ತುಮಕೂರು : ಡಾ.ಜಿ.ಪರಮೇಶ್ವರ್ ಅವರು ಪತ್ರಕರ್ತ ರಿಗೆ ವಾರ್ನಿಂಗ್ ಗೆ ತಮ್ಮ ಸ್ನೇಹಿತ, ಪರಮಾಪ್ತ ಕೆ.ಎನ್.ರಾಜಣ್ಣ ತುಮಕೂರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯೆ ವಜಾಕ್ಕೆ ಕಾರಣ ಎಂಬ ಭಯವೆ ಇರಬಹುದು ಎಂಬ ಚರ್ಚೆ ನಡೆಯುತ್ತಾ ಇದೆ.
ಹಾಗಾದರೆ ತುಮಕೂರು ಮಾಧ್ಯಮ, ಪತ್ರಕರ್ತರು ಅಷ್ಟೊಂದು ಡೇಂಜರ್ ಆಗಿದ್ದಾರಯೇ ?
ಅಲ್ಲದೆ ಪತ್ರಕರ್ತರಿಗೆ ವಾರ್ನಿಂಗ್ ಮಾಡಿ ಸಚಿವ ಡಾ.ಜಿ.ಪರಮೇಶ್ವರ್ ಮಾಧ್ಯಮ ಗಳಲ್ಲಿ ಪ್ರಸಾರವಾಗಿ ವಿವಾದಕ್ಕೆ ಎಡೆ ಮಾಡುತ್ತದೆ ಎಂದು ಗೋತಾದ ಕೂಡಲೇ ನಾನು ತಮಾಷೆ ಗೆ ಹೇಳಿದ್ದು ಅದನ್ನು ಗಂಭೀರವಾಗಿ ತಗೋ ಬಾರದು ಎಂದು ತ್ಯಾಪೆ ಹಾಕಲು ಮುಂದಾದರೆ. ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪರಮೇಶ್ವರ್ ಅವರ ಹೇಳಿಕೆಯನ್ನು ಹೊಗಳಿ, ಬೆಂಬಲಿಸಿದ್ದಾರೆ.
ಕೇವಲ ಎರಡಷ್ಟು ಪತ್ರಕರ್ತರಿಂದ ತುಮಕೂರಿಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಪತ್ರಕರ್ತರು ತಮ್ಮ ಕರ್ತವ್ಯವನ್ನು ಮರೆಯಬಾರದು ಎಂದು ಸೋಮಣ್ಣ ಹೇಳಿದರೆ, ತಪ್ಪಾಗುವ ಮೊದಲೇ ನಮಗೆ ಹೇಳಬೇಕು ಎಂದು ಪರಮೇಶ್ವರ್ ಹುಕುಂ ಹೊರಡಿಸಿದ್ದಾರೆ.
ಪರಮೇಶ್ವರ್ ವಾರ್ನಿಂಗ್ ಹೀಗಿದೆ.
ತಪ್ಪು ಹುಡುಕೋಕೆ ಹೋಗ್ಬೇಡಿ, ಮೊದಲೇ ವಾರ್ನ್ ಮಾಡಿದ್ದೀನಿ, ಇಟ್ ಈಸ್ ಎ ವಾರ್ನಿಂಗ್, ತಪ್ಪು ಹುಡುಕೋಕೆ ಹೋಗ್ಬೇಡಿ. ಸಹಕಾರ ಮಾಡಿ, ತಪ್ಪಾಗಾಕೆ ಮುಂಚೆನೇ ಹೇಳ್ಬಿಡಿ. ಎ ನೋಡಿ ಇಲ್ಲೇನೋ ಸರಿಯಿಲ್ಲ, ಸರಿ ಮಾಡಿಕೊಳ್ಳಿ ಅಂತ ಹೇಳಿ. ಸರಿ ಮಾಡಿಕೊಳ್ಳುತ್ತೇವೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪತ್ರಕರ್ತರಿಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಯಾಕ್ ಹೇಳ್ತೀನಿ ಅಂದರೆ ಜಿಲ್ಲೆಯ ಮರ್ಯಾದೆ ಪ್ರಶ್ನೆ.(ಪತ್ರಕರ್ತರ ಮಧ್ಯಪ್ರವೇಶ ಆಗ್ತಿದ್ದಂಗೆ) ಹೇಳೋದನ್ನ ಕೇಳಿಸಿಕೊಳ್ಳಿ, ಅದಕ್ಕೆ ನೀವು ಮೊದಲೇ ಹೇಳ್ಬಿಡ್ರಪ್ಪ, ಮೊದಲೇ ಹೇಳಿದರೆ ಸರಿ ಮಾಡಿಕೊಳ್ತೀವಿ. ಆಮೇಲೆ ಹೇಳಿ ಊರ್ ಮರ್ಯಾದೆ ಯಾಕ್ ಕಳೀತೀರಾ. ಅಷ್ಟೇ ಹೇಳೋದು ಬೇರೆ ಏನೋ ಸೂಕ್ಷ್ಮವಾಗಿ ಹೇಳಿದ್ದೀನಿ. ವಾರ್ನಿಂಗ್ ಅಂತ ಹೇಳಿದ್ದೀನಿ. ನೀವು ಒಂದೊಂದು ಸಾರಿ ಸ್ಟೆಪ್ ಮುಂದುಕೋಗ್ಬಿಡ್ತೀರಾ. ಅದು ಹೋಗೋದು ಬ್ಯಾಡ ಅಂತಿನಿ ಎಂದಿದ್ದಾರೆ.
ಈ ಸುದ್ದಿ ವೈರಲ್ ಆಗ್ತಿದಂಗೆ ನಾನು ಹಾಗೆ ಹೇಳಿಲ್ಲ. ಜೋಕಾಗಿ ಹೇಳಿದ್ದೇನೆ ಎಂದು ತಿಪ್ಪೇ ಸಾರಿಸಿದ್ದಾರೆ.
ವಿ.ಸೋಮಣ್ಣ ಬೆಂಬಲದ ಹೇಳಿಕೆ :
ಭಾನುವಾರ ತುಮಕೂರು ರೈಲ್ವೆ ನಿಲ್ದಾಣದ ಸಮಸರಂಭದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಡಾ.ಜಿ.ಪರಮೇಶ್ವರ್ ಹೇಳಿಕೆಯನ್ನು ಬೆಂಬಲಿಸಿದರು.
ಮಾಧ್ಯಮದವರು ನೀವ್ ಒಂದ್ ಸ್ವಲ್ಪ ಬದಲಾವಣೆಯಾಗದೆ ಹೋದರೆ ಯಾರ್ ಮಾತಾಡೋದು ಕಷ್ಟನೇ. ಡಾ.ಜಿ.ಪರಮೇಶ್ವರ್ ನೋವನ್ನೂ ಕೂಡ ನೋಡಿದೆ. ಕೆಲವು ನಿಷ್ಟೂರವಾಗಿ ಮಾತನಾಡದೆ ಹೋದ್ರೆ ಯಾರಿಗೂ ಗೌರವ ಇರುವುದಿಲ್ಲ.ಒಬ್ಬ ಅನುಭವಿ ರಾಜಕಾರಣಿ ಆ ಮಟ್ಟದಲ್ಲಿ ಮಾತನಾಡಬೇಕಾದಾಗ ನಿಮ್ಮ ಕರ್ತವ್ಯವನ್ನು ನೀವು ಸಹ ಅರ್ಥ ಮಾಡಿಕೊಳ್ಳಬೇಕು.
ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು. ಇಲ್ಲಿ ಇರೋರೆಲ್ಲ ಹಾಗೆ ಅಂತ ಹೇಳ್ತಿಲ್ಲ. ಇರೋರಲ್ಲಿ 2ರಷ್ಟು ಪತ್ರಕರ್ತರಿಂದ ತುಮಕೂರಿಗೆ ಕೆಟ್ಟ ಹೆಸರು ಬರ್ತಿದೆ. ನಾನು ಪರಮೇಶ್ವರ್ ಹೇಳಿದ್ದನ್ನೆಲ್ಲಾ ಕೇಳಿದೆ. ಪ್ರಶ್ನೆ ಅಲ್ರಿ. ನೀವು (ಪತ್ರಕರ್ತರು) ಎಲ್ಲಿ ಪ್ರಶ್ನೆ ಮಾಡಬೇಕೋ ಅಲ್ಲಿ ಮಾಡಿ. ಪರಮೇಶ್ವರ್ ದಸರಾ ಮಾಡಿದ್ದಾರೆ. ಹಾಗೆ ಮಾಡುವಾಗ ತಪ್ಪಾಗೋದು ಸಹಜ. ಒಂದು ಮನೆ ಕಟ್ಟಬೇಕಾದರೆ ಎಷ್ಟು ಕಷ್ಟ. ಮೈಸೂರು ಮಹರಾಜರು ದಸರ ಆಚರಣೆ ಮಾಡಿಕೊಂಡು ಬಂದು ಎಷ್ಟು ವರ್ಷ ಆಯ್ತು. ಹಾಗೆಯೇ ತುಮಕೂರಿನಲ್ಲಿ ಒಂದು ದಸರಾ ಮಾಡಿ ಆ ಸಾಲಿಗೆ ಸೇರಿಸೋಣ ಅಂತಾ ಎಷ್ಟು ಶ್ರಮ, ಅವರ ಕಳಕಳಿಯನ್ನು ಅಪ್ರಿಸಿಯೇಟ್ ಮಾಡ್ತೇನೆ. ಸಣ್ಣಪುಟ್ಟ ಇರ್ತಾವೆ ರೀ. ಅದನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇಡ್ಬೇಕ್ರಿ ಎಂದು ಹೇಳಿದರು.
ಇದರಿಂದ ತುಮಕೂರು ಮಾಧ್ಯಮದವರು ಕಠೋರವಾಗಿ, ನೇರವಾಗಿ ಪ್ರಶ್ನೆ ಮಾಡಬಾರದು ಅವರು ಹೇಳಿದಷ್ಟನ್ನೇ ಬರೆದುಕೊಂಡು ಬರಬೇಕೆಂಬ ಅರ್ಥವಿರಬಹುದು, ಪ್ರಶ್ನೆ ಮಾಡಿದಾಗ ಏನೋ ಹೇಳಿ ವಿವಾದವಾಗಿ ಅಧಿಕಾರ ಕಳೆದುಕೊಂಡರೆ ಎಂಬ ಭಯವಿರಬಹುದು.
ಈಗಾಗಲೇ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಹೋಗಿ ಒಬ್ಬರು ವಿವಾದ ಹೇಳಿಕೆಯಿಂದ ಸಚಿವ ಸ್ಥಾನ ಕಳೆದುಕೊಂಡಿರುವ ಭಯ ಇವರಿಗೆ ಕಾಡುತ್ತಿರಬಹುದು.