ಡಿಎಸ್‍ಎಸ್‍ನಿಂದ ಕುಂದೂರು ತಿಮ್ಮಯ್ಯ ಉಚ್ಚಾಟನೆ, ತೀವ್ರ ವಿರೋಧ ವ್ಯಕ್ತಪಡಿಸಿರುವ ತುಮಕೂರು ಡಿಎಸ್‍ಎಸ್

ತುಮಕೂರು: ಜಿಲ್ಲೆಯಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿಯನ್ನು ಸುಮಾರು 40 ವರ್ಷಗಳಿಂದ ಮುನ್ನೆಡೆಸಿಕೊಂಡು ಬರುತ್ತಿರವ ಕುಂದೂರು ತಿಮ್ಮಯ್ಯ ಹಾಗೂ ಅವರ ಮಗ ಕುಂದೂರು ಮುರುಳಿ ಅವರನ್ನು ಏಕಾಎಕಿ ಸಂಘಟನೆಯಿಂದ ಉಚ್ಚಾಟನೆ ಮಾಡಿರುವುದು ಖಂಡಿಸಿ,ಕುಂದೂರು ತಿಮ್ಮಯ್ಯ ಅವರ ನೇತೃತ್ವ ದಲ್ಲಿಯೇ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಮತ್ತಷ್ಟು ಬಲ ಪಡಿಸಲು ಇಂದು ನಡೆದ ಡಿಎಸ್‍ಎಸ್ ಮುಖಂಡರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಗರದ ಜನ ಚಳವಳಿ ಕೇಂದ್ರದಲ್ಲಿ ಆಯೋಜಿಸಿದ್ದ ದಲಿತ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದ ಹತ್ತಾರು ಮುಖಂಡರು ಗಳು,ಜಿಲ್ಲೆಯಲ್ಲಿ ಡಿಎಸ್‍ಎಸ್ ಎಂದರೆ ಕುಂದೂರು ತಿಮ್ಮಯ್ಯ ಎಂಬುವಂತಹ ಸ್ಥಿತಿ ಇದೆ.ಪ್ರತಿ ಹಂತದಲ್ಲಿಯೂ ಡಿಎಸ್‍ಎಸ್‍ನ್ನು ಕಟ್ಟಿ ಬೆಳೆಸಿದವರು ಕುಂದೂರು ತಿಮ್ಮಯ್ಯ,ಹೀಗಿರುವಾಗ ಕನಿಷ್ಠ ಸೌಜನ್ಯಕ್ಕೂ ಒಂದು ನೊಟೀಷ್ ನೀಡದೆ, ರಾಜ್ಯ ಸಂಚಾಲಕ ಗುರುಮೂರ್ತಿ ಎಂಬುವವರು ಕುಂದೂರು ತಿಮ್ಮಯ್ಯ ಮತ್ತು ಕುಂದೂರು ಮುರುಳಿ ಅವರುಗಳನ್ನು ವಜಾ ಮಾಡಿರುವ ಹೇಳಿಕೆ ಬಿಡುಗಡೆ ಮಾಡಿರುವುದನ್ನು ತುಮಕೂರು ದಲಿತ ಸಂಘರ್ಷ ಸಮಿತಿಯ ಮುಖಂಡರು ಒಪ್ಪಿಕೊಳ್ಳಲು ಸಿದ್ದರಿಲ್ಲ.ಚುನಾವಣೆ ನಂತರದಲ್ಲಿ ಒಂದು ಬೃಹತ್ ಸಮಾವೇಶ ನಡೆಸಿ,ಕುಂದೂರು ತಿಮ್ಮಯ್ಯ ನೇತೃತ್ವದಲ್ಲಿಯೇ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟುವ ಕೆಲಸ ಮಾಡಲಾಗುವುದು ಎಂದರು.

ಜಾತ್ಯಾತೀತ ಯುವ ವೇದಿಕೆ ಅಧ್ಯಕ್ಷ ಡ್ಯಾಗೇರಹಳ್ಳಿ ವಿರೂಪಾಕ್ಷ ಮಾತನಾಡಿ,ನೊಂದವರ, ಬಡವರ ಕಣ್ಣೀರು ಒರೆಸಲು ದಸಂಸ ರೂಪಗೊಂಡಿದೆ.ಇದನ್ನು ಕೆಲವರು ದುರ್ಬಳಕೆ ಮಾಡಿಕೊಂಡು, ಯಜಮಾನಿಕೆ ಸಂಸ್ಕøತಿಯನ್ನು ಇತರರ ಮೇಲೆ ಹೇರಲು ಹೊರಟಿರುವುದು ಸರಿಯಲ್ಲ.ಯಾವುದೇ ಪ್ರಕ್ರಿಯೆ ಪ್ರಜಾತಂತ್ರದಿಂದ ಕೂಡಿರಬೇಕು.ಹಾಗಾಗಿ ದಸಂಸ 47/76-77ರ ರಾಜ್ಯ ಸಂಚಾಲಕರ ನಡೆಯನ್ನು ಖಂಡಿಸಿ,ಕುಂದೂರು ತಿಮ್ಮಯ್ಯ ಅವರ ನೇತೃತ್ವದಲ್ಲಿಯೇ ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯಲ್ಲಿ ಮತ್ತಷ್ಟು ಪ್ರಬಲವಾಗಿ ಕಟ್ಟಲು ನಾವೆಲ್ಲರೂ ತಿಮ್ಮಯ್ಯ ಅವರಿಗೆ ಬೆಂಬಲವಾಗಿ ನಿಲ್ಲಲ್ಲಿದ್ದೇವೆ ಎಂದರು.

ಚೇಳೂರು ಶಿವನಂಜಪ್ಪ ಮಾತನಾಡಿ,ಕುಂದೂರು ತಿಮ್ಮಯ್ಯ ಅವರ ಇಡೀ ಕುಟುಂಬವೇ ದಲಿತ ಪರ ಹೋರಾಟದಲ್ಲಿ ತೊಡಗಿಕೊಂಡಿದೆ.ಹೀಗಿರುವಾಗ ಏಕಾಎಕಿ ಉಚ್ಚಾಟನೆಯನ್ನು ಸಹಿಸಲಾಗದು.ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಯುತವಾಗಿ ಕುಂದೂರು ತಿಮ್ಮಯ್ಯನವರ ನೇತೃತ್ವದಲ್ಲಿ ಕಟ್ಟಲು ಮುಂದಾಗುವುದಾಗಿ ತಿಳಿಸಿದರು.

ಕೆಂಟಲಗೆರೆ ಕೆ.ಹೆಚ್.ರಂಗನಾಥ್ ಮಾತನಾಡಿ,ಕುಂದೂರು ತಿಮ್ಮಯ್ಯ ಎಂಬುದು ದಲಿತರ ಪಾಲಿಗೆ ಓರ್ವ ವ್ಯಕ್ತಿಯಲ್ಲ ಶಕ್ತಿ. ಹಾಗಾಗಿ ರಾಜ್ಯ ಸಂಚಾಲಕರ ಮಾತಿಗೆ ಮನ್ನಣೆ ನೀಡದೆ ಜಿಲ್ಲೆಯಲ್ಲಿ ತಿಮ್ಮಯ್ಯ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ದಸಂಸವನ್ನು ಬಲಪಡಿಸುವ ಕೆಲಸ ಮಾಡೋಣ ಎಂದರು.

ನೊಣವಿನಕೆರೆ ರಾಜಣ್ಣ, ಕುಪ್ಪೂರು ಶ್ರೀಧರನಾಯಕ್, ಕುಳುವ ಮಹಾಸಭಾದ ಲೋಕೇಶ್‍ಸ್ವಾಮಿ ಕುಂದೂರು ತಿಮ್ಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, ಕಳೆದ 40 ವರ್ಷಗಳಿಂದ ಜಿಲ್ಲೆಯಲ್ಲಿ ಶೋಷಿತರು, ದಮನಿತರು,ನೊಂದವರ ಪರ ಹೋರಾಟ ಮಾಡಿಕೊಂಡು ಬಂದಿದ್ದೇನೆ.ಬಿದ್ದವರನ್ನು ಮೇಲೆತ್ತುವ, ಆಳುವವರ ಕಣ್ಣೀರು ಒರೆಸುವ ಕೆಲಸವನ್ನು ದಸಂಸ ನಿರಂತರವಾಗಿ ಮಾಡಿಕೊಂಡು ಬಂದಿದೆ.ಆ ಕೆಲಸವನ್ನು ಜಿಲ್ಲೆಯ ಯುವಕರ ಸಹಕಾರದೊಂದಿಗೆ ಮುಂದೆಯೂ ಮಾಡಿಕೊಂಡು ಹೋಗಲಾಗುವುದು ಎಂದರು.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ದಸಂಸ ನಿಲುವು ಸ್ಪಷ್ಟವಾಗಿದೆ. ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ವಿರುದ್ದ ದಲಿತರೆಲ್ಲರೂ ಮತ ಚಲಾಯಿಸಬೇಕಾಗಿದೆ.ಆರ್.ಎಸ್.ಎಸ್., ಬಿಜೆಪಿ ಹಠಾವೋ, ದೇಶ ಬಚಾವೋ ದಸಂಸದ ಗುರಿಯಾಗಿದೆ.ಕೋಮುವಾದಿ ಬಿಜೆಪಿಯನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕುಂದೂರು ತಿಮ್ಮಯ್ಯ ಮನವಿ ಮಾಡಿದರು.

ಈ ವೇಳೆ ದಲಿತ ಸಂಘರ್ಷ ಸಮಿತಿ ವಿವಿದ ತಾಲೂಕುಗಳ ಸಂಚಾಲಕರಾದ ಶ್ರೀನಿವಾಸ್ ಮಧುಗಿರಿ, ಚೇಳೂರು ಶಿವನಂಜಪ್ಪ ಗುಬ್ಬಿ, ರಘು ಬಿಳಿಗೆರೆ, ರೋಹಿತ ಕುರುಬರಹಳ್ಳಿ ತುರುವೇಕೆರೆ, ರಮೇಶ್ ಯರೆಕಟ್ಟೆ ಚಿಕ್ಕನಾಯಕನಹಳ್ಳಿ, ಮೋಹನ್ ಜಕ್ಕನಹಳ್ಳಿ ತಿಪಟೂರು,ಹೇಲ್ಪೇನಹಳ್ಳಿ ನಾಗರಾಜು ಶಿರಾ,ಹರೀಶ್ ಕೊರಟಗೆರೆ, ಕೆಸ್ತೂರು ಮೂರ್ತಿ ತುಮಕೂರು, ಕುಣಿಗಲ್ ಗಂಗಣ್ಣ,ಗಂಗಣ್ಣ ಮಾರ್ಕೆಟ್,ಮನು ಚಕ್ರವರ್ತಿ, ಜಿ.ಮೋಹನ್ ಕುಮಾರ್ ಉಪ್ಪಾರಹಳ್ಳಿ, ಟಿ.ಎನ್.ನಿಖಿಲ್ ಕುಮಾರ್,ರವಿ ಉಪ್ಪಾರಹಳ್ಳಿ, ಭಾಗ್ಯಮ್ಮ ಮಂಚಲದೊರೆ ,ಸರಸ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *