ತುಮಕೂರು ವಿ.ವಿ. ಮಕ್ಕಳಲ್ಲಿ ವಿಷ ಬಿತ್ತುವ, ಮೌಢ್ಯ ಬಿತ್ತುವವರನ್ನು ಆಹ್ವಾನಿಸಬಾರದು-ಪ್ರತಿಭಟನೆ

ತುಮಕೂರು : ತುಮಕೂರು ವಿವಿ ಸಂವಿಧಾನಕ್ಕೆ ಹೊರತಾದ ಸಂಸ್ಥೆಯಲ್ಲ, ವಿವಿಗಳು ಸಂವಿಧಾನದ ಮೌಲ್ಯ ಹಾಗೂ ಆಶಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು, ಆದರೆ ಸಂವಿಧಾನದ ಮೌಲ್ಯಗಳನ್ನು, ಆಶಯಗಳನ್ನು ವಿರೋಧಿಸುವ ಮಕ್ಕಳಲ್ಲಿ ಜನಾಂಗೀಯ ದ್ವೇಷ ಹಾಗೂ ವಿಷ ಬಿತ್ತುವ ಹಾಗೂ ಮೌಢ್ಯವನ್ನು ಬಿತ್ತುವವರನ್ನು ಆಹ್ವಾನಿಸಬಾರದು ಎಂದು ಜನಪರ ಚಿಂತಕ ಕೆ. ದೊರೈರಾಜ್ ಹೇಳಿದರು.

ಅವರಿಂದು ಒಂದು ಸಮುದಾಯದ ವಿರುದ್ಧ ದ್ವೇಷ ಭಾವನೆ ಬಿತ್ತುವ, ಕೋಮು ಶಕ್ತಿಗಳ ಪರ ವಾದಿಸುವ ಖಾಸಗಿ ಟಿವಿ ಚಾನೆಲ್ ಸಂಪಾದಕ ಅಜಿತ್ ಹನುಮಕ್ಕನವರ್ ಅವರನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ರಾಜ್ಯ ಮಟ್ಟದ ಮಾಧ್ಯಮ ಹಬ್ಬದ ಉದ್ಘಾಟನೆಗೆ ಆಮಂತ್ರಿಸಿರುವ ವಿವಿ ಕ್ರಮವನ್ನು ಖಂಡಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸರ್ಕಾರಿ ಕಲಾ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ವಿದ್ಯಾರ್ಥಿ ಯುವ ಜನರ ಒಕ್ಕೂಟಗಳ ನೇತೃತ್ವದಲ್ಲಿ ವಿವಿ ಮುಖ್ಯದ್ವಾರದಲ್ಲಿ ಧರಣಿ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಆದ್ದರಿಂದ ಮಾಧ್ಯಮ ಹಬ್ಬಕ್ಕೆ ಕೋಮುವಾದಿ ವ್ಯಕ್ತಿಯನ್ನು ಆಮಂತ್ರಿಸಿರುವುದನ್ನು ಖಂಡಿಸುತ್ತಿದ್ದೇವೆ ಎಂದರು ನಾವು ಕಷ್ಟಪಟ್ಟು ಹೋರಾಟ ಮಾಡಿ ತುಮಕೂರು ವಿವಿಯನ್ನು ಅಸ್ತಿತ್ವಕ್ಕೆ ತಂದವರು. ವಿವಿ ಹಾದಿತಪ್ಪಿದಾಗ ಎಚ್ಚರಿಸುವ ಜವಾಬ್ದಾರಿ ಈ ಜಿಲ್ಲೆಯ ನಾಗರಿಕರಿಗಿದೆ, ಈ ವಿವಿಯನ್ನು ಕೋಮುವಾದಿಗಳ ನೆಲೆ ಮಾಡುವುದನ್ನು ವಿರೋಧಿಸಲು ನಮಗೆ ನೈತಿಕ ಹಕ್ಕಿದೆ ಎಂದರು.

ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್ ಮಾತನಾಡಿ, ವಿಶ್ವವಿದ್ಯಾಲಯಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ವಿರುದ್ಧವಾಗಿರುವ ವ್ಯಕ್ತಿಯನ್ನು ಕರೆಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ವಿವಿಗೆ ಅಜಿತ್ ಹನುಮಕ್ಕನವರ್ ಅವರನ್ನು ಕರೆಸಬಾರದೆಂದು ಹಲವು ಸಂಘಟನೆಗಳ ಮುಖಂಡರ ನಿಯೋಗವು ಮನವಿ ಸಲ್ಲಿಸಿದರೂ ಸಹ ಕರೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಎಫ್.ಐ ಜಿಲ್ಲಾಧ್ಯಕ್ಷ ಹಾಗೂ ಯುವ ವಕೀಲ ಈ.ಶಿವಣ್ಣ ಮಾತನಾಡಿ ವಿಶ್ವವಿದ್ಯಾಲಯದಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳು ಇವೆ. ವಿವಿಗೆ ಸ್ವಂತ ಕಟ್ಟಡವಿಲ್ಲದೆ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ಇದೆ. ಇದನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬದಲು ಕೋಮುವಾದಿ ವ್ಯಕ್ತಿಗಳನ್ನು ಕರೆಸಿ ಭಾಷಣ ಮಾಡಲಾಗುತ್ತಿದೆ. ವಿವಿ ಇಂತಹ ಪ್ರವೃತ್ತಿಯನ್ನು ಬಿಡಬೇಕು ಎಂದು ತಿಳಿಸಿದರು.

ತುಮಕೂರು ವಿವಿ ವಿದ್ಯಾಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ರಾಷ್ಟ್ರ ಮಟ್ಟದ ವಿವಿಗಳಲ್ಲಿ ಒಂದಾಗಬೇಕು. ಕೋಮುವಾದ ಬಿತ್ತುವ ಕೇಂದ್ರಗಳಾಗಬಾರದು, ಜ್ಞಾನವನ್ನು ಬಿತ್ತುವ ಕೇಂದ್ರಗಳಾಗಬೇಕು ಎಂದು ಹೇಳಿದರು.

ತುಮಕೂರು ವಿವಿಯಲ್ಲಿ ಪರೀಕ್ಷೆ ನಡೆದು ಮೂರು ತಿಂಗಳಾದರೂ ಇನ್ನೂ ಫಲಿತಾಂಶ ಬಂದಿಲ್ಲ. ಘಟಿಕೋತ್ಸವ ನಡೆದಿಲ್ಲ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿಲ್ಲ. ಸಮಯಕ್ಕೆ ಸರಿಯಾಗಿ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಚಿಂತಕ ಡ್ಯಾಗೇರಹಳ್ಳಿ ವಿರೂಪಾಕ್ಷ ಮಾತನಾಡಿ, ವಿವಿಯ ನರ್ಧಾರಗಳು ಸಾಮಾಜಿಕವಾಗಿದ್ದರೆ ಉತ್ತಮ ಶೈಕ್ಷಣಿಕ ವಾತಾವರಣ ನರ್ಮಾಣವಾಗುತ್ತದೆ. ಆದರೆ ತುಮಕೂರು ವಿವಿಯ ಕುಲಪತಿಗಳು ಇದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಟೀಕಿಸಿದರು. ವಿದ್ಯರ್ಥಿಗಳಿಗೆ ನಿರುದ್ಯೋಗ, ಅಭದ್ರತೆ, ಅಸಮಾನತೆಗಳಂತಹ ಸಮಸ್ಯೆಗಳು ಕಾಡುತ್ತಿವೆ. ಆದರಿಂದ ವಿವಿಯು ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಕೆಲಸ ಮಾಡಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಶರೀಫ್ ಮಾತನಾಡಿ ವಿವಿಯಲ್ಲಿ ನಡೆಯುವ ಕೋಮುವಾದಿ ಚಟುವಟಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡ ಬಂಡೆಕುಮಾರ್, ನಾಗರಾಜ ಉಪ್ಪಾರಹಳ್ಳಿ, ವಕೀಲ ರಂಗಧಾಮಯ್ಯ, ವಿವಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಮೇಶ್, ನೆಲಸಿರಿ ಪ್ರಕಾಶನದ ನಟರಾಜಪ್ಪ, ಕೋಡಿಯಾಲ ಮಹದೇವ, ಮಧು, ಉಪನ್ಯಾಸಕ ಮೂರ್ತಿ, ಸಾಹಿತಿ ಈಚನೂರು ಇಸ್ಮಾಯಿಲ್, ಲಿಂಗಮಯ್ಯ, ದೇವರಾಜು, ಕ್ಯಾತ್ಸಂದ್ರ ಗಣೇಶ್, ಶ್ರೀನಿವಾಸ್, ಎಸ್.ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *