ತುಮಕೂರು- ಕಲ್ಪತರುನಾಡು ತುಮಕೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಜಿಲ್ಲಾಡಳಿತದ ವತಿಯಿಂದ ಚಿತ್ತಾಕರ್ಷಕ ದಸರಾ ಉತ್ಸವವನ್ನು ಆಚರಿಸಲಾಗುತ್ತಿದ್ದು, ಅ. 2 ರಂದು ಅದ್ದೂರಿಯಾಗಿ ಜಂಬೂಸವಾರಿ ನಡೆಸುವ ಸಲುವಾಗಿ ನಗರದಲ್ಲಿಂದು ಮೂರು ಆನೆಗಳ ತಾಲೀಮು ನಡೆಸಲು ಚಾಲನೆ ನೀಡಲಾಯಿತು.
ತುಮಕೂರು ದಸರಾ ಉತ್ಸವಕ್ಕೆ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮಿ, ತಿಪಟೂರು ತಾಲ್ಲೂಕು ಕಾಡು ಸಿದ್ದೇಶ್ವರ ಮಠದ ಲಕ್ಷ್ಮಿ ಆನೆ, ಮೈಸೂರು ತುಬಾರೆ ಅರಣ್ಯದ ಶ್ರೀರಾಮ ಆನೆಗಳನ್ನು ತೊಡಗಿಸಿಕೊಂಡಿದ್ದು, ಅರಣ್ಯ ಇಲಾಖೆ ಕಚೇರಿ ಮುಂಭಾಗ ಈ ಮೂರು ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ತಾಲೀಮು ನಡೆಸಲಾಯಿತು.
ಈ ಬಾರಿ ದಸರಾದ ಜಂಬೂಸವಾರಿಯಲ್ಲಿ ಶ್ರೀರಾಮ ಆನೆ ಅಂಬಾರಿ ಹೊತ್ತು ಸಾಗಲಿದೆ.
ಜಂಬೂಸವಾರಿ ನಡೆಯಲಿರುವ ಮಾರ್ಗದಲ್ಲಿ ಎರಡು ಲಕ್ಷ್ಮಿ ಆನೆಗಳು ಹಾಗೂ ಶ್ರೀರಾಮ ಆನೆ ತಾಲೀಮು ನಡೆಸಿದ್ದು, ರಸ್ತೆಯಲ್ಲಿ ಯಾವುದೇ ಗಲಾಟೆ ಇಲ್ಲದೆ ಎರಡು ಆನೆಗಳು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು.
ನಗರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಿಂದ ಆರಂಭವಾದ ಆನೆಗಳ ಜಂಬೂಸವಾರಿ ತಾಲೀಮು ಅಶೋಕ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಿಂದ ಅಮಾನಿಕೆರೆ ಮಾರ್ಗವಾಗಿ ಹನುಮಂತಪುರ, ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆ ಬಳಸಿಕೊಂಡು ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಮೂಲಕ ಬಿ.ಎಚ್.ರಸ್ತೆ ಮಾರ್ಗವಾಗಿ ಹೆಜ್ಜೆ ಹಾಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ತಲುಪಲಿದವು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಓ ಜಿ. ಪ್ರಭು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಶಶಿಧರ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.