ತುಮಕೂರು ಲೋಕಸಭೆಗೆ ಶೇ.78.05% ಮತದಾನ

ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26ರಂದು ನಡೆದ ಮತದಾನದಲ್ಲಿ ಶೇಕಡ. 78.05% ರಷ್ಟು ಮತದಾನವಾಗಿದ್ದು, ಅತಿ ಹೆಚ್ಚು ಮತದಾನ ಶೇಕಡ 82.76%ರಷ್ಟು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಆಗಿ ಮೊದಲ ಸ್ಥಾನದಲ್ಲಿದ್ದರೆ, ತುಮಕೂರು ನಗರದಲ್ಲಿ ಶೇ 67.38% ರಷ್ಟು ಮತದಾನ ನಡೆದು ಕೊನೆಯ ಸ್ಥಾನ ಪಡೆದುಕೊಂಡಿದೆ.

ತುಮಕೂರು ಲೋಕಸಭಾ ವ್ಯಾಪ್ತಿಯ ಚಿ.ನಾ.ಹಳ್ಳಿ 77.51%, ಗುಬ್ಬಿ 82.76%, ಕೊರಟಗೆರೆ 80.52%, ಮಧುಗಿರಿ 77.36%, ತಿಪಟೂರು 80.78%, ತುಮಕೂರು 67.38%, ತುಮಕೂರು ಗ್ರಾಮಾಂತರ 82.08% ಮತ್ತು ತುರುವೇಕೆರೆ80.07% ಶೇಕಡ ಮತದಾನವಾಗಿದ್ದು ಒಟ್ಟು 78.05% % ರಷ್ಟು ಮತದಾನವಾಗಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 16,61,309 ಮತದಾರರಿದ್ದು, ಪುರುಷ ಮತದಾರರು 819065 ಇದ್ದು, 842170 ಮಹಿಳಾ ಮತದಾರರಿದ್ದಾರೆ. ಇದರಲ್ಲಿ ಪುರುಷ ಮತದಾರರು 6,49,934 ಮಂದಿ ಮತ ಚಲಾಯಿಸಿದ್ದರೆ, ಮಹಿಳಾ ಮತದಾರರು 6,46,767 ಮತ ಚಲಾಯಿಸಿದ್ದಾರೆ, ಇತರೆ 19 ಮಂದಿ ಮತ ಚಲಾಯಿಸಿದ್ದು, ಒಟ್ಟು 12,99,887 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತದಾನದಲ್ಲಿ ಪುರುಷರು ಮುಂದೆ ಇದ್ದಾರೆ, ಮಹಿಳೆಯರಿಗಿಂತ 3167 ಪುರುಷ ಮತದಾರರು ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ. 3,61,422 ಮತದಾರರು ಮತ ಚಲಾಯಿಸಿಲ್ಲ.

ತುಮಕೂರು ಲೋಕಸಭಾ ಮತಯಂತ್ರಗಳನ್ನು (ಇವಿಎಂ) ತುಮಕೂರು ವಿಶ್ವವಿದ್ಯಾನಿಲಯ ಮತ್ತು ಸರ್ಕಾರಿ ಪಾಲಿಟೆಕ್ನ್ ಕಾಲೇಜಿನಲ್ಲಿ ಬಿಗಿ ಮಿಲಿಟರಿ ಭದ್ರತೆಯೊಂದಿಗೆ ಇಡಲಾಗಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಹಣೆ ಬರಹ ತಿಳಿಯಲಿದೆ.

ದೇಶದಲ್ಲಿ ಹೆಚ್ಚು ದಿನಗಳ ಕಾಲ ಚುನಾವಣೆ ನಡೆಯುತ್ತಿರುವ ಚೆನಾವಣೆ ಇದಾಗಿದ್ದು, 7 ಹಂತಗಳಲ್ಲಿ ದೇಶದಲ್ಲಿ ಮತದಾನ ನಡೆಯಲಿದ್ದು ಜೂನ್ 4ರಂದು ಫಲಿತಾಂಶ ಪ್ರಕಟವಾಗುವುದರಿಂದ ತುಮಕೂರಿನ ಲೋಕಸಭಾ ಫಲಿತಾಂಶಕ್ಕಾಗಿ 39 ದಿನಗಳು ಕಾಯಬೇಕು.
ಈ ರೀತಿ ಫಲಿತಾಂಶಕ್ಕಾಗಿ ಸುಧೀರ್ಘ ಕಾಲ ಕಾಯಬೇಕಾದ ಮೊದಲ ಚುನಾವಣೆ ಇದಾಗಿದೆ.

ಬೆಳಿಗ್ಗೆ 7ಗಂಟೆಯಿಂದ 11 ಗಂಟೆಯವರೆಗೆ ಚುರುಕಾಗಿ ನಡೆದ ಮತದಾನವು, ಆ ನಂತರ ಬಿಸಿಲ ಜಳಕ್ಕೆ ಮತದಾರರು ಅಷ್ಟಾಗಿ ಮತಗಟ್ಟಗೆ ಬರಲಿಲ್ಲ. ಇಳಿ ಹೊತ್ತಾದ 4ಗಂಟೆಯ ನಂತರ ಮತದಾರರು ಮತಗಟ್ಟೆಗೆ ಧಾವಿಸಿದ್ದರಿಂದ ರಾತ್ರಿ ಏಳು ಗಂಟೆಯಾದರೂ ಹಲವಾರು ಮತದಾನ ಕೇಂದ್ರದಲ್ಲಿ ಮತದಾನ ನಡೆಯಿತು.

Leave a Reply

Your email address will not be published. Required fields are marked *