ತುಮಲ್ ಫಲಿತಾಂಶ : ಮೇಲುಗೈ ಸಾಧಿಸಿದ ಕಾಂಗ್ರೆಸ್

ತುಮಕೂರು, – ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ.

ನಗರದ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿರವರ ಸಮಕ್ಷದಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿ 10 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟವಾಯಿತು.

ತುಮಕೂರು ಗ್ರಾಮಾಂತರ, ತಿಪಟೂರು, ಮಧುಗಿರಿ, ಪಾವಗಡ ಹಾಗೂ ಗುಬ್ಬಿ ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಕುಣಿಗಲ್, ಸಿರಾ, ಕೊರಟಗೆರೆ ತಾಲ್ಲೂಕಿನಿಂದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು, ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದಾರೆ.

ತುಮಕೂರು ತಾಲ್ಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಎಂ. ನಂಜೇಗೌಡ 83 ಮತಗಳನ್ನು ಪಡೆದು ಹೆಚ್.ಕೆ. ರೇಣುಕಾಪ್ರಸಾದ್ (66 ಮತ) ರವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಗುಬ್ಬಿ ತಾಲ್ಲೂಕಿನಿಂದ ಶಾಸಕ ಹಾಗೂ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ರವರ ಪತ್ನಿ ಭಾರತಿದೇವಿ ಕೆ.ಪಿ. ಅವರು 68 ಮತಗಳನ್ನು ಪಡೆದು ಚಂದ್ರಶೇಖರ್ ಜಿ. (52 ಮತ) ರವರ ವಿರುದ್ಧ ಜಯಗಳಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಬಿ.ಎನ್. ಶಿವಪ್ರಕಾಶ್ ಅವರು 82 ಮತ ಪಡೆದು ಎಸ್. ರಾಜಶೇಖರ್ (27 ಮತ) ಅವರ ವಿರುದ್ದ ಗೆಲುವು ಸಾಧಿಸಿದ್ದಾರೆ.

ತಿಪಟೂರು ತಾಲ್ಲೂಕಿನಿಂದ ಸ್ಪರ್ಧಿಸಿದ್ದ ಎಂ.ಕೆ. ಪ್ರಕಾಶ್ ಅವರು 105 ಮತಗಳನ್ನು ಪಡೆದು ತ್ರಿಯಂಬಕ (34 ಮತ) ವಿರುದ್ಧ ವಿಜಯಿಯಾಗಿದ್ದಾರೆ.

ತುರುವೇಕೆರೆ ತಾಲ್ಲೂಕಿನಿಂದ ಸಿ.ವಿ. ಮಹಲಿಂಗಯ್ಯ 85 ಮತಗಳನ್ನು ಪಡೆದು ಪಿ.ಟಿ. ಗಂಗಾಧರಯ್ಯ ವಿರುದ್ಧ ಜಯಗಳಿಸಿದ್ದಾರೆ.

ಕುಣಿಗಲ್ ತಾಲ್ಲೂಕಿನಿಂದ ಡಿ. ಕೃಷ್ಣಕುಮಾರ್ ಅವರು 126 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಮಧುಗಿರಿ ತಾಲ್ಲೂಕಿನಿಂದ ಬಿ. ನಾಗೇಶ್‍ಬಾಬು (61 ಮತ), ಕೊರಟಗೆರೆ ತಾಲ್ಲೂಕಿನಿಂದ ಸಿದ್ದಗಂಗಯ್ಯ ವಿ. (78), ಸಿರಾ ತಾಲ್ಲೂಕಿನಿಂದ ಎಸ್.ಆರ್.ಗೌಡ 84 ಮತ ಹಾಗೂ ಪಾವಗಡ ತಾಲ್ಲೂಕಿನಿಂದ ಚಂದ್ರಶೇಖರರೆಡ್ಡಿ ಅವರು 29 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

Leave a Reply

Your email address will not be published. Required fields are marked *