ತಿಪಟೂರು : ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ‘ನಮ್ಮ ಆರೋಗ್ಯ ಕೇಂದ್ರಗಳು’

ತಿಪಟೂರು : ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ತಿಪಟೂರು ತಾಲ್ಲೂಕಿನಲ್ಲಿ ಪ್ರಾರಂಭವಾಗಿರುವ ನಮ್ಮ ಆರೋಗ್ಯ ಕೇಂದ್ರಗಳು ಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡವೆಂದು ಜನಸ್ಪಂದನ ಟ್ರಸ್ಟ್ ಮುಖ್ಯಸ್ಥ ಮತ್ತು ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ (ಟೂಡಾ) ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ತಿಪಟೂರಿನ ಹಾಲ್ಕುರಿಕೆ ಗ್ರಾಮದಲ್ಲಿ ಮೊದಲ ಬಾರಿಗೆ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಯಿತು. ನಂತರ ಕೆ.ಬಿ ಕ್ರಾಸ್ ನಲ್ಲಿ ಇನ್ನೊಂದು ಆರೋಗ್ಯ ಕೇಂದ್ರದ ಘಟಕವನ್ನು ಆರಂಭಿಸಲಾಯಿತು. ಈ ಎರಡು ಘಟಕಗಳು ನೂರಾರು ಮಹಿಳೆಯರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ರೀತಿಯಲ್ಲಿ ಒಂದು ವರ್ಷದಿಂದ ಯಶಸ್ವಿಯಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇದು ತುಮಕೂರು ಜಿಲ್ಲೆಯಲ್ಲಿಯೇ ಮೊದಲ ಖಾಸಗಿ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

‘ನಮ್ಮ ಆರೋಗ್ಯ ಕೇಂದ್ರ’ ಸ್ಥಾಪಿಸಿದ ಕೀರ್ತಿ ಜನಸ್ಪಂದನ ಟ್ರಸ್ಟ್ ಗೆ ಸಲ್ಲುತ್ತದೆ. ಜನಸ್ಪಂದನ ಟ್ರಸ್ಟ್ ಮುಖ್ಯಸ್ಥ ಮತ್ತು ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ (ಟೂಡಾ) ನಮ್ಮ ಆರೋಗ್ಯ ಕೇಂದ್ರದ ಸಹ ಸಂಸ್ಥಾಪಕರು ಮತ್ತು ಆರ್ಟಿಸ್ಟ್ ಫಾರ್ ಹರ್ ನ ಸಿಇಒ ಡಾ.ಹೇಮಾ ದಿವಾಕರ್, ಎಂಜೆಎಸ್ಪಿಆರ್ ನ ಮುಖ್ಯಸ್ಥ ಮತ್ತು ನಮ್ಮ ಆರೋಗ್ಯ ಕೇಂದ್ರದ ಸಹ ಸಂಸ್ಥಾಪಕ ಹಾಗೂ ಜನಸ್ಪಂದನ ಟ್ರಸ್ಟ್ ನ ಟ್ರಸ್ಟಿಯಾದ ಎಂ. ಜೆ. ಶ್ರೀಕಾಂತ್ ಅವರುಗಳು ನಮ್ಮ ಆರೋಗ್ಯ ಕೇಂದ್ರದ ಸ್ಥಾಪನೆಯ ನೇತೃತ್ವ ವಹಿಸಿದ್ದರು.

ನಮ್ಮ ಆರೋಗ್ಯ ಕೇಂದ್ರವು ಸೋಮವಾರ- ಶುಕ್ರವಾರದಿಂದ 3 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತವೆ, ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಬಿಪಿ, ಶುಗರ್ ಪರೀಕ್ಷೆ, ಜ್ವರ ತಪಾಸಣೆ ಮಾಡಲಾಗುತ್ತದೆ. ಆರೋಗ್ಯ ಸಖಿಯರು ‘ಹೆಲ್ತ್ ಫಾರ್ ಹರ್’ ಆ್ಯಪ್ ಮೂಲಕ ರೋಗಿಗಳನ್ನು ಒಬಿಜಿ ತಜ್ಞರೊಂದಿಗೆ ಸಂಪರ್ಕಿಸಿ ಪರಿಹಾರಗಳನ್ನು ಪಡೆಯಲು ನೆರವಾಗುತ್ತಿದ್ದು, ವೈದ್ಯಕೀಯ ಸಹಾಯಕ್ಕಾಗಿ ನಮ್ಮ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಮಹಿಳೆಯರು ಆರೋಗ್ಯ ಸಖಿಗಳಿಂದ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.
ನಮ್ಮ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಸಖಿಯರು ಹೇಮಾ ದಿವಾಕರ್ ನೇತೃತ್ವದ ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಯಿಂದ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ ಇವರು ತಾಂತ್ರಿಕ ಜ್ಞಾನವನ್ನು ಹೊಂದಿದ್ದಾರೆ. ಇವರು ಸುತ್ತ ಮುತ್ತ ಗ್ರಾಮಗಳ ಮನೆಗಳಿಗೆ ತೆರಳಿ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಇರುವ ಕರಪತ್ರಗಳನ್ನು ಹಂಚುವ ಮೂಲಕ ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದಂತಹ ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಹಾಗೆಯೇ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿಯೂ ಸಹ ಹೆಣ್ಣು ಮಕ್ಕಳ ಆರೋಗ್ಯದ ಕುರಿತು ಜಾಗೃತಿಯನ್ನು ಮೂಡಿಸುತ್ತಾರೆ. ಅμÉ್ಟೀ ಅಲ್ಲದೇ ನಮ್ಮ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಹಿಳೆಯರಿಗೆ ಮನವರಿಕೆ ಮಾಡಿಸಿ, ಅವರನ್ನು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವಂತೆ ಸಿ.ಬಿ.ಶಶಿಧರ್ ತಿಳಿಸಿದ್ದಾರೆ.

ನಮ್ಮ ಆರೋಗ್ಯ ಕೇಂದ್ರದಿಂದ ಮಹಿಳೆಯರಿಗೆ ಆಗುವ ಪ್ರಯೋಜನದ ಕುರಿತು ಮತ್ತು ಮಹಿಳೆಯರು ಪ್ರಸ್ತುತ ದಿನಗಳಲ್ಲಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಾದ ಬಂಜೆತನ, ಗರ್ಭಕೋಶ ಸಮಸ್ಯೆ, ಬಿಳಿಮುಟ್ಟು , ಅನೀಮಿಯಾ, ಮುಟ್ಟಿನ ಸಮಸ್ಯೆ, ಕಾಲುನೋವು, ಮಂಡಿನೋವು ಇನ್ನಿತರ ಯಾವುದೇ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡುವ ಮೂಲಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಂತೆ ಅವರಿಗೆ ಮನದಟ್ಟು ಮಾಡಿಸುತ್ತಾರೆ.

ಮುಖ್ಯವಾಗಿ ಗ್ರಾಮೀಣ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ವಿಶೇಷವಾಗಿ, ಸ್ತ್ರೀರೋಗ ಸಮಸ್ಯೆಗಳನ್ನು ಸಮಾಲೋಚಿಸಲು ನಮ್ಮ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಮಹಿಳೆಯರು ಭೇಟಿ ನೀಡಿ ನುರಿತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರೊಂದಿಗೆ ವರ್ಚುಯೆಲ್ ಕನ್ಸಲ್ಟೇಷನ್ ಮೂಲಕ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮ ಆರೋಗ್ಯ ಕೇಂದ್ರದ ಒಡಂಬಡಿಕೆಯ ಸಂಸ್ಥೆಗಳಾದ ಆರ್ಟಿಸ್ಟ್ ಫಾರ್ ಹರ್, ದಿವಾಕರ್ ಸ್ಪೆμÁಲಿಟಿ ಆಸ್ಪತ್ರೆ, ಎಂಜೆಎಸ್ ಪಿಆರ್ ಸಂಸ್ಥೆ ಮತ್ತು ಜನಸ್ಪಂದನಾ ಟ್ರಸ್ಟ್ ವತಿಯಿಂದ ಕಾರ್ಯಾರಂಭ ಮಾಡಿರುವ ನಮ್ಮ ಆರೋಗ್ಯ ಕೇಂದ್ರಗಳು ತಿಪಟೂರು ತಾಲೂಕಿನ ಗ್ರಾಮೀಣ ಹೆಣ್ಣು ಮಕ್ಕಳ ಭವಿಷ್ಯದಲ್ಲಿ ತಮ್ಮದೇ ಆದ ಚಾಪು ಮೂಡಿಸಿವೆ. ಹೀಗಾಗಿ ಇಂದು ಈ ಆರೋಗ್ಯ ಕೇಂದ್ರಗಳು ತಮ್ಮ ಯಶಸ್ವಿ ಮೊದಲ ವರ್ಷವನ್ನು ಪೂರೈಸಿ ಹೆಣ್ಣುಮಕ್ಕಳ ಉತ್ತಮ ಆರೋಗ್ಯಕ್ಕಾಗಿ ವಿಶೇಷವಾಗಿ ಆರೋಗ್ಯ ಶಿಬಿರಗಳು ಹಾಗೂ ಆರೋಗ್ಯ ಮಾಹಿತಿ ಕುರಿತ ಕಾರ್ಯಗಾರಗಳನ್ನು ರೂಪಿಸುವುದರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹೀಗೆ ಸಾವಿರಾರು ಮಹಿಳೆಯರು ನಮ್ಮ ಆರೋಗ್ಯ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *