ತುಮಕೂರು ದಸರಾ ಜ್ಞಾನ ವೈಭವದ ಪ್ರತೀಕ – ಸಿದ್ದಗಂಗಾ ಶ್ರೀ

ತುಮಕೂರು : ನಾಡಹಬ್ಬ ದಸರಾ ಕೇವಲ ಧಾರ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿರುವ ಜ್ಞಾನ ವೈಭವದ ಉತ್ಸವವಾಗಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಸೋಮವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಹಾಸ್ಯ ಚಕ್ರವರ್ತಿ ಟಿ.ಆರ್. ನರಸಿಂಹರಾಜು ಸಾಂಸ್ಕøತಿಕ ದಸರಾ ವೈಭವ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಉತ್ಸವದಲ್ಲಿ ಮಕ್ಕಳಿಗೆ ಶೈಕ್ಷಣಿಕ ಪ್ರವಾಸದ ಅನುಭವವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ಬಾರಿ ನಗರದ ಹೆಲಿರೈಡ್, ಅಂಬಾರಿ ಬಸ್‍ಗಳಲ್ಲಿ ದೀಪಾಲಂಕಾರ ವೀಕ್ಷಣೆ, ಪಂಜಿನ ಕವಾಯತು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಸರಾ ಉತ್ಸವವು ಹೆಚ್ಚಿನ ಮೆರಗು ಪಡೆದುಕೊಂಡಿದೆ ಎಂದರು.

ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿ, ನಮ್ಮ ಭಾವನೆಗಳನ್ನು ಶುದ್ಧಗೊಳಿಸುವುದೇ ನಾಡಹಬ್ಬ ದಸರಾ ಉತ್ಸವದ ಮಹತ್ವವಾಗಿದೆ ಎಂದು ಅವರು ತಿಳಿಸಿದರು.

ಪಕ್ಷಬೇಧ ಮರೆತು ಎಲ್ಲಾ ಜನ ಪ್ರತಿನಿಧಿಗಳು, ಸಮಾಜದ ಎಲ್ಲ ವರ್ಗದವರು ಒಂದಾಗಿ ದಸರಾ ಉತ್ಸವವನ್ನು ಸಡಗರದಿಂದ ಆಚರಿಸುತ್ತಿರುವುದು ವಿಶೇಷವಾಗಿದೆ. ತುಮಕೂರು ದಸರಾ ಕಳೆದ ವರ್ಷದಿಂದ ಹೆಚ್ಚಿನ ಮೆರಗು ಪಡೆದುಕೊಂಡಿದ್ದು, ಈ ಬಾರಿ ಕಾರ್ಯಕ್ರಮಗಳು ಮತ್ತಷ್ಟು ವೈವಿಧ್ಯತೆಯಿಂದ ಕೂಡಿವೆ. ದಸರಾ ಹಬ್ಬವು ಅಧರ್ಮದ ವಿರುದ್ಧ ಧರ್ಮ ಮತ್ತು ಅಸತ್ಯದ ವಿರುದ್ಧ ಸತ್ಯದ ವಿಜಯವನ್ನು ಸೂಚಿಸುತ್ತದೆ. ನವರಾತ್ರಿಯ ಸುಸಂದರ್ಭದಲ್ಲಿ ಜಿಲ್ಲೆಯು ಸಮೃದ್ಧಿಯತ್ತ ಸಾಗಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಸ್ವಾಮೀಜಿ ಆಶಿಸಿದರು.

ಸಾಂಸ್ಕøತಿಕ ದಸರಾ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ: ಜಿ. ಪರಮೇಶ್ವರ ಅವರು ತುಮಕೂರು ದಸರಾ ಉತ್ಸವವು ಎಲ್ಲಾ ಧರ್ಮ, ಜಾತಿ, ಪಕ್ಷವೆಂಬ ಬೇಧ-ಭಾವವಿಲ್ಲದೇ ಸಡಗರದಿಂದ ಆಚರಿಸುವ ಹಬ್ಬ, ದಸರಾ ಉತ್ಸವವು ಸರ್ಕಾರಿ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ ಎಲ್ಲರನ್ನೊಳಗೊಂಡ ಜನರ ಉತ್ಸವವಾಗಬೇಕು ಎಂದರು.

ಕಳೆದ ವರ್ಷ ಪ್ರಪ್ರಥಮ ಬಾರಿಗೆ ಪ್ರಾರಂಭಿಸಲಾದ ತುಮಕೂರು ದಸರಾ ಉತ್ಸವವು ಜನಮನ್ನಣೆ ಪಡೆದು ಇಡೀ ರಾಜ್ಯದ ಗಮನ ಸೆಳೆದು ಇಂದಿನ ವೈಭವದ ದಸರಾ ಉತ್ಸವ ಆಚರಣೆಗೆ ಉತ್ತೇಜನ ನೀಡಿದೆ. ಯುವಜನತೆ ನಾಡ ಹಬ್ಬ ದಸರಾ ಉತ್ಸವವನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕೆಂದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಾಡ ಹಬ್ಬ ದಸರಾ ಉತ್ಸವವು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ ಜನ-ಮನರಂಜನೆ ಮತ್ತು ಜ್ಞಾನಾರ್ಜನೆಗೂ ವೇದಿಕೆಯಾಗಿದೆ. ಈ ಬಾರಿ 11 ದಿನಗಳ ಕಾಲ ಆಚರಿಸಲ್ಪಡುವ  ದಸರಾ ಉತ್ಸವದ ಅಂಗವಾಗಿ ಹೆಲಿ ರೈಡ್, ಹಾಟ್ ಏರ್ ಬಲೂನ್, ಪಂಜಿನ ಕವಾಯತು, ನಗರದ ಪ್ರಮುಖ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ, ಅಂಬಾರಿ ಸಿಟಿ ಬಸ್ ಪಯಣ, ಕೃಷಿ ಮೇಳ, ಪುಸ್ತಕ ಮೇಳ, ವಿಜ್ಞಾನ ಮೇಳ ಸೇರಿದಂತೆ ವಿವಿಧ ಮೇಳಗಳನ್ನು ಆಯೋಜಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನರು ಭಾಗವಹಿಸಿ ಉತ್ಸವದ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು. 

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರ, ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಕೆ.ಎನ್. ರಾಜಣ್ಣ, ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್‍ಗೌಡ, ಸಿ.ಬಿ. ಸುರೇಶ್‍ಬಾಬು, ಡಾ|| ಹೆಚ್.ಡಿ. ರಂಗನಾಥ್, ಹೆಚ್.ವಿ. ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಹಾಗೂ ಚಿದಾನಂದ ಎಂ. ಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ: ತಿಪ್ಪೇಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ. ಚಂದ್ರಶೇಖರ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

ದಸರಾ ಉತ್ಸವ ಉದ್ಘಾಟನೆಯ ನಂತರ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ದಸರಾ ನಾಟಕೋತ್ಸವ ಉದ್ಘಾಟಿಸಿದರು, ತುಮಕೂರು ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಹೆಲಿಕಾಪ್ಟರ್ ನ ಹೆಲಿ ರೈಡ್ ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಇಂದಿನಿಂದ ತುಮಕೂರು ದಸರಾ ಉತ್ಸವದ ಪ್ರಯುಕ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

Leave a Reply

Your email address will not be published. Required fields are marked *