ತುರ್ತು ಚಿಕಿತ್ಸೆಗೆ ಟ್ರಾಮಾಕೇರ್ ಸೆಂಟರ್ ಕಾರ್ಯಾರಂಭ – ಸಚಿವ ಡಾ. ಜಿ.ಪರಮೇಶ್ವರ್.

ತುಮಕೂರು : ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಅಪಘಾತ ಪ್ರಕರಣಗಳು ಸಂಭವಿಸಿದಲ್ಲಿ, ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 56 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಅನ್ನು ನಿರ್ಮಿಸಲಾಗಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ.ಪರಮೇಶ್ವರ್ ಅವರು ಹೇಳಿದರು.

ನಗರದಲ್ಲಿಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಟ್ರಾಮಾ ಕೇರ್ ಸೆಂಟರ್ ಅನ್ನು ಲೋಕಾರ್ಪಣೆಗೊಳಿಸಿ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ರಸ್ತೆ ಅಪಘಾತಕ್ಕೀಡಾದ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ 70ಕಿ.ಮೀ ದೂರದ ಬೆಂಗಳೂರಿಗೆ ಕರೆದೊಯ್ಯುವುದನ್ನು ತಪ್ಪಿಸಲು ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ ನಂತರ ಚಿಕಿತ್ಸೆಗೆ ತಗಲುವ ಹಣವನ್ನು ಒದಗಿಸಲಾಗದೆ ಕೆಲವರು ಮರಣ ಹೊಂದುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ತುಮಕೂರು ನಗರದಲ್ಲಿ ಟ್ರಾಮಾ ಕೇರ್ ಸೆಂಟರ್ ಅನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟಾಪ್ ನರ್ಸ್‍ಗಳ ವೇತನವನ್ನು ಹೆಚ್ಚು ಮಾಡಿ ಎಂದು ಮನವಿ ಸಲ್ಲಿಸಲಾಗಿತ್ತು.ಅದರಂತೆ ವೇತನ ಹೆಚ್ಚು ಮಾಡುವುದಕ್ಕೆ ಅವರು ಅನುಮೋದನೆ ನೀಡಿದ್ದಾರೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಅಪಘಾತ ತುರ್ತು ಚಿಕಿತ್ಸಾ ಕೇಂದ್ರವು 100 ಹಾಸಿಗೆಗಳ ಸಾಮಥ್ರ್ಯವನ್ನು ಹೊಂದಿರುತ್ತದೆ. ಪ್ರತ್ಯೇಕವಾಗಿ ಎರಡು ಪ್ರಧಾನ ಶಸ್ತ್ರಚಿಕಿತ್ಸಾಗಾರಗಳು, ಎರಡು ಕಿರು ಶಸ್ತ್ರಚಿಕಿತ್ಸಾಗಾರಗಳು ಮತ್ತು ಮೆಡಿಕಲ್ ಐಸಿಯು ಹಾಗೂ ಸರ್ಜಿಕಲ್ ಐಸಿಯುಗಳನ್ನು ಒಳಗೊಂಡಿದೆ ಎಂದು ಹೇಳಿದರು.

ರೋಡ್ ಟ್ರಾಫಿಕ್ ಆಕ್ಸಿಡೆಂಟ್ ಪ್ರಕರಣ, ವಿಷ ಸೇವನೆ ಪ್ರಕರಣಗಳು, ಎಂ.ಎಲ್.ಸಿ. ಪ್ರಕರಣಗಳು, ಸುಟ್ಟಗಾಯದ ಪ್ರಕರಣಗಳು ಮತ್ತು ಸೆಲ್ಫ್ ಫಾಲ್, ಎಲೆಕ್ಟ್ರಿಕ್ ಶಾಕ್ ಇಂತಹ ಪ್ರಕರಣಗಳಿಗೆ ಪ್ರತ್ಯೇಕವಾಗಿ ನುರಿತ ತಜ್ಞವೈದ್ಯರನ್ನು ನೇಮಕ ಮಾಡಿದ್ದು, ವಿಳಂಬವಿಲ್ಲದೆ ತುರ್ತು ಚಿಕಿತ್ಸೆಯನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಟ್ರಾಮಾಕೇರ್ ಸೆಂಟರ್‍ನಲ್ಲಿ ಕರ್ತವ್ಯ ನಿರ್ವಹಿಸುವ 1 ನ್ಯೂರೊ ಸರ್ಜನ್, 2 ರೇಡಿಯೋಲಿಜಿಸ್ಟ್, 3 ಅರವಳಿಕೆ ತಜ್ಞರು, 3 ಕೀಲು ಮತ್ತು ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, 2 ಜನರಲ್ ಸರ್ಜನ್, 6 ಜನ ಅಪಘಾತ ವೈದ್ಯಕೀಯ ಅಧಿಕಾರಿಗಳು, 30 ಜನ ಸ್ಟಾಪ್ ನರ್ಸ್‍ಗಳು, 5 ಓಟಿ ಟೆಕ್ನಿಷೀಯನ್, 4 ರೇಡಿಯೋಗ್ರಾಫರ್, 2 ಲ್ಯಾಬ್ ಟೆಕ್ನಿಷೀಯನ್, 15 ಜನ ಮಲ್ಟಿ ಟಾಸ್ಕ್ ವರ್ಕರ್‍ಗಳು ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಪಿಜಿ ಕೋರ್ಸ್‍ಗಳನ್ನು ಪ್ರಾರಂಭಿಸುವುದಕ್ಕೆ ಹಾಗೂ ಕೆ.ಬಿ.ಕ್ರಾಸ್ ಬಳಿ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆಯನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ತಾವು ಈ ಹಿಂದೆ ಗೃಹ ಸಚಿವರಾಗಿದ್ದಾಗ ರಾಜ್ಯಕ್ಕೆ ಒಂದು ಕಮಾಂಡ್ ಸೆಂಟರ್ ಸ್ಥಾಪನೆಗೆ ಮಂಜೂರಾತಿ ನೀಡಿದ್ದು, ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್‍ಗಳನ್ನು ಪ್ರಾರಂಭವಾಗಲಿದ್ದು, ಈಗಾಗಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಮಾಂಡ್ ಸೆಂಟರ್‍ಗಳಿದ್ದು, ಒಟ್ಟಾರೆ ರಾಜ್ಯದ 1016 ಪೊಲೀಸ್ ಠಾಣೆಗಳ ಕಾರ್ಯ ಚಟುವಟಿಕೆಗಳನ್ನು ಬೆಂಗಳೂರಿನ ಕಮಾಂಡ್ ಸೆಂಟರ್‍ನಲ್ಲಿ ನೋಡಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿಗಣೇಶ್, ಸುರೇಶ್‍ಗೌಡ, ತುಮಕೂರು ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಪಾಲಿಕೆ ಆಯುಕ್ತರಾದ ಅಶ್ವಿಜ, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ: ವೀಣಾ, ಡಿಹೆಚ್‍ಓ ಡಾ: ಮಂಜುನಾಥ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *