ತುಮಕೂರು: ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಮಹತ್ವಾಕಾಂಕ್ಷಿ ಯೋಜನೆ ‘ಮಿಶನ್ ಉತ್ಥಾನ್’ನ ನೋಡಲ್ ಕಚೇರಿಯಾಗಿ ತುಮಕೂರು ವಿಶ್ವವಿದ್ಯಾನಿಲಯವು ಆಯ್ಕೆಯಾಗಿದೆ. ಈ ಯೋಜನೆಗೆ ದೇಶದಲ್ಲಿ ಆಯ್ಕೆಯಾದ ಕೆಲವೇ ಸಂಸ್ಥೆಗಳಲ್ಲಿ ತುಮಕೂರು ವಿವಿ ಒಂದಾಗಿದೆ.
ಎರಡು ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆ ಹಾಗೂ ಸಂಶೋಧನೆಯನ್ನು ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಆಶ್ರಯದಲ್ಲಿ ‘ಮಿಶನ್ ಉತ್ಥಾನ್’ ಅನ್ನು ಆರಂಭಿಸಿದೆ.
ಈ ಯೋಜನೆಯಡಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ತನ್ನ ‘ಇನ್ಕ್ಯುಬೇಶನ್, ಇನ್ನೋವೇಶನ್ ಅಂಡ್ ಎಂಟರ್‍ಪ್ರಿನ್ಯುರ್‍ಶಿಪ್ ಸೆಂಟರ್’ ಮೂಲಕ ತುಮಕೂರು ಜಿಲ್ಲೆಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಜಾರಿಗೆ ತರಲಿದೆ.
ಮಂಗಳೂರಿನ ತಣ್ಣೀರುಬಾವಿ ಬೀಚ್‍ನಲ್ಲಿ ಇತ್ತೀಚೆಗೆ ನಡೆದ ‘ಎಮರ್ಜ್ 2025’ ಸ್ಟಾರ್ಟಪ್ ಉತ್ಸವದಲ್ಲಿ ‘ಮಿಶನ್ ಉತ್ಥಾನ್’ ಯೋಜನೆಗೆ ಚಾಲನೆ ನೀಡಲಾಗಿದ್ದು, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದರು. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸ್ಟ್ರಾಟೆಜಿಕ್ ಅಲಯನ್ಸ್ ನಿರ್ದೇಶಕಿ ಡಾ. ಸಪ್ನಾ ಪೋತಿ ಅವರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಯುವ ಉದ್ಯಮಿಗಳು ಆರಂಭಿಸಬಹುದಾದ ಸ್ಟಾರ್ಟಪ್ ಉದ್ಯಮಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದರು.
ತುಮಕೂರು ವಿಶ್ವವಿದ್ಯಾನಿಲಯವು ಯುರೋಪಿನ ವಿಶಿಷ್ಟ ಉದ್ಯಮ ಮಾದರಿಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇಂಗ್ಲೆಂಡಿನ ಯೂನಿವರ್ಸಿಟಿ ಆಫ್ ಸೌತ್ ವೇಲ್ಸ್ ಜತೆ ಈಗಾಗಲೇ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ಅದರ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಕೇಂದ್ರ ಸಕ್ರಿಯವಾಗಿದೆ.
ತುಮಕೂರು ವಿವಿ ವ್ಯಾಪ್ತಿಯಲ್ಲಿ 90ಕ್ಕೂ ಸಂಯೋಜಿತ ಕಾಲೇಜುಗಳಿದ್ದು ಇವುಗಳ ಮೂಲಕ ಮಿಶನ್ ಉತ್ಥಾನ್‍ನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಗ್ರಾಮೀಣ ತಂತ್ರಜ್ಞಾನ ಅಭಿವೃದ್ಧಿ, ಸ್ಥಳೀಯ ಉದ್ಯಮಗಳಿಗೆ ಬೆಂಬಲ, ಸಮಾಜಮುಖಿ ತಂತ್ರಜ್ಞಾನ ಕೋರ್ಸುಗಳ ಆರಂಭ, ಮಹಿಳಾ ಉದ್ದಿಮೆದಾರರಿಗೆ ವಿಶೇಷ ಪ್ರೋತ್ಸಾಹ ಇತ್ಯಾದಿ ಯೋಜನೆಗಳನ್ನು ತುಮಕೂರು ವಿವಿ ಭವಿಷ್ಯದಲ್ಲಿ ಜಾರಿಗೆ ತರಲಿದೆ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ.