ತುಮಕೂರು: ಇತ್ತೀಚೆಗೆ ನಿಧನರಾದ ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎ.ಆಂಜನಪ್ಪ ಹಾಗೂ ಮುಖಂಡರು ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮೌನಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ದಲಿತ ಸೂರ್ಯ ಎಂದೇ ಹೆಸರಾದ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಶ್ರೀನಿವಾಸಪ್ರಸಾದ್ ಅವರ ನಿಧನದಿಂದ ಬಿಜೆಪಿಗೆ ಹಾಗೂ ದೇಶಕ್ಕೆ ಅಪಾರವಾದ ನಷ್ಟವಾಗಿದೆ. ನೇರ, ನಿಷ್ಠೂರದ ನಾಯಕರೆಂದು ಹೆಸರಾಗಿದ್ದ ಇವರು ಯಾವತ್ತೂ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಲಿಲ್ಲ, ಎಲ್ಲಾ ವರ್ಗದವರ ವಿಶ್ವಾಸ ಗಳಿಸಿ ಜನಾನುರಾಗಿ ನಾಯಕರಾಗಿದ್ದರು ಎಂದು ಹೇಳಿದರು.
ಆರು ಬಾರಿ ಸಂಸದರಾಗಿದ್ದ ಶ್ರೀನಿವಾಸಪ್ರಸಾದ್ ಅವರು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿ ಸಮರ್ಥವಾಗಿ ತಮ್ಮ ಖಾತೆ ನಿರ್ವಹಿಸಿದ್ದರು. ದಲಿತ ವರ್ಗದ ಧ್ವನಿಯಾಗಿ, ಶೋಷಿತ ವರ್ಗದ ಶಕ್ತಿಯಾಗಿ ಅವರು ತಮ್ಮ ಕೊನೆ ದಿನಗಳವರೆಗೂ ಸ್ವಾಭಿಮಾನದಿಂದಲೇ ಬಾಳಿದರು. ಶ್ರೀನಿವಾಸಪ್ರಸಾದ್ ಅವರ ರಾಜಕೀಯ ಆದರ್ಶಗಗಳು, ನಾಯಕತ್ವ ಗುಣಗಳು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿವೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಹೆಚ್.ಎ.ಆಂಜನಪ್ಪ ಮಾತನಾಡಿ, ದಲಿತ ಜನಾಂಗದ ಅಪ್ರತಿಮ ನಾಯಕರಾದ ಶ್ರೀನಿವಾಸಪ್ರಸಾದ್ ಅವರ ಅಗಲಿಕೆಯಿಂದ ನಮ್ಮ ಜನಾಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅಂಬೇಡ್ಕರ್ ಅವರ ಆಶಯಗಳನ್ನು ಅನುಸರಿಸಿಕೊಂಡು ಶೋಷಿತರ ಪರವಾಗಿ ಹೋರಾಟ ಮಾಡಿಕೊಂಡು ಬೆಳೆದ ಇವರು ದಲಿತ ಸಮುದಾಯದ ದೊಡ್ಡ ನಾಯಕರಾಗಿ ಬೆಳೆದರು. ಶ್ರೀನಿವಾಸ ಪ್ರಸಾದ್ ಅವರು ಆರು ಬಾರಿ ಲೋಕಸಭಾ ಸದಸ್ಯರಾಗಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಹೆಸರು ಮಾಡಿದ್ದರು ಎಂದು ಹೇಳಿದರು.
ಮುಖಂಡ ಚಂದ್ರಶೇಖರ ಬಾಬು, ಎಸ್.ಸಿ.ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್, ಅಂಜನಮೂರ್ತಿ, ನಗರ ಅಧ್ಯಕ್ಷ ಹನುಮಂತರಾಯಪ್ಪ, ನಗರ ಪಾಲಿಕೆ ಮಾಜಿ ಸದಸ್ಯ ಮುನಿಯಪ್ಪ, ಮಾಜಿ ಟೂಡಾ ಸದಸ್ಯ ಪ್ರತಾಪ್, ಮುಖಂಡರಾದ ಗಂಗಾಧರ್, ಸಿದ್ಧಗಂಗಯ್ಯ, ಗಿರೀಶ್, ಪಾಪಣ್ಣ, ವರದಯ್ಯ ಮೊದಲಾದವರು ಭಾಗವಹಿಸಿದ್ದರು.