ತುಮಕೂರಿನಲ್ಲಿ ಗಾಳಿ-ಮಳೆಗೆ ಮುರಿದು ಬಿದ್ದ ವಿದ್ಯುತ್ ಕಂಬಗಳು, ಧರಣಿ ನಿರತರಿಗೆ ವಸತಿ ಕಲ್ಪಿಸಿದ ಡಿಸಿ

ತುಮಕೂರು : ತುಮಕೂರಿನಲ್ಲಿ ಭಾನುವಾರ ಮಧ್ಯ ರಾತ್ರಿ ಸುರಿದ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಕಡಿತ ಉಂಟಾಯಿತು.

ತುಮಕೂರಿನಲ್ಲಿ ಭಾನುವಾರ ರಾತ್ರಿ 12.30 ರಲ್ಲಿ ಸುರಿದ ಮಳೆ ಗಾಳಿಗೆ ರೈಲ್ವೆ ನಿಲ್ದಾಣ ಹಾಗೂ ರಾಧಾಕೃಷ್ಣ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದವು, ಮಳೆಯ ಜೊತೆಗೆ ಗಾಳಿಯು ಬೀಸಿದ್ದರಿಂದ ವಿದ್ಯುತ್ ಕಂಬಗಳು ಉರುಳಿ ಬಿದ್ದು ವಿದ್ಯುತ್ ಕಡಿತ ಉಂಟಾಯಿತು.

ರಾತ್ರಿ ಬಿದ್ದ ಮಳೆಗೆ ತುಮಕೂರು ನಗರದ ರಸ್ತೆಗಳಲ್ಲಿ ನೀರು ಹಳ್ಳದಂತೆ ಹರಿಯುತ್ತಿರುವುದರಿಂದ ವಾಹನ ಸವಾರರು ಭಯಬಿದ್ದು, ರಸ್ತೆ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿ ಅಂಗಡಿ ಮಳಿಗೆಗಳ ಮುಂಭಾಗ ಆಶ್ರಯ ಪಡೆದರು.

ರಾತ್ರಿ ಬಿದ್ದ ಮಳೆಗೆ ತುಮಕೂರು ನಗರದ ಚರಂಡಿಗಳೆಲ್ಲಾ ತುಂಬಿ ಹರಿದು ರಸ್ತೆಗಳಿಗೆಲ್ಲಾ ನೀರು ಹರಿಯುತ್ತಿದದ್ದು ಕಂಡು ಬಂದಿತು.

ಸೋಮವಾರ (ಏ.28) ಸಂಜೆ 4.30ರಲ್ಲಿ ನಗರದಲ್ಲಿ ಗಾಳಿ, ಗುಡುಗು-ಮಿಂಚು ಸಹಿತ ಜೋರು ಮಳೆ ಸುರಿಯಿತು.

ಕಾಲೇಜು ಬಿಡುವ ವೇಳೆಗೆ ಮಳೆ ಪ್ರಾರಂಭವಾಗಿದ್ದರಿಂದ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡುವಂತಾಯಿತು.

ಧರಣಿ ನಿರತರಿಗೆ ವಸತಿ ಕಲ್ಪಿಸಿದ ಜಿಲ್ಲಾಧಿಕಾರಿ:

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಹಂದ್ರಾಳ್ ನಾಗಭೂಷಣ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಮೀಪ ಅಹೋ ರಾತ್ರಿ ಧರಣಿ ನಿರತರು ಮಳೆಯಲ್ಲಿ ಸಿಕ್ಕಿಕೊಂಡಿದ್ದರಿಂದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜಾ ಅವರುಗಳ ನೇತೃತ್ವದಲ್ಲಿ ಹೋರಾಟ ನೆಡೆಸುತ್ತಿದ್ದ ಸುಮಾರು50 ರಿಂದ 60 ಜನರನ್ನು ಖಾಸಗಿ ಬಸ್ ಮೂಲಕ ಮುನ್ಸಿಪಲ್ ಕಚೇರಿಯ ಆವರಣ ಹಾಗೂ ನಗರ ವಸತಿ ರಹಿತ ನಿರಾಶ್ರಿತರ ಕೇಂದ್ರ ಚಿಕ್ಕ ಪೇಟೆ ಇಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡಲಾಯಿತು.

ವಸತಿ ವ್ಯವಸ್ಥೆಗೆ ನಗರ ಠಾಣೆಯ ಇನ್ಸ್ಪೆಕ್ಟರ್ ಅವಿನಾಶ್ ಮತ್ತು ಸಿಬ್ಬಂದಿಗಳು ಶ್ರಮಿಸಿರುತ್ತಾರೆ.

Leave a Reply

Your email address will not be published. Required fields are marked *