ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ಅವಶ್ಯ : ಜಿಲ್ಲಾ ಸತ್ರ ನ್ಯಾಯಾಧೀಶ ಜಯಂತ್ ಕುಮಾರ್

ತುಮಕೂರು : ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ಅತ್ಯಾವಶ್ಯ. ಸಾರ್ವಜನಿಕರಿಗೆ ಒಳಿತನ್ನು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ನೈತಿಕತೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಜಯಂತ್ ಕುಮಾರ್ ಅಭಿಪ್ರಾಯಪಟ್ಟರು.

 ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಭ್ರಷ್ಟಚಾರ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಚಾರವು ರಾಷ್ಟ್ರದ ಅಭಿವೃದ್ಧಿಗೆ ಅತ್ಯಂತ ಗಂಭೀರ ಅಡ್ಡಿ. ಸಣ್ಣ ಮಟ್ಟದ ಲಂಚದಿಂದ ಹಿಡಿದು ಭೂಮಿ, ಗುತ್ತಿಗೆ, ಕಲ್ಯಾಣ ಯೋಜನೆಗಳ ವಹಿವಾಟುಗಳಲ್ಲಿ ನಡೆಯುವ ಅಕ್ರಮಗಳು ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುಗ್ಗಿಸುತ್ತವೆ ಎಂದರು.

ಭ್ರಷ್ಟಚಾರದ ವಿರುದ್ಧ ಕಾನೂನುಗಳು ಕಠಿಣವಾಗಿದ್ದು, ಲಂಚ ಬೇಡುವ ಅಧಿಕಾರಿಯೂ ಅಪರಾಧಿ, ಲಂಚ ಕೊಡುವವರೂ ಸಹ ಅಪರಾಧಿಗಳು ಎಂಬುದನ್ನು ಸ್ಪಷ್ಟಪಡಿಸಿದರು. ಸಾಮಾನ್ಯ ಜನರು ದೂರು ನೀಡಲು ಹಿಂಜರಿಯುತ್ತಾರೆ. ಆದರೆ ಸಾಕ್ಷಿಗಳೊಂದಿಗೆ ದೂರು ನೀಡಿದರೆ, ದೂರುದಾರರ ಹೆಸರನ್ನು ರಹಸ್ಯವಾಗಿಡಲು ಕಾನೂನುಬದ್ಧ ರಕ್ಷಣೆಯ ಅವಕಾಶವಿದೆ ಎಂದು ತಿಳಿಸಿದರು.

ಲೋಕಾಯುಕ್ತ ಪೊಲೀಸ್   ಅಧೀಕ್ಷಕ ಎ.ವಿ. ಲಕ್ಷ್ಮೀನಾರಾಯಣ ಮಾತನಾಡಿ, ಭ್ರಷ್ಟಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ಸ್ಪಂದಿಸಿ ಅನಗತ್ಯ ಕಾಲಹರಣ ಮಾಡದೇ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿ-ನೌಕರರು ಸೇವಾ ಮನೋಭಾವದೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಭ್ರಷ್ಟಚಾರ ಮುಕ್ತ ಕಚೇರಿಯನ್ನಾಗಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಯಾವುದೇ ಸರ್ಕಾರಿ ಕಚೇರಿಯಲ್ಲಿ ಸೇವೆ ಒದಗಿಸಲು ಲಂಚ ಕೇಳುವುದು, ಅನಗತ್ಯ ವಿಳಂಬ ಮಾಡುವುದು, ಅಧಿಕಾರ ದುರ್ಬಳಕೆ ಕಂಡು ಬಂದರೆ ಜನರು ದೂರು ನೀಡಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಜನರ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗುತ್ತವೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್  ಅಧೀಕ್ಷಕ ಸಿ. ಗೋಪಾಲ್ ಮಾತನಾಡಿ, ಸರ್ಕಾರಿ ನೌಕರರು ನೀತಿ-ನಿಯಮಗಳ ಚೌಕಟ್ಟಿನೊಳಗೆ ಕೆಲಸ ಮಾಡಿದರೆ ಜನರ ಬದುಕಿನಲ್ಲಿ ನೈಜ ಬದಲಾವಣೆ ತರಲು ಸಾಧ್ಯವಾಗುತ್ತದೆ. ಜನಸೇವೆಗೆ ಹಣ ಬೇಡುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬೇಕು. ಸಮೃದ್ಧ ಸಮಾಜಕ್ಕಾಗಿ ಭ್ರಷ್ಟಚಾರ ವಿರೋಧದ ಜಾಗೃತಿ ಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಯಾಸ್ಮಿನ ಪರವೀನ ಲಾಡಖಾನ ಅವರು ಭ್ರಷ್ಟಚಾರ ವಿರೋಧಿ ಕಾಯ್ದೆಗಳ ಕುರಿತಾಗಿ ವಿವರವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ಹೆಚ್ಚುವರಿ ಪೊಲೀಸ್     ಅಧೀಕ್ಷಕ ಪುರುಷೋತ್ತಮ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *