ತುಮಕೂರು: ಕಾರ್ಯಕರ್ತರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕನನ್ನು ಗುರುತಿಸಿ,ಆತನಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಪಕ್ಷವನ್ನು ಕಟ್ಟಬೇಕಾಗಿದೆ.ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ನಿಮ್ಮ ಶಕ್ತಿ ಏನು ಎಂಬುದನ್ನು ಪಕ್ಷ ತೊರೆದಿರುವ ನಾಯಕರಿಗೆ, ಮುಖಂಡರಿಗೆ ತೋರಿಸುವಂತೆ ಡಿ.ನಾಗರಾಜಯ್ಯ ಕಾರ್ಯಕರ್ತ ರಿಗೆ ಧೈರ್ಯ ತುಂಬಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾಗಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ನಾಯಕರನ್ನು ಹುಟ್ಟು ಹಾಕುವ ಸಲುವಾಗಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗ್ರಾಮಾಂತರ ಮುಖಂಡರ ಸಭೆಯನ್ನು ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ
ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಇದುವರೆಗೂ ಹೆಚ್.ನಿಂಗಪ್ಪ ಮತ್ತು ಮೂಡ್ಲಗಿರಿಗೌಡ ಅವರನ್ನು ಹೊರತು ಪಡಿಸಿದರೆ ಸ್ಥಳೀಯರು ಶಾಸಕರಾಗಿ ಆಯ್ಕೆಯಾಗಿಲ್ಲ.ಹಾಗಾಗಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ,ಇಂದು ಗ್ರಾಮಾಂತರ ಕಾರ್ಯಕರ್ತರಲ್ಲಿ ಪಕ್ಷದ ಬಗ್ಗೆ ಅಭಿಮಾನ, ಗೌರವ ವ್ಯಕ್ತವಾಗಿದೆ.ಎಲ್ಲರೂ ಒಗ್ಗೂಡಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಒಂದು ಬೃಹತ್ ಸಭೆ ನಡೆಸಿ,ಕಾರ್ಯಕರ್ತರಿಗೆ, ಮತದಾರರಿಗೆ ಒಳ್ಳೆಯ ಸಂದೇಶ ನೀಡಿ, ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಗ್ರಾಮಾಂತರದಲ್ಲಿ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ನಂತರ ಕೆಲವು ಮುಖಂಡರು ಸಹ ಅವರನ್ನು ಹಿಂಬಾಲಿಸಿದ್ದಾರೆ.ಆದರೆ ಕಾರ್ಯಕರ್ತರು ಪಕ್ಷ ತೊರೆದಿಲ್ಲ.ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ.ಹಾಗಾಗಿ ಅಳಿದುಳಿದ ಮುಖಂಡರು,ಕಾರ್ಯಕರ್ತರನ್ನು ಒಗ್ಗೂಡಿಸಿ,ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಗ್ರಾಮಾಂತರದÀ ಹೆಬ್ಬೂರು,ನಾಗವಲ್ಲಿ,ಊರುಕೆರೆ,ಉರ್ಡಿಗೆರೆ ಹಾಗೂ ಕಸಬಾ ಹೋಬಳಿಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿ,ನಿಮ್ಮಲ್ಲಿಯೇ ಓರ್ವ ನಾಯಕನನ್ನು ಹುಟ್ಟು ಹಾಕುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ತಿಪಟೂರು ಮುಖಂಡರಾದ ಕೆ.ಟಿ.ಶಾಂತಕುಮಾರ್ ಮಾತನಾಡಿ,ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದೆ.ಯಾರೋ ಒಂದಿಬ್ಬರು ಪಕ್ಷ ಬಿಟ್ಟಾಕ್ಷಣ ಪಕ್ಷಕ್ಕೆ ನಷ್ಟವಿಲ್ಲ.ನಿಮ್ಮೊಂದಿಗೆ ನಾವಿದ್ದೇವೆ.ರಾಜಕಾರಣದಲ್ಲಿ ಹೊಂದಾಣಿಕೆ ಎಂಬುದು ಸರ್ವೆ ಸಾಮಾನ್ಯ. ಈಗಾಗಲೇ ಕಾಂಗ್ರೆಸ್‍ನ ಗ್ಯಾರಂಟಿಗಳನ್ನು ನಂಬಿ ಮತ ಹಾಕಿದ ಜನತೆ ಭ್ರಮನಿರಶನಗೊಂಡಿದ್ದಾರೆ.ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆ ಕೊಬ್ಬರಿ ಬೆಲೆ ಕುಸಿದರೂ ಸರಕಾರ ಸ್ಪಂದಿಸಿಲ್ಲ.ಸದಾ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಮತ್ತೊಮ್ಮೆ ಉತ್ತುಂಗಕ್ಕೆ ಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು,ಮಾಜಿ ಶಾಸಕರ ನಿರ್ಧಾರ ಅವರಿಗೆ ಬಿಟ್ಟಿದ್ದು, ಆದರೆ ಜೆಡಿಎಸ್ ಪಕ್ಷ ನಾಲ್ಕು ಬಾರಿ ಅವರಿಗೆ ಟಿಕೆಟ್ ನೀಡಿದೆ.ಎರಡು ಬಾರಿ ಗೆದ್ದು ಶಾಸಕರಾಗಿದ್ದಾರೆ.ಅವರ ತಂದೆ ಚನ್ನಿಗಪ್ಪ ಅವರಿಗೆ ರಾಜಕೀಯ ಅಧಿಕಾರ ನೀಡಿದ ಪಕ್ಷ ಜೆಡಿಎಸ್.ಗ್ರಾಮಾಂತರದ ಜೆಡಿಎಸ್ ಕಾರ್ಯಕರ್ತರು ಗೌರಿಶಂಕರ್ ಅವರನ್ನು ಮನೆ ಮಗ ಎಂದು ತಿಳಿದಿದ್ದರು.ಅದಕ್ಕಾಗಿಯೇ ಕಳೆದ ಚುನಾವಣೆಯಲ್ಲಿ 84 ಸಾವಿರ ಮತ ನೀಡಿದ್ದಾರೆ. ಮುಂದಿನ ಆರು ತಿಂಗಳಲ್ಲಿಯೇ ಇಂದು ಜೆಡಿಎಸ್ ತೊರೆದಿರುವ ಗೌರಿಶಂಕರ್ ಮತ್ತು ಅವರ ಬೆಂಬಲಿಗರು ಜೆಡಿಎಸ್ ಪಕ್ಷದ ಕದ ತಟ್ಟಲಿದ್ದಾರೆ.ಹಾಗಾಗಿ ಕಾರ್ಯಕರ್ತರು ದೃತಿಗೇಡುವ ಅಗತ್ಯವಿಲ್ಲ.ಒಗ್ಗೂಡಿ ಪಕ್ಷ ಕಟ್ಟಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ,ಗ್ರಾಮಾಂತರದಲ್ಲಿ ಪಕ್ಷವನ್ನು ಕಟ್ಟಬೇಕು ಎಂಬ ಉತ್ಸಾಹ ಕಾರ್ಯಕರ್ತರಲ್ಲಿದೆ.ಚನ್ನಿಗಪ್ಪ ಪಕ್ಷಕ್ಕಾಗಿ ದುಡಿದಿದ್ದಾರೆ.ಹೆಚ್.ಡಿ.ದೇವೇಗೌಡರ ಮತ್ತು ಚನ್ನಿಗಪ್ಪ ಅವರದ್ದು ಅಪ್ಪ ಮಕ್ಕಳ ಸಂಬಂಧ.ಗೌರಿಶಂಕರ್ ಅವರಿಗೆ ಶೀಘ್ರದಲ್ಲಿಯೇ ಸತ್ಯದ ಅರಿವಾಗಲಿದೆ.ಪಕ್ಷ ತಾಯಿ ಇದ್ದಂತೆ,ಅದನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಪ್ರಾಮಾಣಿಕ ಪ್ರಯತ್ನ ನಡೆಸೋಣ.ನಿಮ್ಮೊಂದಿಗೆ ನಾವಿದ್ದೇವೆ ಎಂಬ ಬೆಂಬಲದ ಮಾತುಗಳನ್ನಾಡಿದರು.
ಮಾಜಿ ಶಾಸಕರು, ರಾಜ್ಯ ಕೋರ್ ಕಮಿಟಿ ಸದಸ್ಯರುಗಳಾದ ಕೆ.ಎಂ.ತಿಮ್ಮರಾಯಪ್ಪ,ತಿಪಟೂರಿನ ಕೆ.ಟಿ.ಶಾಂತರಾಜು,ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು,ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್,ಹೆಚ್.ಡಿ.ಕೆ. ಮಂಜುನಾಥ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿ,ಮುಖಂಡರುಗಳಿಗೆ ಗ್ರಾಮಾಂತರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಸಲಹೆ, ಸೂಚನೆಗಳು ನೀಡಿದರು.
ಸಭೆಯಲ್ಲಿ ನಾಗವಲ್ಲಿ ರಾಮಣ್ಣ,ನಿಡುವಳಲು ಕೃಷ್ಣಪ್ಪ, ಸುವರ್ಣಗಿರಿ ಕುಮಾರ್,ಶಕುಂತಲ,ಶಶಿಕಲಾ ಮತ್ತಿತರ ಮುಖಂಡರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಮುಖಂಡರಾದ ದೀಪು ಬೋರೇಗೌಡ,ಸೋಲಾರಕೃಷ್ಣಮೂರ್ತಿ,ಎಸ್ಸಿ ಘಟಕದ ಸುರೇಶ್,ಕೆ.ಬಿ.ರಾಜಣ್ಣ, ಅಪ್ಪೇಗೌಡ,ವೆಂಕಟೇಶಮೂರ್ತಿ, ದಾಂಡೇಲಿ ಗಂಗಣ್ಣ,ಲಕ್ಷ್ಮಿನಾರಾಯಣ, ರಾಧಾಗೌಡ,ಲೀಲಾವತಿ, ಆಶ್ವಥನಾರಾಯಣ ಸೇರಿದಂತೆ ನೂರಾರು ಮುಖಂಡರು ಪಾಲ್ಗೊಂಡಿದ್ದರು.