ತುಮಕೂರು- ನಗರದ ವಿನಾಯಕನಗರದ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ 49ನೇ ವರ್ಷದ 28 ದಿನಗಳ ದೃಶ್ಯಾವಳಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಆ. 27 ರಂದು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷ ಹೆಚ್.ಆರ್.ನಾಗೇಶ್ ಹಾಗೂ ಉಪಾಧ್ಯಕ್ಷ ಟಿ.ಹೆಚ್.ಪ್ರಸನ್ನಕುಮಾರ್ ತಿಳಿಸಿದರು.

ನಗರದ ವಿನಾಯಕ ಪೆಂಡಾಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು. ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಹಾದ್ವಾರದ ಉದ್ಘಾಟನೆ ನೆರವೇರಿಸುವರು. ಕೇಂದ್ರ ಸಚಿವ ವಿ.ಸೋಮಣ್ಣ ದೃಶ್ಯಾವಳಿ ಉದ್ಘಾಟಿಸುವರು. ಜಿಲ್ಲಾ ಸಚಿವ ಡಾ. ಜಿ. ಪರಮೇಶ್ವರ್, ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡುವರು ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೆÇಲೀಸ್ ಮುಖ್ಯಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಎಲ್. ನರಸಿಂಹಮೂರ್ತಿ ಭಾಗವಹಿಸುವರು ಎಂದು ಹೇಳಿದರು.
28 ದಿನಗಳ ಕಾಲ ನಡೆಯುವ ವೈವಿಧ್ಯಪೂರ್ಣ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ಥಳೀಯ ಕಲಾವಿದರು ಸೇರಿದಂತೆ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರಸಕ್ತ ವರ್ಷದ ವಿಶೇಷ ದೃಶ್ಯಾವಳಿಯಾಗಿ ತಾರಕಾಸುರ ಸಂಹಾರ ಅಥವಾ ಸಿದ್ಧಿವಿನಾಯಕ ವೈಭವ ಎಂಬ ವಿಶೇಷ ಆಕರ್ಷಣೀಯ ದೃಶ್ಯಾವಳಿಯನ್ನು ಸಂಯೋಜಿಸಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪ್ರಸಕ್ತ ವರ್ಷದ ಸಿದ್ಧಿವಿನಾಯಕ ಮಹೋತ್ಸವದ ಅಂಗವಾಗಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಸದರಿ ಸಮಿತಿಯವರಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಲಾಗಿದೆ ಎಂದರು.
ವಿಸರ್ಜನೋತ್ಸವ
ಸೆ. 24 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ಧಿವಿನಾಯ ಸ್ವಾಮಿಯ ವೈಭವದ ಮೆರವಣಿಗೆ ಹಾಗೂ ವಿಸರ್ಜನಾ ಮಹೋತ್ಸವ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಕಾರ್ಯದರ್ಶಿ ಟಿ.ಎಸ್.ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಟಿ.ಆರ್.ನಟರಾಜು, ನಿರ್ದೇಶಕರಾದ ಕೆ.ಎಸ್. ರಾಘವೇಂದ್ರರಾವ್, ಜಿ.ಸಿ.ವಿರೂಪಾಕ್ಷ, ಟಿ.ಆರ್.ಅನುಸೂಯ ರುದ್ರಪ್ರಸಾದ್, ರೇಣುಕ ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.