ದೇಶದ ಟಾಪ್-100 ವಿವಿಗಳಲ್ಲಿ ತುಮಕೂರು ವಿವಿಗೆ ಸ್ಥಾನ

ತುಮಕೂರು: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯಲ್ಲಿ ತುಮಕೂರು ವಿವಿಯು ಮೊದಲ 100 ಸ್ಥಾನಗಳಲ್ಲಿ ಸೇರಿರುವುದು ಹೆಮ್ಮೆಯ ಸಂಗತಿ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಸಂತಸ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾನಿಲಯವು ನಿಟ್ಟೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಂಶೋಧನೆಯನ್ನು ತಂತ್ರಜ್ಞಾನವಾಗಿ ಪರಿವರ್ತಿಸುವ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಸಂಶೋಧನೆ, ಪ್ರಾಯೋಗಿಕ ಬೋಧನೆ, ಸಂಶೋಧನೆ ಆಧಾರಿತ ಶಿಕ್ಷಣದಿಂದ ವಿಶ್ವವಿದ್ಯಾನಿಲಯಗಳ ಬೆಳವಣಿಗೆ ವೃದ್ಧಿಯಾಗಲಿದೆ ಎಂದರು.

ಕಳೆದ ಒಂದು ವರ್ಷದಲ್ಲಿ ಸಂಶೋಧನ ಧನ ಸಹಾಯ ಸಂಸ್ಥೆಗಳಿಗೆ 80 ಸಂಶೋಧನ ಪ್ರಸ್ತಾವನೆಗಳನ್ನು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಸಲ್ಲಿಸಿದ್ದರು. ಅದರಲ್ಲಿ, 22 ಸಂಶೋಧನ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿದ್ದು, 1.5 ಕೋಟಿಯಷ್ಟು ಧನ ಸಹಾಯದ ಮಾನ್ಯತೆ ದೊರೆತಿರುವುದು ವಿವಿಯ ಸಂಶೋಧನ ಗುಣಮಟ್ಟಕ್ಕೆ ನಿದರ್ಶನವಾಗಿದೆ ಎಂದರು.

ನಿಟ್ಟೆ ವಿಶ್ವವಿದ್ಯಾನಿಲಯದ ಸಲಹೆಗಾರ ಡಾ. ಇಡ್ಯಾ ಕರುಣಾಸಾಗರ ಮಾತನಾಡಿ, ವಿಭಿನ್ನ ಸಂಶೋಧನ ಕಲ್ಪನೆಯಿಂದ ವಾಣಿಜ್ಯಿಕ ತಂತ್ರಜ್ಞಾನಗಳತ್ತ ಸಾಗಲು ಅನುವು ಮಾಡಿಕೊಡುವುದು ತಂತ್ರಜ್ಞಾನ ಕಾರ್ಯಗತಗೊಳಿಸುವ ಕೇಂದ್ರದ ಧ್ಯೇಯವಾಗಿದೆ. ಸಂಶೋಧನೆಯ ಫಲಿತಾಂಶಗಳು ಸಮಾಜಕ್ಕೆ ತಲುಪಿ, ಅನುಕೂಲವಾಗುವಂತೆ ತಂತ್ರಜ್ಞಾನವಾಗಿ ಪರಿವರ್ತನೆಯಾಗಬೇಕು ಎಂದು ತಿಳಿಸಿದರು.

ಸಂಶೋಧನೆಯ ಗರಿಷ್ಠ ಸದುಪಯೋಗಕ್ಕಾಗಿ ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳು ಹಾಗೂ ವಿಭಾಗಗಳು ಸಹಭಾಗಿತ್ವ ಹೊಂದುವ ಅವಶ್ಯಕತೆ ಇದೆ. ಎಲ್ಲ ವಿಶ್ವವಿದ್ಯಾನಿಲಯಗಳು ತಮ್ಮದೇ ಆದ ಸ್ಟಾರ್ಟಪ್ ನೀತಿಯನ್ನು ಜಾರಿಗೆ ತರುವುದು ಇಂದಿನ ಅಗತ್ಯವಾಗಿದೆ ಎಂದರು.

ನಿಟ್ಟೆ ವಿಶ್ವವಿದ್ಯಾನಿಲಯದ ಸಂಶೋಧನ ಯೋಜನೆಗಳ ನಿರ್ದೇಶಕಿ ಡಾ. ಇಂದ್ರಾಣಿ ಕರುಣಾಸಾಗರ, ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ಶೈಕ್ಷಣಿಕ ವಿಭಾಗದ ಉಪಕುಲಸಚಿವ ಡಾ. ಡಿ. ಸುರೇಶ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು.

Leave a Reply

Your email address will not be published. Required fields are marked *