ತುಮಕೂರು : ಕರ್ನಾಟಕ ಪ್ರಾಂತ ರೈತ ಸಂಘದ ತುಮಕೂರು ಜಿಲ್ಲಾ ಸಂಚಾಲಕ ಸಂಗಾತಿ ಸಿ.ಅಜ್ಜಪ್ಪ ಅವರು ನಿಧನರಾಗಿದ್ದಾರೆ. ಅವರಿಗೆ (75 ವರ್ಷ), ಅಜ್ಜಪ್ಪ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗು ಅಪಾರ ಸಂಗಾತಿಗಳನ್ನು ಅಗಲಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಸಿ.ಅಜ್ಜಪ್ಪ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಿಪಿಎಂ ನಾಯಕ ಹಾಗೂ ಮಾಜಿ ಶಾಸಕ ದಿವಂಗತ ಶ್ರೀರಾಮರಡ್ಡಿ ಅವರ ಪ್ರಭಾವಕ್ಕೆ ಒಳಗಾಗಿ ಎಡಪಂಥೀಯರ ಹೋರಾಟಕ್ಕೆ ಹೊರಳಿಕೊಂಡಿದ್ದರು. ದೈಹಿಕ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ರೈತ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘದ ತುಮಕೂರು ಜಿಲ್ಲಾ ಸಂಚಾಲಕರಾಗಿ ಕೆಲಸ ನಿರ್ವಹಿಸಿದ್ದ ಸಿ.ಅಜ್ಜಪ್ಪ ಹಲವು ಸಮರಧೀರ ಹೋರಾಟಗಳನ್ನು ರೂಪಿಸಿದ್ದರು. ವಿಶೇಷವಾಗಿ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ಸಾಗುವಳಿದಾರರಿಗೆ ಕೊಡಿಸಲು ನೂರಾರು ರೈತರೊಂದಿಗೆ ಹೋರಾಟ ನಡೆಸಿದ್ದರು.
1970ರ ದಶಕದಲ್ಲಿ ವಿದ್ಯಾರ್ಥಿ ಚಳವಳಿಯ ಮೂಲಕ ಹೋರಾಟಕ್ಕೆ ಪ್ರವೇಶ ಪಡೆದಿದ್ದರು. ಸಾಕ್ಷರತಾ ಆಂದೋಲನ, ಭಾರತ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಸಕ್ರಿಯವಾಗಿ, ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿ.ಅಜ್ಜಪ್ಪ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅಜ್ಜಪ್ಪ ಅವರ ನಿಧನದಿಂದ ರೈತ ಚಳವಳಿಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಅಜ್ಜಪ್ಪ ಅವರ ಸಂಗಾತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಮ್ರೇಡ್ ಸಿ ಅಜ್ಜಪ್ಪ ರವರ ಪಾರ್ಥಿವ ಶರೀರವನ್ನು ಇಂದು ಸಂಜೆ 4 ಗಂಟೆಗೆ ತುಮಕೂರು ಜನ ಚಳವಳಿ ಕೇಂದ್ರ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು
ನವೆಂಬರ್ 21ರಂದು ಅವರ ಹುಟ್ಟೂರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಸೂರನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೇರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಸಂತಾಪ :
ಅಕಾಲಿಕ ನಿಧನಕ್ಕೆ ಒಳಗಾದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕರಾದ ಅಜ್ಜಪ್ಪ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.