ತುಮಕೂರು : ಅತ್ಯುತ್ತಮ ಚುನಾವಣಾ ಕಾರ್ಯನಿರ್ವಹಣೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಬೆಂಗಳೂರು ವಿಭಾಗದಲ್ಲಿ ತುಮಕೂರು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಆಯ್ಕೆಯಾಗಿದ್ದಾರೆ.
ಅಲ್ಲದೆ, ಸಹಾಯಕ ಮತದಾರರ ನೋಂದಣಾಧಿಕಾರಿ ಗುಬ್ಬಿ ತಹಸೀಲ್ದಾರ್ ಆರತಿ ಬಿ. ಹಾಗೂ ಕೊರಟಗೆರೆ ತಾಲೂಕು ದುದ್ದನಹಳ್ಳಿ ಮತಗಟ್ಟೆ ಮೇಲ್ವಿಚಾರಕಿ ಗ್ರಾಮಲೆಕ್ಕಾಧಿಕಾರಿ ಎನ್.ಸಿ. ಭಾಗ್ಯಮ್ಮ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಪುಟ್ಟಮಾರಕ್ಕ ಅವರೂ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ರಾಜ್ಯದ ಐವರು ಜಿಲ್ಲಾ ಚುನಾವಣಾಧಿಕಾರಿಗಳು, ಐವರು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು, ಐವರು ಮತದಾರರ ನೋಂದಣಿ ಅಧಿಕಾರಿಗಳು, ಐವರು ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಹತ್ತು ಜಿಲ್ಲೆಯ ಬಿಎಲ್‍ಒ ಮೇಲ್ವಿಚಾರಕರು ಹಾಗೂ ವಿವಿಧ ಜಿಲ್ಲೆಗಳ 34 ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಜನವರಿ 25ರಂದು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಭವನ(ಟೌನ್‍ಹಾಲ್)ದಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪ್ರಶಸ್ತಿಗಳನ್ನು ನೀಡಲಿದ್ದಾರೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲಾ ವಾರ್ತಾಧಿಕಾರಿಗಳಿಂದ ಅಭಿನಂದನೆ :-
ಅತ್ಯುತ್ತಮ ಚುನಾವಣಾ ಕಾರ್ಯನಿರ್ವಹಣೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಪ್ರಶಸ್ತಿಗೆ ಬೆಂಗಳೂರು ವಿಭಾಗದಲ್ಲಿ ತುಮಕೂರು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಅವರು ಅಭಿನಂದನೆ ಸಲ್ಲಿಸಿದ್ದಾರೆ.