ತುಮಕೂರು : ತುಮಕೂರು ಡಿ.ದೇವರಾಜ ಅರಸು ಬಸ್ ನಿಲ್ದಾಣದ ಕಾಮಗಾರಿಯು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದ್ದು ಉದ್ಘಾಟನೆಯಾಗಿ ಮೂರು ತಿಂಗಳಾದರೂ ಪ್ರಯಾಣಕ್ಕೆ ಲಭ್ಯವಾಗಿಲ್ಲ.
ಸ್ಮಾರ್ಟ್ ಸಿಟಿ ಅವಧಿಯು ಎಂದೋ ಮುಗಿದಿದ್ದು, ಕಾಮಗಾರಿ ವಿಳಂಬ ಏಕೆ ಆಗುತ್ತಾ ಇದೆ ಎಂಬುದನ್ನು ಯಾರೂ ಹೇಳುತ್ತಿಲ್ಲ. ಕೆಲವರು ತುಮಕೂರು ಬಸ್ ನಿಲ್ದಾಣಕ್ಕೆ ಚಿನ್ನದ ತಗಡು ಹೊಡೆಯುತ್ತಿದ್ದಾರೆ ಅದಕ್ಕೆ ವಿಳಂಬ ಎಂದು ವ್ಯಂಗ್ಯವಾಡುತ್ತಿದ್ದಾರೆ.
ಜನರು ಸಹ ಇಂದಲ್ಲ ನಾಳೆ ಹೊಸ ಬಸ್ ನಿಲ್ದಾಣ ಪ್ರಯಾಣಕ್ಕೆ ಲಭ್ಯವಾಗಬಹುದು ಎಂದು ಕಾಯುತ್ತಲೇ ಇದ್ದಾರೆ
ಇಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೆಎಸ್‍ಆರ್‍ಟಿಸಿ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ಮೇ ಮಾಹೆ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಶುಕ್ರವಾರ ಸಂಜೆ ದೇವರಾಜ ಅರಸು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕೆಎಸ್‍ಆರ್‍ಟಿಸಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತ್ರಿವೇಣಿ ಅವರಿಂದ ಕಾಮಗಾರಿ ಪ್ರಗತಿ ಮಾಹಿತಿ ಪಡೆದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಹಗಲಿರುಳು ಕೆಲಸಗಾರರನ್ನು ಪಾಳಿ ಆಧಾರದ ಮೇಲೆ ನಿಯೋಜಿಸಿ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ತ್ರಿವೇಣಿ ಲಿಫ್ಟ್ ಕಾರ್ಯಾಚರಣೆ, ಪ್ಲಂಬಿಂಗ್ ಕೆಲಸ, ಮುಂಭಾಗದ ಆವರಣ ಗೋಡೆ, ಶೌಚಾಲಯ, ವಿದ್ಯುತ್ ಸಂಪರ್ಕ, ಫಾಲ್ ಸೀಲಿಂಗ್, ಸೈನ್ ಬೋರ್ಡ್, ಸಿಸಿಟಿವಿ ಕ್ಯಾಮೆರಾ, ಅಗ್ನಿಶಾಮಕ ಯಾಂತ್ರಿಕ ಕೆಲಸ, ಹೊರ ಹೋಗುವ ಹಾಗೂ ಒಳ ಬರುವ ಮಾರ್ಗ ನಿರ್ಮಾಣ, ಲ್ಯಾಂಡ್ ಸ್ಕೇಪಿಂಗ್ ಕೆಲಸ, ಅಂತಿಮ ಕೋಟ್ ಪೇಂಟ್, ರ್ಯಾಂಪ್ ಕೆಲಸ, ಸ್ಟ್ರಕ್ಚರಲ್ ಮೆರುಗು ಕೆಲಸ, ಟಿಸಿ ಪಾಯಿಂಟ್ ಮತ್ತು ಪೆÇಲೀಸ್ ಚೌಕಿ ನಿರ್ಮಾಣ ಕಾಮಗಾರಿಗಳು ಬಾಕಿ ಇದ್ದು, ಮೇ 30ರೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.