ಜನರ ಕಣ್ಮನ ಸೆಳೆದ ತುಮಕೂರು ದಸರಾ, ಶಾಂತತೆಯಿಂದ ಹೆಜ್ಜೆ ಹಾಕಿದ ಅಂಬಾರಿ ಹೊತ್ತ ಶ್ರೀರಾಮ

ತುಮಕೂರು : ತುಮಕೂರಿನ ಎರಡನೇ ವರ್ಷದ ದಸರಾ ವಿಜೃಂಭಣೆಯಿಂದ ನಡೆಯಿತು, ಅಂಬಾರಿ ಹೊತ್ತ ಆನೆ ಶ್ರೀರಾಮ ಶಾಂತತೆಯಿಂದ ಹೆಜ್ಜೆ ಹಾಕಿ ಎಲ್ಲರ ಕಣ್ಮನ ಸೆಳೆದ.

ಮಧ್ಯಾಹ್ನ 12ಗಂಟೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ನಂದಿ ಧ್ವಜಕ್ಕೆ ಪೂಜೆ ನೆರವೇರಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು, 50ಕ್ಕೂ ಹೆಚ್ಚು ದೇವರುಗಳು, ಪೊಲೀಸ್ ಕುದುರೆ ಸವಾರಿ, ನಾಟಿ ಎತ್ತುಗಳ ಮೆರವಣಿಗೆಯು ನಗರದ ಬಿಜಿಎಸ್ (ಟೌನ್ ಹಾಲ್ ವೃತ್ತ) ವೃತ್ತದಿಂದ ಪ್ರಾರಂಭಗೊಂಡಿತು.

ಎರಡು ಲಕ್ಷ್ಮಿ ಆನೆಗಳ ಜೊತೆ ಅಂಬಾರಿ ಹೊತ್ತು ಬಂದ ಶ್ರೀರಾಮ ಆನೆಯ ಮೇಲೆ ನಾಡದೇವತೆಗೆ ಗೃಹ ಸಚಿವ ಡಾ.ಜಿ,ಪರಮೇಶ್ವರ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಅಂಬಾರಿ ಮೆರವಣಿಗೆಯು ಬಿಜಿಎಸ್ ವೃತ್ತದಿಂದ ಕೋಟೆ ಆಂಜನೇಯ ಸ್ವಾಮಿ ಸರ್ಕಲ್‍ನಿಂದ ಕೋತಿತೋಪು, ಅಲ್ಲಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್‍ನಿಂದ ನಗರದ ಹೈಸ್ಕೂಲ್ ಮೈದಾನವನ್ನು ತಲುಪಿತು.

ದಸರಾ ಅಂಬಾರಿ ಸಾಗಿದ ರಸ್ತೆ ಇಕ್ಕಲೆಗಳೆಲ್ಲಾ ಜನಸ್ತೋಮ ನಿಂತು ಶ್ರೀರಾಮ ಅಂಬಾರಿ ಹೊತ್ತು ಇಬ್ಬರು ಲಕ್ಷ್ಮೀಯರೊಂದಿಗೆ ಸಾಗುತ್ತಿರುವುದನ್ನು ಕಂಡು ಮೈಸೂರು ದಸರಾ ತುಮಕೂರಿಗೆ ಬಂದಂತೆ ಬಾಸವಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಬಾರಿ ದಸರಾ ಅಂಬಾರಿಯನ್ನು ನೋಡಲು ವಿವಿಧ ತಾಲ್ಲೂಕು ಮತ್ತು ಜಿಲ್ಲೆಗಳಿಂದ ಜನರು ಬಂದಿದ್ದರಿಂದ ಟೌನ್ ಹಾಲ್, ಕೋಟೆ ಆಂಜಿನೇಯ ಸ್ವಾಮಿ ಸರ್ಕಲ್, ಕೋತಿ ತೋಪು, ಮತ್ತು ಶಿವಕುಮಾರ ಸ್ವಾಮೀಜಿ ಸರ್ಕಲ್‍ನಲ್ಲಿ ಸಾವಿರಾರು ಜನ ಅಂಬಾರಿಯನ್ನು ಕಣ್ತುಂಬಿಕೊಂಡರು.

ಮೆರವಣಿಗೆಯಲ್ಲಿ ಸಾಗುತ್ತಿದ್ದ ಗ್ರಾಮ ದೇವತೆಗಳಿಗೆ ಹೆಲಿಕಾಪ್ಟರ್‍ನಿಂದ ಪುಷ್ಪಗಳ ಮಳೆಯನ್ನು ಸುರಿಸಲಾಯಿತು. ಆಕಾಶದಿಂದ ಸುರಿದ ಹೂವಿನ ಮಳೆಯು ಮೆರವಣಿಗೆಯ ಮಾರ್ಗದಲ್ಲಿದ್ದ ಜನರನ್ನು ಆನಂದಭರಿತರನ್ನಾಗಿಸಿತು. ಪುμÁ್ಪರ್ಚನೆಯ ಸೊಬಗಿನಲ್ಲಿ ಹೂವಿನಿಂದ ಆವೃತವಾದ ದೇವರ ರಥಗಳು, ಅಂಬಾರಿ ಆನೆಗಳು, ಕಲಾತಂಡಗಳು ಎಲ್ಲವೂ ಜನಮನ ಸೆಳೆದವು.

ಮೆರವಣಿಗೆ ಮಾರ್ಗದಲ್ಲಿ ನಂದಿಧ್ವಜ, ಭೂತಕಾಳಿ ವೇಷ ಕುಣಿತ, ಸೋಮನಕುಣಿತ, ಗೊರವರ ಕುಣಿತ, ಚಕ್ಕೆಭಜನೆ, ತಮಟೆ, ಹಗಲು ವೇಷ, ಹುಲಿ ವೇಷ, ಯಕ್ಷಗಾನ, ನಾಸಿಕ್ ಡೋಲ್, ಚಿಟ್ಟಿ ಮೇಳ, ವೀರಗಾಸೆ, ಅರೆವಾದ್ಯ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ತಾಳ ಮದ್ದಳೆ, ನಾದಸ್ವರ, ಪೂಜಾ ಕುಣಿತ ಸೇರಿದಂತೆ ನೂರಾರು ಕಲಾ ತಂಡಗಳು ಕಲಾ ಪ್ರದರ್ಶನ ನೀಡುತ್ತಾ ಸಾಗಿದವು. ವಿಶೇಷವಾಗಿ ಗಾರುಡಿ ಗೊಂಬೆಗಳ ಉದ್ದನೆಯ ಪ್ರತಿರೂಪಗಳು ಮಕ್ಕಳ ಗಮನ ಸೆಳೆದವು. ಡೊಳ್ಳಿನ ದನಿಗೆ ಹೆಜ್ಜೆ ಹಾಕಿದ ವೀರರು ಭಕ್ತರನ್ನು ಆಕರ್ಷಿಸಿದವು. ದಾರಿಯುದ್ದಕ್ಕೂ ಮಕ್ಕಳಿಂದ ವೃದ್ಧರಾದಿಯಾಗಿ ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

ನೂರಾರು ಕಲಾತಂಡಗಳ ಕಲಾ ವೈಭವ, ದೇವತೆಗಳ ರಥಯಾತ್ರೆ, ಗಜಪಡೆಯ ಸೊಬಗು ಮತ್ತು ಆಕಾಶದಿಂದ ಸುರಿದ ಪುμÁ್ಪರ್ಚನೆ – ಇವೆಲ್ಲವೂ ಸೇರಿ ಈ ವರ್ಷದ ತುಮಕೂರು ದಸರಾ ಜಂಬೂ ಸವಾರಿ ಜನಮನದಲ್ಲಿ ಅಜರಾಮರ ನೆನಪು, ನಗರದ ಬೀದಿಗಳನ್ನು ಜೀವಂತಗೊಳಿಸಿದ ಈ ಮೆರವಣಿಗೆ ನಾಡಹಬ್ಬದ ನಿಜವಾದ ಭಾವವನ್ನು ಮೂಡಿಸಿತು.

ಜಂಬೂ ಸವಾರಿ ಮೆರವಣಿಗೆಯು ನಗರದ ಬಿ.ಜಿ.ಎಸ್. ವೃತ್ತದಿಂದ ಚರ್ಚ್ ಸರ್ಕಲ್, ಡೀಸಿ ಕಚೇರಿ, ಅಮಾನಿಕೆರೆ ರಸ್ತೆ, ಕೋತಿ ತೋಪು, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮಾರ್ಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪಿತು. 

ವಿಶೇಷವೆಂದರೆ ಅಂಬಾರಿ ಸಾಗಿದ ರಸ್ತೆಗಳಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಡೆಯುತ್ತಾ ಸಾಗಿದರು. ಹೈಸ್ಕೂಲ್ ಮೈದಾನಕ್ಕೆ ಅಂಬಾರಿ ಬಂದಾಗ ವಿಶೇಷ ಪೂಜೆ ಸಲ್ಲಿಸಿ, ಡಾ.ಜಿ.ಪರಮೇಶ್ವರ ಅವರು ಅಂಬು ಕಡಿದು, ಶಮೀ ಪೂಜೆ ಸಂಪನ್ನಗೊಂಡಿತು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್ ಗೌಡ, ಟಿ.ಬಿ. ಜಯಚಂದ್ರ, ಸಚಿವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಜೆ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *