ತುಮಕೂರು: ಆತ್ಮವಿಶ್ವಾಸ ರಹಿತ, ಬಂಧನಕ್ಕೆ ದೂಡುವ ಈಗಿನ ಶಿಕ್ಷಣ ವ್ಯವಸ್ಥೆಯಿಂದ ಮುಕ್ತವಾಗಿ, ಬಂಧನದಿಂದ ಬಿಡಿಸುವ ಜ್ಞಾನವೃದ್ಧಿಯ, ಕಷ್ಟಗಳನ್ನು ಎದುರಿಸುವ ಅನುಭವದ ವಿದ್ಯೆಯಿಂದ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಜಯಂತ್ ಕುಮಾರ್ ಹೇಳಿದರು.
ತುಮಕೂರು ವಿವಿಯ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 75ನೆಯ ಸಂವಿಧಾನ ದಿನಾಚರಣೆಯಲ್ಲಿ ಭಾರತ ಸಂವಿಧಾನದ ಪೀಠಿಕೆ ಬೋಧಿಸಿ ಮಾತನಾಡಿದರು.
ಪದವಿ ಮುಗಿಸಿದ ನಂತರ ಕಣ್ಣಿಗೆ ಬಟ್ಟೆ ಕಟ್ಟಿ ಬದುಕಲು ಬಿಟ್ಟಂತಾಗಿದೆ ನಮ್ಮ ಶಿಕ್ಷಣ ವ್ಯವಸ್ಥೆ. ಸಮಾಜದಲ್ಲಿನ ಸಮಸ್ಯೆಗಳಿಗೆ ಕಾರಣ ಚಾರಿತ್ರ್ಯವಧೆ. ಪರಾಮರ್ಶೆಗೆ ಒಳಪಡಿಸದೆ ವ್ಯಕಿಗತ ನಿಂದನೆಯಿಂದ ಕಾನೂನುಬಾಹಿರ ಚಟುವಟಿಕೆಗಳು ತಲೆದೂರಿ ಅಶುದ್ಧ ವಾತಾವರಣ ಸೃಷ್ಟಿಯಾಗಿದೆ. ಲಂಚಕೋರತನ, ಅತಿಯಾಸೆ ಬಿಟ್ಟು ಶಾಂತಿ, ನೆಮ್ಮದಿಗಾಗಿ ಬದುಕುವುದೇ ಜೀವನ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ಸರ್ವರಿಗೂ ಸಮಾನತೆ, ಸಾಮಾಜಿಕ ನ್ಯಾಯ, ವ್ಯಕ್ತಿಗೌರವ, ಅವಕಾಶ ಕಲ್ಪಿಸುವುದೇ ಸಂವಿಧಾನದ ಆಶಯ. ಸಮಾನತೆ ಸಿಗದಿದ್ದರೆ ಪ್ರತಿಭಟಿಸಬೇಕು. ರಾಜಕೀಯ ಪ್ರಜಾಪ್ರಭುತ್ವವನ್ನು ಬದಿಗಿಟ್ಟು ಸಾಮಾಜಿಕ ಪ್ರಜಾಪ್ರಭುತ್ವದ ಕಡೆ ಒಲವು ತೋರಿಸಬೇಕು. ಮೌಲ್ಯಯುತ ಶಿಕ್ಷಣ ಪಡೆಯಬೇಕು ಎಂದರು.
ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಮಾನವನನ್ನು ಮಾನವೀಯತೆಯಿಂದ ನಡೆಸಿಕೊಂಡು, ಅಸ್ಪøಶ್ಯತೆಯನ್ನು ಹೋಗಲಾಡಿಸಿ, ಸಮಾನತೆಯನ್ನು ಕಲ್ಪಿಸಿಕೊಡುವ, ವ್ಯಕ್ತಿ ಸ್ವಾತಂತ್ರ್ಯ ತಂದುಕೊಡುವ ಸಂವಿಧಾನ ನಮ್ಮ ಧರ್ಮ ಗ್ರಂಥ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಭಾರತದ ಸ್ವಾತಂತ್ರ್ಯದ ನಂತರ ಸಮಾನತೆಯನ್ನು ಕಂಡ ಏಕೈಕ ನಾಯಕ ಡಾ. ಬಿ. ಆರ್. ಅಂಬೇಡ್ಕರ್. ಬಾಯಿಮಾತಿಗೆ ಸಂವಿಧಾನವಾಗಬಾರದು. ಸಂವಿಧಾನ ಭಾರತದ ಪ್ರಜೆಗಳ ಬದುಕಾಗಬೇಕು ಎಂದು ತಿಳಿಸಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಕೇಶವ, ಸಿಂಡಿಕೇಟ್ ಸದಸ್ಯರಾದ ಶಿವಣ್ಣ, ಪ್ರಿಯದರ್ಶಿನಿ, ಫರ್ಹಾನಾ ಬೇಗಂ ಉಪಸ್ಥಿತರಿದ್ದರು.