ಶಿಕ್ಷಣ, ಆರೋಗ್ಯ-ಉದ್ಯೋಗ ವಿಷಯದಲ್ಲಿ ಹಿಂದೆ ಉಳಿದಿರುವ ತಿಪಟೂರು ಕ್ಷೇತ್ರ-ಟೂಡಾ ಶಶಿಧರ್

ತಿಪಟೂರು: ತಿಪಟೂರು ಕ್ಷೇತ್ರದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರೊಂದಿಗೆ ಚರ್ಚಿಸಿದ್ದೇನೆ. ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿದ್ದೇನೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ವಿಷಯದಲ್ಲಿ ಬಹಳಷ್ಟು ಕೆಲಸಗಳಾಗಬೇಕಿದ್ದು ಮುಂದಿನ ದಿನಗಳಲ್ಲಿ ಈ ಕುರಿತು ಹೋರಾಟ ಮಾಡಲಾಗುವುದು ಎಂದು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಟೂಡಾ ಶಶಿಧರ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಅರಿಯುವ ಮತ್ತು ಪಕ್ಷ ಸಂಘಟನೆಯ ಮುಖ್ಯ ಉದ್ದೇಶದಿಂದ ಪ್ರವಾಸ ಮಾಡಿದ್ದೇನೆ. ಅತ್ಯಂತ ಯಶಸ್ವಿ ಅಧ್ಯಯನ ಪ್ರವಾಸ ಇದಾಗಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಿ ಕ್ಷೇತ್ರದ ಅಭಿವೃದ್ದಿ ಮತ್ತು ಕಾಂಗ್ರೆಸ್ ಪಕ್ಷ ಸಂಘಟನೆ ವಿಷಯದಲ್ಲಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಸಧ್ಯದಲ್ಲೇ ಕ್ಷೇತ್ರದ ಜನರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬೃಹತ್ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗುವುದು. ಯುವಕರಿಗೆ ಉದ್ಯೋಗ ಒದಗಿಸುವ ದಿಸೆಯಲ್ಲಿ ಸಹ ಅಗತ್ಯ ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.

ನಾನು ಗ್ರಾಸ್ ರೂಟ್ ಲೇವೆಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಾಮ ಮಟ್ಟದಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದೆ. ಪಕ್ಷಕ್ಕಾಗಿ ಕೆಲಸ ಮಾಡುವ ಯುವಕರ ಪಡೆಯೇ ಇದೆ. ಆದರೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕಿದೆ. ಚುನಾವಣೆಗೆ ನಿಲ್ಲುವಂತೆ ಎಲ್ಲೆಡೆಯಿಂದ ನನಗೆ ಒತ್ತಡಬರುತ್ತಿದೆ. ಜನರ ನಾಡಿಮಿಡಿತ ಅರಿತು ಚುನಾವಣೆಗೆ ನಿಲ್ಲುವ ನಿರ್ಧಾರಕ್ಕೆ ಬಂದಿದ್ದೇನೆ. ಈಗಾಗಲೆ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದೇನೆ. ನನಗೆ ಟಿಕೆಟ್ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಶಶಿಧರ ತಿಳಿಸಿದರು.

ರಾಹುಲ ಗಾಂಧಿಯವರ ನೇತೃತ್ವದ ಭಾರತ ಜೋಡೋ ಯಾತ್ರೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದೇನೆ. ವಿಶೇಷವಾಗಿ ನಾನು ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನ ನಮ್ಮ ಪಕ್ಷದ ಎಲ್ಲ ನಾಯಕರಿಂದ ಪ್ರಶಂಸೆಗೆ ಒಳಗಾಗಿದೆ. ಇದೊಂದು ಯುನಿಕ್ ಕಾರ್ಯಕ್ರಮವಾಗಿತ್ತು ಎಂದು ಅವರು ಹೇಳಿದರು.

ಅಪ್ರಭುದ್ಧ ಶಿಕ್ಷಣ ಸಚಿವ

ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದ್ದಾರೆ.
ಮಕ್ಕಳ ಭವಿಷ್ಯವನ್ನೇ ಅತಂತ್ರಗೊಳಿಸುತ್ತಿದ್ದಾರೆ. ಅಪ್ರಭುದ್ಧರ ಕೈಯಲ್ಲಿ ಶಿಕ್ಷಣದಂತಹ ಮಹತ್ವದ ಇಲಾಖೆಯನ್ನು ಕೊಟ್ಟಿರುವುದು ದುರ್ಧೈವದ ಸಂಗತಿಯಾಗಿದೆ ಎಂದು ಶಶಿಧರ ಆರೋಪಿಸಿದರು.

2 ವರ್ಷ ಕೊರೋನಾದಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಯಿತು. ಈಗ ನಾಗೇಶ ಅವರಿಂದಾಗಿ ಶಿಕ್ಷಣ ವ್ಯವಸ್ಥೆಗೇ ಕೊರೋನಾ ಬಂದಂತಾಗಿದೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಮಕ್ಕಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ತಕ್ಷಣ ಶಿಕ್ಷಣ ಇಲಾಖೆಯನ್ನು ಅವರಿಂದ ಹಿಂಪಡೆದು ಸಮರ್ಥರೊಬ್ಬರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದರು.

ಎಳೆಯ ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತಲಾಗುತ್ತಿದೆ. ಶಾಲೆಗಳ ಬಣ್ಣ ಬದಲಾಯಿಸುವುದೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ಶಿಕ್ಷಕರಿಗೂ ನೂರೆಂಟು ಕೆಲಸ ಹಚ್ಚಲಾಗುತ್ತಿದ್ದು, ಪಾಠ ಮಾಡುವುದ್ನು ಬಿಟ್ಟು ಬೇರೆ ಕೆಲಸಗಳನ್ನು ಮಾಡಬೇಕಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದು ಮಕ್ಕಳ ಭವಿಷ್ಯ ನೆನಪಿಸಿಕೊಂಡರೆ ಭಯವಾಗುತ್ತದೆ ಎಂದು ಶಶಿಧರ ಹೇಳಿದರು.

Leave a Reply

Your email address will not be published. Required fields are marked *