ಸಾಧನೆಯ ಶಿಖರವೇರಲು ಆಸಕ್ತಿ, ಶ್ರದ್ಧೆ ಬಹುಮುಖ್ಯ_ ಎಂ.ಆರ್.ಬಾಳಿಕಾಯಿ ಸಲಹೆ


ತುಮಕೂರು: ತಮ್ಮದೇ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರಲು ಆಸಕ್ತಿಯ ಜೊತೆ ಶ್ರದ್ಧೆಯೂ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಲಾ ಕುಂಚ ಪ್ರಶಸ್ತಿ ಪುರಸ್ಕೃತ ಎಂ.ಆರ್.ಬಾಳಿಕಾಯಿ ಸಲಹೆ ನೀಡಿದರು.


ಸೋಮವಾರ ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಲಿತ ಕಲೆಗಳಲ್ಲಿರುವ ಎಲ್ಲಾ ಕಲೆಗಳು ಶ್ರೇಷ್ಟವಾದವುಗಳೇ ಚಿತ್ರಕಲೆ ಹಾಗೂ ಶಿಲ್ಪಕಲೆಗೆ ತನ್ನದೇ ಅದ ಮೌಲ್ಯವಿದ್ದು, ಆಳುವ ಸರ್ಕಾರಗಳು ಈ ಕ್ಷೇತ್ರಗಳ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.


ಚಿತ್ರಕಲಾ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಪ್ರತಿದಿನ ರೇಖಾಚಿತ್ರಗಳ ರಚನೆ ಅತ್ಯಾವಶ್ಯಕ. ವಿದ್ಯಾರ್ಥಿಗಳು ಚಿತ್ರಕೃತಿಗಳನ್ನು ರಚಿಸುವುದರ ಜೊತೆಗೆ ಇತರೆ ಕಲಾವಿದರ ಚಿತ್ರಗಳನ್ನು ನೋಡುವ ದೃಷ್ಟಿಕೋನವನ್ನು ಬೆಳಸಿಕೊಳ್ಳಬೇಕು. ಚಿತ್ರ ಹಾಗೂ ಶಿಲ್ಪಕೃತಿಗಳ ಕುರಿತು ಚರ್ಚೆ ನಡೆಸಿ ವಿಷಯ ತಿಳಿದುಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.


ಹಿರಿಯ ಚಿತ್ರಕಲಾವಿದ ರಮೇಶ್ ಸಾಸನೂರು ಮಾತನಾಡಿ, ಕಲೆಗೆ ಮೂಲವಾಗಿರುವುದು ರೇಖೆ, ಚಿತ್ರಕಲೆಯೂ ಆರಂಭವಾಗುವುದೂ ಕೂಡ ರೇಖೆಗಳಿಂದಲೇ ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ರೇಖಾ ಚಿತ್ರಗಳನ್ನು ರಚಿಸುವ ಕಾಯಕವನ್ನು ರೂಢಿ ಮಾಡಿಕೊಳ್ಳಬೇಕು. ಕಲೆ ಯಾರ ಸ್ವತ್ತಲ್ಲ ಅದು ಪಡೆದವನ ಸ್ವತ್ತು. ರವೀಂದ್ರನಾಥ್ ಠಾಗೋರ್ ಅವರು ತಮ್ಮ ೬೦ನೇ ವಯಸ್ಸಿನಲ್ಲಿ ಕುಂಚವನ್ನು ಹಿಡಿದು ಯಶಸ್ವಿ ಚಿತ್ರಕಲಾವಿದರಾಗಿ ಹೆಸರು ಮಾಡಿದವರು. ಕಲೆಗೆ ವಯಸ್ಸಿಲ್ಲ ಆಸಕ್ತಿ, ಶ್ರದ್ಧೆ ಇದ್ದರೆ ಸಾಕು ಎಂದರು.


ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಮಾತನಾಡಿ, ವಿದ್ಯಾರ್ಥಿಗಳು ಹಿರಿಯ ಕಲಾವಿದರ ಕೃತಿಗಳನ್ನು ನೋಡುವುದರ ಜೊತೆಯಲ್ಲಿ ಮುಕ್ತವಾಗಿ ಕಲಾಕೃತಿ ಬಗ್ಗೆ ಚರ್ಚೆ ನಡೆಸಬೇಕು. ನಾವು ನೋಡುವ ಭಿನ್ನತೆಯಲ್ಲಿ ಚಿತ್ರಗಳು ಕಣ್ಣಿಗೆ ಬೀಳುತ್ತವೆ. ಗುರು-ಹಿರಿಯ ಮಾರ್ಗದರ್ಶನ ಪಡೆದು ಸಮಾಜದಲ್ಲಿ ಒಬ್ಬ ಕಲಾವಿದ ಅಥವಾ ಕಲಾ ಶಿಕ್ಷಕನಾಗುವ ಗುರಿ ಇಟ್ಟುಕೊಳ್ಳಬೇಕು. ನನ್ನ ಗುರುಗಳಾದ ಎಂ.ಆರ್.ಬಾಳಿಕಾಯಿ ಅವರಿಂದ ಕಲಿತ ವಿದ್ಯೆಯಿಂದ ನಾನಿಂದು ಗೌರವ ಸ್ಥಾನದಲ್ಲಿದ್ದೇನೆ ಅದು ನನಗೆ ಹೆಮ್ಮೆಯ ವಿಷಯವಾಗಿದ್ದು, ತಾವುಗಳು ಕೂಡ ಇಂತಹ ಉತ್ತಮ ಮಾರ್ಗದಲ್ಲಿ ಸಾಗಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ರಂಗಸ್ವಾಮಿ ಆರ್, ಡಾ.ಸುರೇಂದ್ರನಾಥ್, ಡಾ.ಸಂತೋಷ ಕುಮಾರ್ ನಾಗರಾಳ, ಡಾ.ಶ್ವೇತ.ಡಿ.ಎಸ್, ಸತ್ಯನಾರಾಯಣ ಟಿ.ಎಸ್ ಹಾಗು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *