ತುಮಕೂರು: ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗೆ ತುಮಕೂರು ಜಿಲ್ಲೆ ಭಾಗದಲ್ಲಿ 11 ಕಿ.ಮೀ. ದೂರದ ಭೂಸ್ವಾಧೀನ ಬಾಕಿ ಇದ್ದು, ಅದನ್ನು ಪೂರ್ಣಗೊಳಿಸಿ 2026 ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಈ ಯೋಜನೆಯನ್ನು ಜನರಿಗೆ ಸಮರ್ಪಣೆ ಮಾಡುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಭಾನುವಾರ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡಿದ ಸಚಿವ ಸೋಮಣ್ಣ, 2010-11ರಲ್ಲಿ ತುಮಕೂರು-ರಾಯದುರ್ಗ ರೈಲು ಮಾರ್ಗ ಯೋಜನೆ ಆರಂಭಗೊಂಡಿದ್ದು ಆಂಧ್ರಪ್ರದೇಶದಲ್ಲಿ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಿದೆ. ನಮ್ಮ ಜಿಲ್ಲೆಯ ಕಾಮಗಾರಿ ಬಾಕಿ ಉಳಿದಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗದ ಕಾರಣ ಯೋಜನೆ ವಿಳಂಬವಾಗಿದೆ. ಯೋಜನೆ ಯಶಸ್ವಿಯಾಗಲು ರಾಜ್ಯ ಸರ್ಕಾರದ ಹೊಣೆಗಾರಿಕೆಯೂ ಮುಖ್ಯ. ಈ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ, ಬಾಕಿ ಇರುವ 11 ಕಿ.ಮೀ ದೂರದ ಜಮೀನು ಸ್ವಾಧೀನ ಕಾರ್ಯ ಮುಗಿಸಿ ಕಾಮಗಾರಿಯ ವೇಗ ಹೆಚ್ಚಿಸಿ 2026ರ ವೇಳೆಗೆ ಪ್ರಧಾನಿ ಮೋದಿಯವರ ನೇತೃತ್ವದ ಕಾರ್ಯಕ್ರಮದಲ್ಲಿ ಜನರಿಗೆ ಸಮರ್ಪಣೆ ಮಾಡುವುದಾಗಿ ಹೇಳಿದರು.
ಇದೇ ರೀತಿ ತುಮಕೂರು –ದಾವಣಗೆರೆ ರೈಲು ಮಾರ್ಗದ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸುವ ಪ್ರಯತ್ನ ಮಾಡುವುದಾಗಿ ಹೇಳಿದ ಸಚಿವ ವಿ.ಸೋಮಣ್ಣ, ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಶೇಕಡ 10ರಷ್ಟು ಕೆಲಸ ಮಾಡಿದರೆ ಈ ದೇಶ ರಾಮರಾಜ್ಯ ಆಗಿಬಿಡುತ್ತದೆ ಎಂದು ಕೇಂದ್ರ ಸರ್ಕಾರದ ಆಡಳಿತ ವೈಖರಿ ಶ್ಲಾಘಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಚಾಲನೆಗೊಂಡ ಯೋಜನೆಗಳನ್ನು 3-4 ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಎಂಬ ಪ್ರಧಾನಿ ಮೋದಿ ಸರ್ಕಾರದ ದೂರದೃಷ್ಟಿ ಚಿಂತನೆ, ಯೋಜನೆಯ ಕಾಲಮಿತಿ, ಅಧಿಕಾರಿಗಳ ಮೇಲಿನ ಹಿಡಿತ ಸರ್ಕಾರದಲ್ಲಿದೆ. ತುಮಕೂರು ರೈಲು ನಿಲ್ದಾಣವನ್ನು ಹೈಟೆಕ್ ನಿಲ್ದಾಣವಾಗಿ ನಿರ್ಮಾಣ ಮಾಡಲು ಈ ಸಾಲಿನ ಬಜೆಟ್‍ನಲ್ಲಿ ಹಣ ಮೀಸಲಿಡಲು ಮನವಿ ಮಾಡುತ್ತೇನೆ. ಹಂತಗಳಲ್ಲಿ ತುಮಕೂರಿಗೆ ವಿವಿಧ ಯೋಜನೆಗಳನ್ನು ತರುವ ಪ್ರಯತ್ನ ಮಾಡುವುದಾಗಿ ಹೇಳಿದರು.
ನನ್ನ ಜೀವನದಲ್ಲಿ ಬಯಸದೇ ಬಂದ ಭಾಗ್ಯವೆಂದರೆ ತುಮಕೂರು ಜನ ನನ್ನನ್ನು ಗೆಲ್ಲಿಸಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಮಂತ್ರಿ ಮಾಡಿದೆ. ಇದೆಲ್ಲಾ ತುಮಕೂರು ಕ್ಷೇತ್ರದ ಜನರ ಕೊಡುಗೆ. ನಿಮ್ಮ ನಿರೀಕ್ಷೆ ಹುಸಿ ಮಾಡದೆ, ಸಣ್ಣ ಕಳಂಕ ಬಾರದಂತೆ ನಾನು ಕೆಲಸ ಮಾಡಿ ನಿಮ್ಮ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸೋಮಣ್ಣ ಹೇಳಿದರು.
ಶಾಸಕ ಸುರೇಶ್‍ಗೌಡ ಮಾತನಾಡಿ, ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಜಿಲ್ಲೆಯ ಜನರಿಗೆ ನೀರು ಕೊಡಬೇಕು. ರಾಮನಗರ ಜಿಲ್ಲೆಗೆ ಪೈಪ್‍ಗಳಲ್ಲಿ ಹೇಮಾವತಿ ನೀರು ತೆಗೆದುಕೊಂಡುಹೋಗುವ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಬೇಕು, ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ 5 ಸಾವಿರ ಕೋಟಿ ರೂ. ಅನುದಾನ ಕೊಡಿಸುವ ಕೆಲಸ ಮಾಡಬೇಕು, ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಒಂದು ಲಕ್ಷ ಜನರಿಗೆ ಉದ್ಯೋಗ ದೊರಕಿಸುವ ಪ್ರಯತ್ನ ಮಾಡಬೇಕು ಎಂದು ಸಚಿವ ಸೋಮಣ್ಣರಿಗೆ ಮನವಿ ಮಾಡಿದರು.
ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸಿ.ಬಿ.ಸುರೇಶ್‍ಬಾಬು, ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಸುಧಾಕರ್‍ಲಾಲ್, ಮಸಾಲ ಜಯರಾಂ, ಹೆಚ್.ನಿಂಗಪ್ಪ, ನೆ.ಲ.ನರೇಂದ್ರಬಾಬು, ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಮಧುಗಿರಿ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಗರಾಜು, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಾದ ಎಲ್.ಸಿ.ನಾಗರಾಜು, ಅನಿಲ್‍ಕುಮಾರ್, ಗುಬ್ಬಿ ನಾಗರಾಜು, ದಿಲೀಪ್‍ಕುಮಾರ್ ಬೆಟ್ಟಸ್ವಾಮಿಗೌಡ, ವೈ.ಹೆಚ್.ಹುಚ್ಚಯ್ಯ, ಅಂಬಿಕಾ ಹುಲಿನಾಯ್ಕರ್, ವಿನಯ್ ಬಿದರೆ, ಕೊಂಡವಾಡಿ ಚಂದ್ರಶೇಖರ್, ಹೊನ್ನಗಿರಿಗೌಡ, ಎಸ್.ಪಿ.ಚಿದನಂದ್, ಚೌದ್ರಿ ರಂಗಪ್ಪ ಮೊದಲಾದವರು ಭಾಗವಹಿಸಿದ್ದರು.
ಇದಕ್ಕೂ ಮೊದಲು ನಗರದ ಎಸ್‍ಐಟಿ ಬಳಿಯಿಂದ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿ, ಬೃಹತ್ ಬೈಕ್ ರ್ಯಾಲಿಯೊಂದಿಗೆ ಮೆರವಣಿಗೆಯಲ್ಲಿ ಕರೆತಂದರು.