ತುಮಕೂರು: ನಗರದ ಸತ್ಯಮಂಗಲ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ ಹಾಗೂ ರಾಜ್ಯ ಸರ್ಕಾರದ ವತಿಯಿಂದ ತುಮಕೂರು ನಗರಕ್ಕೆ ಮಂಜೂರಾಗಿರುವ ನಮ್ಮ ಕ್ಲೀನಿಕ್‍ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.
ಸತ್ಯಮಂಗಲ ನಮ್ಮ ಕ್ಲಿನಿಕ್‍ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಿ.ಹೆಚ್.ಸಿ ಗಳ ಜೊತೆಗೆ, ನಮ್ಮ ಕ್ಲಿನಿಕ್‍ಗಳು ಸಮರ್ಪಕವಾಗಿ ಕೆಲಸ ಮಾಡಿದರೆ, ಜನರಿಗೆ ಅವರ ಮನೆ ಬಾಗಿಲಲ್ಲಿಯೇ ಆರೋಗ್ಯ ಸೇವೆಗಳು ಲಭ್ಯವಾಗಲಿವೆ. ಈ ಉದ್ದೇಶದಿಂದಲೇ ನಮ್ಮ ಕ್ಲಿನಿಕ್ ಸೇವೆಯನ್ನು ಸರಕಾರ ಘೋಷಣೆ ಮಾಡಿದೆ. ಪ್ರತಿ ತಿಂಗಳು ಸುಮಾರು 2.50 ಲಕ್ಷ ರೂ ಗಳ ವೆಚ್ಚವನ್ನು ನಮ್ಮ ಕ್ಲಿನಿಕ್‍ಗೆ ಮಾಡುತ್ತಿದ್ದು, ಇದರಲ್ಲಿ ಪ್ರಾಥಮಿಕ ಸೇವೆಗಳು ಲಭ್ಯವಾಗಲಿವೆ. ಸತ್ಯಮಂಗಲ ನಮ್ಮ ಕ್ಲಿನಿಕ್‍ನಿಂದ ಸತ್ಯಮಂಗಲ, ನವಿಲುಹಳ್ಳಿ, ಜಗನ್ನಾಥಪುರ, ಪುಟ್ಟಸ್ವಾಮಯ್ಯಪಾಳ್ಯ, ಶಿರಾಗೇಟ್ ಸೇರಿದಂತೆ ಹಲವಾರು ಹಳ್ಳಿಗಳಿಗೆ ಉಪಯೋಗವಾಗಲಿದೆ. ಜನರು ಆಯುಷ್ಮಾನ ಭಾರತ್ ಕಾರ್ಡುಗೆ ತಮ್ಮ ಹೆಸರು ನೊಂದಾಯಿಸುವ ಮೂಲಕ ಸರಕಾರದ ಹೆಚ್ಚಿನ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ತುಮಕೂರು ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ,ಶಾಸಕರು ಬಹಳಷ್ಟು ಶ್ರಮವಹಿಸಿ, ಜಿಲ್ಲೆಗೆ ಮಂಜೂರಾಗಿದ್ದ 10 ನಮ್ಮ ಕ್ಲಿನಿಕ್‍ಗಳಲ್ಲಿ ನಗರಕ್ಕೆ 7 ನ್ನು ಮಂಜೂರು ಮಾಡಿಸಿದ್ದಾರೆ. ಈ ಹಿಂದೆ ಸತ್ಯಮಂಗಲ ಭಾಗದ ಜನರು ಸಣ್ಣ, ಪುಟ್ಟ ಚಕಿತ್ಸೆಗೂ ಸಿರಾಗೇಟ್ ಪಿ.ಹೆಚ್.ಸಿ. ಇಲ್ಲವೇ, ದೊಡ್ಡಾಸ್ಪತ್ರೆಗೆ ಹೋಗಬೇಕಾಗಿತ್ತು. ಸತ್ಯಮಂಗಲ ನಮ್ಮ ಕ್ಲಿನಿಕ್‍ನಿಂದ ಈ ಭಾಗದ ಜನರಿಗೆ ಮನೆ ಬಾಗಿಲಲ್ಲಿಯೇ ಆರೋಗ್ಯ ಸೇವೆ ಲಭ್ಯವಾಗಲಿದೆ. ಇದಕ್ಕಾಗಿ ಶಾಸಕರನ್ನು ಪಾಲಿಕೆಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಜಿಲ್ಲೆಗೆ ಸರಕಾರದಿಂದ ಮಂಜೂರಾಗಿರುವ 10 ನಮ್ಮ ಕ್ಲಿನಿಕ್‍ಗಳಲ್ಲಿ 7 ನಮ್ಮ ಕ್ಲಿನಿಕ್ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ದೊರೆತಿದ್ದು, ಈಗಾಗಲೇ ದಿಬ್ಬೂರು, ಶಾಂತಿನಗರ, ಜಯಪುರ ಮತ್ತಿತರ ಕಡೆಗಳಲ್ಲಿ ಈಗಾಗಲೇ ಆರಂಭವಾಗಿದ್ದು, ನಗರದಲ್ಲಿರುವ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ, 7 ನಮ್ಮ ಕ್ಲಿನಿಕ್ ಸಹ ಕಾರ್ಯಾರಂಭ ಮಾಡಿರುವುದರಿಂದ ಜನರಿಗೆ ಅವರ ಮನೆ ಭಾಗಿಲಿಲ್ಲಿಯೇ ಉತ್ತಮ ಆರೋಗ್ಯ ಸೇವೆ ಲಭ್ಯವಾಗಲಿದೆ. ಇದರಿಂದ ಜಿಲ್ಲಾಸ್ಪತ್ರೆಯ ಮೇಲಿದ್ದ ಒತ್ತಡ ಕಡಿಮೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ, ಆರ್.ಸಿ.ಹೆಚ್. ಡಾ.ಕೇಶವರಾಜ್, ಜಿಲ್ಲಾ ಪ್ರೋಗ್ರಾಮ್ ಮ್ಯಾನೇಜರ್ ಯಶಪಾಲ್, ನಗರ ಪ್ರೋಗ್ರಾಮ್ ಮ್ಯಾನೇಜರ್ ಹೇಮಂತ್, ಟೂಡಾ ಸದಸ್ಯರಾದ ಸತ್ಯಮಂಗಲ ಜಗದೀಶ್, ಮಾಜಿ ನಗರಸಭಾ ಸದಸ್ಯರಾದ ಅಣೆತೋಟ ಶ್ರೀನಿವಾಸ್, ಓಬಿಸಿ ಮೋರ್ಚಾ ಅಧ್ಯಕ್ಷರಾದ ಹನುಮಂತರಾಜು, ಮುಖಂಡರಾದ ಭರತ್, ಆನಂದ್, ರುದ್ರೇಶ್, ಗುಣಶೇಖರ್, ನರಸಯ್ಯ, ವೈ.ಟಿ.ರಾಜೇಂದ್ರ, ಹರೀಶ್ ಹಾಗೂ ಸತ್ಯಮಂಗಲದ ಗ್ರಾಮಸ್ಥರು ಉಪಸ್ಥಿತರಿದ್ದರು.