ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ಜೂನ್ 25ರಂದು ತುಮಕೂರು ಬಂದ್

ತುಮಕೂರು:ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್‍ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಜೂನ್ 20ರಂದು ನೀರಾವರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಿಂಕ್ ಕೆನಾಲ್‍ನ ಸಾಧಕ, ಭಾದಕಗಳ ಬಗ್ಗೆ ತಜ್ಞರ ವರದಿ ಬರುವವರೆಗೂ ಕಾಮಗಾರಿ ನಿಲ್ಲಿಸುವಂತೆ ತುಮಕೂರು ಜಿಲ್ಲೆಯ ಶಾಸಕರು ಮಾಡಿದ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಜೂನ್ 25ರಂದು ಕರೆದಿರುವ ತುಮಕೂರು ಬಂದ್ ಜರುಗಲಿದೆ ಎಂದು ಹೇಮಾವತಿ ಲಿಂಕ್‍ಕೆನಾಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕರು ಹಾಗೂ ಶಾಸಕರಾದ ಎಂ.ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ನಮ್ಮದೆ ಸರಕಾರವಿದೆ.ನಾವು ಏಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಮಾಡಿಯೇ ತೀರುತ್ತೇವೆ ಎಂಬಂತೆ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಬಂದಂತೆ ಕಾಣುತ್ತಿದೆ.ತಜ್ಞರ ವರದಿ ಬರುವವರೆ ಗಾದರೂ ಕಾಮಗಾರಿ ಸ್ಥಗೀತಗೊಳಿಸಿ ಎಂದರೆ ಒಪ್ಪುತ್ತಿಲ್ಲ.ತುಮಕೂರು ಜಿಲ್ಲೆಯ ಜನರ ಮನವಿಗೆ ಸ್ಪಂದನೆ ಇಲ್ಲ ಎಂದಾದ ಮೇಲೆ,ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ.ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಜೈಲ್‍ಭರೋ, ಪಾದಯಾತ್ರೆ, ಗೋಲಿಬಾರ್‍ನಂತಹ ಯಾವ ಹೋರಾಟಕ್ಕೂ ನಾವು ಸಿದ್ದ.ಜಿಲ್ಲೆಯ ಜನರಿಗಾಗಿ ನನ್ನ ಪ್ರಾಣ ನೀಡಲು ಸಿದ್ದರಿದ್ದೇವೆ. ಜೂನ್ 25ರಂದು ಕರೆದಿರುವ ತುಮಕೂರು ಬಂದ್ ನಡೆಯಲಿದೆ ಎಂದರು.

ಶಾಸಕ ಬಿ.ಸುರೇಶಗೌಡ ಮಾತನಾಡಿ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರೆದಿದ್ದ ಸಭೆಯಲ್ಲಿ ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್‍ನಿಂದ ಜಿಲ್ಲೆಯ ಜನರಿಗೆ ಆಗುವ ಸಮಸ್ಯಗಳ ಬಗ್ಗೆ ಎಷ್ಟೇ ಮನವರಿಕೆ ಮಾಡಿಕೊಟ್ಟರು ಅವರ ಹಟವನ್ನು ಬಿಡುತ್ತಿಲ್ಲ.ಹಾಗಾಗಿ ಜೂನ್ 25ರ ತುಮಕೂರು ಬಂದ್ ನಡೆಯಲಿದೆ.ನಮ್ಮದೇ ಸರಕಾರವಿದೆ,ಏನು ಬೇಕಾದರೂ ಮಾಡುತ್ತೇವೆ ಎಂಬ ಧೋರಣೆ ಅವರಲ್ಲಿದೆ.ಹೇಮಾವತಿ ಲಿಂಕ್ ಕೆನಾಲ್‍ನಿಂದ 70-167ಕಿ.ಮಿ.ವರೆಗಿನ ಸುಮಾರು 23 ವಿತರಣಾ ನಾಲೆ,ಅಲ್ಲದೆ 28 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ತುಮಕೂರು, ಮಧುಗಿರಿ, ಕೊರಟಗೆರೆ ಪಟ್ಟಣಗಳಿಗೆ ಕುಡಿಯುವ ನೀರು ಸಿಗುವುದಿಲ್ಲ.ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿನ ತಾಲೂಕುಗಳ ನಡುವೆ ಘರ್ಷನೆ ಸಂಭವಿಸಲಿದೆ.ಹಾಗಾಗಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ರದ್ದು ಪಡಿಸಬೇಕು.ಹೇಮಾವತಿ ಮೂಲ ನಾಲೆಯ ಮೂಲಕ ಕುಣಿಗಲ್,ಮಾಗಡಿ ತಾಲೂಕುಗಳಿಗೆ ನೀರು ತೆಗೆದುಕೊಂಡು ಹೋಗಲಿ ಎಂದು ಒತ್ತಾಯಿಸಿದರು.

ಹೇಮಾವತಿ ನಾಲಾ ವಿಚಾರಾಗಿ ಜಿಲ್ಲೆಗೆ ಅನ್ಯಾಯವಾದರೂ ಜಿಲ್ಲೆಯ ಇಬ್ಬರು ಸಚಿವರು ಬಾಯಿ ಬಿಡುತ್ತಿಲ್ಲ.ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಗೆ ಸೇರಿದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸಿದ್ದಾರೆ.ಮುಂಬರುವ ಜಿ.ಪಂ.,ತಾ.ಪಂ.,ಮಹಾನಗರ ಪಾಲಿಕೆ ಚುನಾವಣೆಗಳಲ್ಲಿಯೂ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಜಿಲ್ಲೆಯ ಸಚಿವರುಗಳು ಸರಕಾರದ ಮೇಲೆ ಒತ್ತಡ ತಂದು ಕಾಮಗಾರಿ ನಿಲ್ಲಿಸಬೇಕು.ಅಲ್ಲಿಯವರೆಗೆ ಹೋರಾಟ ನಿರಂತರ ಎಂದು ಶಾಸಕ ಸುರೇಶಗೌಡ ತಿಳಿಸಿದರು.

ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ,ಹೇಮಾವತಿ ಏಕ್ಸ್‍ಪ್ರೆಸ್ ಲಿಂಕ್ ಕೆನಾಲ್ ತುಮಕೂರು ಜಿಲ್ಲೆಯ ಜನರ ಪಾಲಿಗೆ ಮರಣ ಶಾಸನ. ಹಾಗಾಗಿ ಯೋಜನೆಯನ್ನು ಸರಕಾರ ರದ್ದು ಮಾಡುವವರೆಗೂ ಹೋರಾಟ ನಿಲ್ಲದು,ಎಲ್ಲಾ ರೀತಿಯ ಹೋರಾಟಕ್ಕೂ ಜಿಲ್ಲೆಯ ಜನರು ಸಿದ್ದರಿದ್ದಾರೆ.ಮುಂದಾಗುವ ಅನಾಹುತಕ್ಕೆ ಸರಕಾರವೇ ಹೊಣೆ ಎಂದರು.
ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ,ತುಮಕೂರು ಬಂದ್‍ಗೆ ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು ಮಂಚೂಣಿಯಲ್ಲಿ ನಿಂತು ಕೆಲಸ ಮಾಡಲಿವೆ.ಜೂನ್ 25ರಂದು ಬೆಳಗ್ಗೆ 10:30ಕ್ಕೆ ಟೌನ್‍ಹಾಲ್‍ನಿಂದ ಎಂ.ಜಿ.ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಮೆರವಣಿಗೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇದರಲ್ಲಿ ಜಿಲ್ಲಾ ಹೊಟೇಲ್ ಮಾಲೀಕರ ಸಂಘ,ಲಾರಿ,ಬಸ್, ಆಟೋ ಚಾಲಕರ ಸಂಘ,ಚಿನ್ನಬೆಳ್ಳಿ ಅಂಗಡಿ ಮಾಲೀಕರ ಸಂಘದವರು ಸಹ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಹೇಮಾವತಿ ಲಿಂಕ್ ಕೆನಾಲ್ ಹೋರಾಟ ಸಮಿತಿ ಸಂಚಾಲಕ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಇದೊಂದು ಜಿಲ್ಲೆಯ ಜನರ ಅಳಿವು, ಉಳಿವಿನ ಪ್ರಶ್ನೆಯಾಗಿದೆ.ಕಳೆದ ಎರಡು ತಿಂಗಳಿನಿಂದ ವಿವಿಧ ರೀತಿಯ ಹೋರಾಟ ನಡೆಸುತ್ತಾ ಬಂದರೂ ಸರಕಾರ ಮೊಂಡತನ ಪ್ರದರ್ಶಿಸುತ್ತಿದೆ.ಹಾಗಾಗಿ ತುಮಕೂರು ಬಂದ್‍ನಂತಹ ಹೋರಾಟ ಅನಿವಾರ್ಯ.ಹಾಗಾಗಿ ಜೂ.25ರಂದು ತುಮಕೂರು ಬಂದ್ ನಡೆಯಲಿದ್ದು, ಸಾರ್ವಜನಿಕರು ಬಂದ್ ನಲ್ಲಿ ಭಾಗವಹಿಸು ವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಂಚಾಕ್ಷರಯ್ಯ,ಉರ್ಡಿಗೆರೆ ಲಕ್ಷ್ಮೀಶ್,ಕೆ.ಪಿ.ಮಹೇಶ್,ಓಂ.ನಮೋ.ನಾರಾಯಣ,ಬೆಳಗುಂಬ ಪ್ರಭಾಕರ್, ಸೊಗಡು ಕುಮಾರಸ್ವಾಮಿ,ಶಬ್ಬೀರ ಅಹಮದ್,ರಾಮಚಂದ್ರರಾವ್,ಡಿ.ಎಸ್.ಎಸ್.ನರಸಿಂಹಯ್ಯ,ಕೆ.ಹರೀಶ್, ತರಕಾರಿ ಮಹೇಶ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *