ತುಮಕೂರು:ತುಮಕೂರು ನಗರದ 26ನೇ ವಾರ್ಡಿನಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡಲು ನಿರಂತರವಾಗಿ ಪ್ರಯತ್ನಿಸಿದ್ದು, ಶೇ80ರಷ್ಟು ಅಭಿವೃದ್ದಿ ಕೆಲಸಗಳು ಆಗಿವೆ. ಇದಕ್ಕೆ ಈ ವಾರ್ಡಿನ ನಾಗರಿಕ ಸಮಿತಿಗಳು ಕಾರಣ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ 26ನೇ ವಾರ್ಡಿನ ನಾಗರಿಕ ಸಮಿತಿ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಮಹಾದ್ವಾರ,ಆಯುಷ್ಮಾನ ಭಾರತ ಚಿಕಿತ್ಸಾ ಕೇಂದ್ರದ ಹಾಗೂ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ನಗರದ ಐದಾರು ನಾಗರಿಕ ಸಮಿತಿಗಳು ಸಕ್ರಿಯವಾಗಿ ವಾರ್ಡಿನಲ್ಲಿ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದ್ದು, ಅವುಗಳಲ್ಲಿ 26ನೇ ವಾರ್ಡಿನ ನಾಗರಿಕ ಸಮಿತಿಯೂ ಒಂದು.ನಾಗರಿಕ ಸಮಿತಿಯವರು ಹೇಳುವ ಕೆಲಸಗಳನ್ನು ಇಲ್ಲಿನ ಕಾರ್ಪೋರೇಟರ್ ಆದ ಮಲ್ಲಿಕಾರ್ಜುನ್ ಅವರು ಚಾಚೂ ತಪ್ಪದೆ ಮಾಡುವ ಮೂಲಕ ಎಲ್ಲಾ ನಾಗರಿಕ ಸೌಲಭ್ಯಗಳು ಜನರಿಗೆ ದೊರಕುವಂತೆ ಮಾಡಿದ್ದಾರೆ ಎಂದರು.
ಕಳೆದ ಎಂಟು ತಿಂಗಳ ಹಿಂದೆ ವಾರ್ಡಿನ ಕಾರ್ಪೋರೇಟರ್ ಮಲ್ಲಿಕಾರ್ಜುನ್ ಮತ್ತು ರಾಕ್‍ಲೈನ್ ರವಿ ಅವರು ಎಸ್.ಐ.ಟಿ. ಮುಖ್ಯ ರಸ್ತೆ ಆರಂಭವಾಗುವ ಕೆಂಪಣ್ಣನ ಅಂಗಡಿ ಬಳಿ ಡಾ.ಶ್ರೀಶಿವಕುಮಾರಸ್ವಾಮೀಜಿ ಹೆಸರಿನಲ್ಲಿ ಮುಖ್ಯ ದ್ವಾರವೊಂದನ್ನು ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು.ಪಾಲಿಕೆಯಿಂದ ಒಪ್ಪಿಗೆ ದೊರೆತ ನಂತರ, ದಾನಿಗಳ ಸಹಾಯದಿಂದ ಇಂದು ಅತ್ಯುತ್ತಮವಾದ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಹೆಸರಿನಲ್ಲಿ ತಲೆ ಎತ್ತಿದೆ.ಅದೇ ರೀತಿ ಭಾರತ ಸರಕಾರದ ಆಯುಷ್ಮಾನ ಭಾರತ್ ಅಡಿಯಲ್ಲಿ ಚಿಕಿತ್ಸಾ ಕೇಂದ್ರವೊಂದು ಇಂದು ಉದ್ಘಾಟನೆಗೊಳ್ಳುತ್ತಿದ್ದು, ಈ ಭಾಗದ ನಾಗರಿಕರಿಗೆ ಮನೆ ಬಾಗಿಲಲ್ಲಿಯೇ ಉತ್ತಮ ಚಿಕಿತ್ಸೆ ದೊರೆಯಲಿದೆ. ಹಾಗೆಯೇ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ಅವರ ತಂದೆಯವರು,ತಮ್ಮ ಹೆಸರಿನಲ್ಲಿ ಗ್ರಂಥಾಲಯ ಕಟ್ಟಡವೊಂದನ್ನು ನಿರ್ಮಿಸಿಕೊಟ್ಟಿದ್ದು,ಅದರ ಉದ್ಗಾಟನೆ ಸಹ ನಡೆದಿದೆ.ಮೂರು ಸಹ ಬಹಳ ಅತ್ಯುತ್ತಮ ಕಾರ್ಯಕ್ರಮಗಳಾಗಿವೆ.ಈ ಭಾಗದ ನಾಗರಿಕರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂಬ ವಿಶ್ವಾಸವನ್ನು ಶಾಸಕರು ವ್ಯಕ್ತಪಡಿಸಿದರು.
ಡಾ.ಶ್ರೀಶಿವಕುಮಾರಸ್ವಾಮಿ ಮುಖ್ಯದ್ವಾರ,ಆಯುಷ್ಮಾನ್ ಭಾರತ ಚಿಕಿತ್ಸಾ ಕೇಂದ್ರ ಹಾಗೂ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯಸ್ವಾಮೀಜಿ ಮಾತನಾಡಿ,ಗಾಂಧಿಜೀ ರಾಮರಾಜ್ಯದ ಕನಸು ಕಂಡ ಹಾಗೆ, ಡಾ.ಶ್ರೀಶಿವಕುಮಾರಸ್ವಾಮೀಜಿಗಳು ದಾಸೋಹ ರಾಜ್ಯದ ಕನಸು ಕಂಡವರು.ಅವರ ಶೈಕ್ಷಣಿಕ ಕಾಳಜಿ ಇಡೀ ಪ್ರಪಂಚಕ್ಕೆ ಗೊತ್ತಿದೆ.ಹಾಗಾಗಿ ತುಮಕೂರಿನ ಪ್ರತಿ ಕಣ ಕಣದಲ್ಲಿಯೂ ಅವರ ಹೆಸರು ಅಚ್ಚೊತ್ತಿದೆ.ಹಾಗಾಗಿ ಆವರ ನೆನಪನ್ನು ಚಿರಂಜೀವಿಯಾಗಿಸಲು ಕಾರ್ಪೋರೇಟರ್ ಮಲ್ಲಿಕಾರ್ಜುನಯ್ಯ ಮತ್ತು ರಾಕ್‍ಲೈನ್ ರವಿಕುಮಾರ್ ಮಾತನಾಡಿದ್ದಾರೆ.ಅವರಿಂದ ಇಂತಹ ಹಲವು ಜನೋಪಕಾರಿ ಕೆಲಸಗಳು ಆಗಲಿ ಎಂದರು.
ಇಂದು ಬೆಂಗಳೂರಿನಿಂದ ಜನರು ತುಮಕೂರಿಗೆ ಬರುತ್ತಿರುವುದು ಒಳ್ಳೆಯ ಬೆಳೆವಣಿಗೆ. ಶಾಸಕರು ತಾನು ಜನಪ್ರತಿನಿಧಿ ಎಂಬ ಆಹಂ ಇಲ್ಲದೆ ಎಲ್ಲರೊಂದಿಗೆ ಬೆರೆತು ಕೆಲಸ ಮಾಡುತ್ತಾರೆ.ಅವರಿಂದ ತುಮಕೂರು ಮತ್ತಷ್ಟು ಅಭಿವೃದ್ದಿ ಪಥದತ್ತ ಸಾಗಲಿ ಎಂದು ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿಗಳು ಶುಭ ಹಾರೈಸಿದರು.
ಪಾಲಿಕೆಯ 26ನೇ ವಾರ್ಡಿನ ಸದಸ್ಯ ಹೆಚ್.ಮಲ್ಲಿಕಾರ್ಜುನಯ್ಯ ಮಾತನಾಡಿ,ವಾರ್ಡಿನ ಜನರ ಆಶೀರ್ವಾದದಿಂದ ಕಳೆದ ಐದು ವರ್ಷಗಳ ಕಾಲ ಜನರ ಸೇವೆ ಮಾಡಲು ಅವಕಾಶ ದೊರೆತ್ತಿದ್ದು,ನಮ್ಮ ಕೈಲಾದ ಮಟ್ಟಿಗೆ ನಾಗರಿಕರಿಗೆ ಸೌಲಭ್ಯಗಳನ್ನು ದೊರಕಿಸಲು ಪ್ರಯತ್ನ ಪಟ್ಟಿದ್ದೇನೆ. ಪ್ರಮುಖವಾಗಿ ರಸ್ತೆ, ಚರಂಡಿ,ಲೇಟು, ಪಾರ್ಕುಗಳ ಅಭಿವೃದ್ದಿ, ಶುದ್ದಿ ಕುಡಿಯುವ ನೀರಿನ ಘಟಕ,ತರಕಾರಿ ಮಾರುಕಟ್ಟೆ,ಸುಲಭ ಶೌಚಾಲಯ,ಪೌರಕಾರ್ಮಿಕರ ವಿಶ್ರಾಂತಿ ಕೊಠಡಿ, ಡಾ.ಶ್ರೀಶಿವ ಕುಮಾರಸ್ವಾಮೀಜಿಗಳ ಮುಖ್ಯದ್ವಾರ,ಆಯುಷ್ಮಾನ್ ಭಾರತ ಚಿಕಿತ್ಸಾ ಕೇಂದ್ರ, ಗ್ರಂಥಾಲಯ ಜೊತೆಗೆ, ಪ್ರತಿ ತಿಂಗಳು ಅಜಾದ್ ಚಂದ್ರಶೇಖರ್ ಪಾರ್ಕಿನಲ್ಲಿ ನಾಗರಿಕರಿಗೆ ರಕ್ತದೊತ್ತಡ,ಮಧುಮೇಹ ತಪಾಸಣೆ,ಬೇಸಿಗೆ ಶಿಬಿರ, ಮಕ್ಕಳ ಸಂತೆ, ರಾಜ್ಯೋತ್ಸವ ಮತ್ತಿತರರು ಕಾರ್ಯಕ್ರಮಗಳನ್ನು ನಿರಂತರಾಗಿ ನಡೆಸಿಕೊಂಡು ಬರಲಾಗುತ್ತಿದೆ.ಅಲ್ಲದೆ ಮನೆ ಮನೆಗೆ ಗ್ಯಾಸ್ ಸಂಪರ್ಕ, ಸ್ಮಾರ್ಟ ಸಿಟಿಯಿಂದ ಬಡಾವಣೆಗೆ ಸಿಸಿ ಕ್ಯಾಮರ್ ಅಳವಡಿಕೆಯಂತಹ ಕೆಲಸಗಳನ್ನು ಮಾಡಲಾಗಿದೆ.ಇದು ನನಗೆ ತೃಪ್ತಿ ತಂದಿದೆ. ನನ್ನದೊಂದಿಗೆ ಸಹಕರಿಸಿದ ಶಾಸಕರಿಗೂ,ನಾಗರಿಕ ಸಮಿತಿಯ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಕೊಪ್ಪಲ್ ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.