನ್ ಪ್ರತಿಪಾದಿಸಿದರು.
ಅವರಿಂದು ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚಣೆಯಲ್ಲಿ ದಿಕ್ಸೂಚಿ ಮಾತುಗಳನ್ನಾಡುತ್ತಿದ್ದರು.
ಸಮಾಜದಲ್ಲಿ ಹೆಣ್ಣು ಮತ್ತು ತೃತೀಯ ಲಿಂಗಿಗಳನ್ನು ತಾರತಮ್ಯದಿಂದ ನೋಡುವುದನ್ನು ತಡೆಗಟ್ಟಲು ಸಂವಿಧಾನದ ಆಶಯದಂತೆ ಸಮಾನ ಹಕ್ಕುಗಳು ಮತ್ತು ಆಸ್ತಿ ಹಕ್ಕು ದೊರೆತಾಗ ಮಾತ್ರ ಸಾಧ್ಯ, ಈ ಹಿನ್ನಲೆಯಲ್ಲಿ ಮಹಿಳೆಯರು ಹೆಚ್ಚು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದರು.
ಹಿಂಸೆ ಮತ್ತು ತಾರತಮ್ಯವು ಜಾತಿ ಮತ್ತು ಲಿಂಗಗಳಿಗಷ್ಠೇ ಸೀಮಿತವಾಗಿರದೆ ಮಹಿಳೆಯರಿಗೆ ಹೆಚ್ಚು ಆಗುತ್ತಿದ್ದು, ತೃತೀಯ ಲಿಂಗಿಗಳಿಗೆ ಸಾಮಾಜಿಕ ಭದ್ರತೆಯು ಇರುವುದಿಲ್ಲ, ಅಲ್ಲದೆ ಅವರಿಗೆ ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್ ಪಡೆದುಕೊಳ್ಳಲು ಸಹ ಆಗುತ್ತಿಲ್ಲ, ಏಕೆಂದರೆ ಅವರಿಗೆ ಯಾರೂ ವಾಸಕ್ಕೆ ಮನೆಯನ್ನೂ ನೀಡುತ್ತಿಲ್ಲ, ಇವರ ಬದುಕೇ ಕ್ಲಿಷ್ಟಕರ ಸಮಸ್ಯೆಗಳಿಂದ ಕೂಡಿದ್ದು, ಅವರೂ ಈ ಸಾಮಾಜದಲ್ಲಿ ಬದಕಲು ಅರ್ಹರು ಎಂದು ಅವರಿಗೆ ಸಂವಿಧಾನಿಕ ಹಕ್ಕುಗಳು ದೊರೆಯಬೇಕಿದೆ ಎಂದರು.
ನಾನು ಹೆಣ್ಣಾಗಿ ಹುಟ್ಟದರೂ ನನ್ನಲ್ಲಿ ಪುರುಷ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಗಂಡಾಂಗಿ ಪರಿವರ್ತನೆಗೊಳ್ಳಬೇಕಾಯಿತು, ಇದು ನನ್ನ ತಪ್ಪಲ್ಲ, ನನ್ನಲ್ಲಿನ ದೈಹಿಕ ಬದಲಾವಣೆಯು ಪ್ರಾಕೃತಿಕವಾದದ್ದು, ಇದನ್ನು ಅರ್ಥ ಮಾಡಿಕೊಳ್ಳದೆ ನಮ್ಮನ್ನು ಸಮಾಜದಿಂದ ದೂರವಿಡುವುದು ಎಷ್ಟು ಸರಿ, ನಮಗೂ ಎಲ್ಲರಿಗೂ ಸಿಗುವಂತಹ ಮೂಲಭೂತ ಸೌಕರ್ಯಗಳು ಸಿಗಬೇಕಿದೆ ಎಂದರು.
ಗೋಷ್ಠಿಯಲ್ಲಿ ಡಾ.ಗೀತಾವಸಂತ, ಡಾ.ಜ್ಯೋತಿ, ಡಾ.ಕೆ.ಎಸ್.ಗಿರಿಜಾ ಮತ್ತು ತನುಜಾ ಮಾತನಾಡಿದರು. ಎನ್.ಇಂದಿರಮ್ಮ ಅಧ್ಯಕ್ಷತೆ ವಹಿಸಿದ್ದರು.