ತುರುವೇಕೆರೆ : ಕೆಸರು ಗದ್ದೆಯಂತಾಗಿರುವ ಬಲಿಗಾಗಿ ಕಾಯುತ್ತಿರುವ ತೊರೆಮಾವಿನಹಳ್ಳಿ ರಸ್ತೆ, ನಿದ್ರೆಗೆ ಜಾರಿರುವ ಜನಪ್ರತಿನಿಧಿಗಳು

ತುರುವೇಕೆರೆ- ತಾಲ್ಲೂಕಿನ ತೊರೆಮಾವಿನಹಳ್ಳಿ ಗೇಟ್‍ನಿಂದ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದಿದ್ದು, ಮಳೆ ನೀರು ತುಂಬಿ ಕೆಸರುಗದ್ದೆಯಂತಾಗಿದೆ. ಇಷ್ಟಾದರೂ ಜನ ಪ್ರತಿನಿಧಿಗಳು ಗಮನ ಹರಿಸದೆ ನಿದ್ರೆಗೆ ಜಾರಿದ್ದಾರೆಂದು ಈ ಭಾಗದ ಜನ ಶಾಪ ಹಾಕುತ್ತಿದ್ದಾರೆ.

ತೊರೆಮಾವಿನಹಳ್ಳಿ ಗೇಟ್‍ನಿಂದ ತೋಟದ ಸಾಲುಗಳ ಮಧ್ಯೆ ನಾಲ್ಕೈದು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಇದೆ. ಈ ರಸ್ತೆಯಲ್ಲಿ ಮೂರು-ನಾಲಕು ವರ್ಷದಿಂದ ಆಳುದ್ದ ಗುಂಡಿಗಳು ಬಿದ್ದಿದ್ದು, ಈ ಗುಂಡಿಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ.

ತೊರೆಮಾವಿನಗೇಟ್‍ನಿಂದ ತೊರೆಮಾವಿನಹಳ್ಳಿ, ಕೋಳಘಟ್ಟ, ಆನೆಕೆರೆ ಕಡೆಗೆ ಹೋಗುವ ಮಾರ್ಗದಲ್ಲಿರುವ ಬಸವನತೋಟದ ಸಮೀಪ ಆಳುದ್ದ ಗುಂಡಿಗಳು ಬಿದ್ದಿದ್ದು, ಜನಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ತೊರೆಮಾವಿನಹಳ್ಳಿ, ಭೂವನಹಳ್ಳಿ, ಆನೆಕೆರೆ, ಕೋಳಘಟ್ಟ ಸೇರಿದಂತೆ ಇತರೆ ಗ್ರಾಮಗಳ ಜನತೆ ಸಂಚರಿಸುತ್ತಾರೆ. ಈ ರಸ್ತೆ ಸದ್ಯ ಕೆಸರುಗದ್ದೆಯಾಗಿ ಗುಂಡಿಗಳು ಜಲಾವೃತಗೊಂಡಿರುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಸಂಚರಿಸಲು ತೀವ್ರ ಪ್ರಯಾಸಪಡಬೇಕಾಗಿದೆ. ಇನ್ನು ಈ ರಸ್ತೆಯಲ್ಲಿ ಬಸ್ ಸಂಚಾರ ಸಹ ಇದ್ದು, ಬಸ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಂತೂ ಪ್ರತಿನಿತ್ಯವೂ ಜೀವ ಅಂಗೈಯಲ್ಲಿಡಿದು ಪ್ರಯಾಣಿಸುವಂತಾಗಿದೆ.

ಒಂದು ವೇಳೆ ದ್ವಿಚಕ್ರ ವಾಹನ ಸವಾರರು ಕೊಂಚ ಯಾಮಾರಿದರೂ ನೀರು ತುಂಬಿರುವ ಗುಂಡಿಗಳಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ಹಲವು ಬಾರಿ ದ್ವಿಚಕ್ರ ವಾಹನ ಸವಾರರು ಕೆಳಗೆ ಬಿದ್ದು ಗಾಯಗೊಂಡಿರುವ ನಿದರ್ಶನಗಳೂ ಇವೆ.

ಇನ್ನು ಈ ರಸ್ತೆಯಲ್ಲಿ ಕಾರುಗಳ ಸಂಚಾರವಂತೂ ಕಷ್ಟ ಸಾಧ್ಯ. ಬಿದ್ದಿರುವ ಆಳುದ್ದ ಗುಂಡಿಗಳು ಮಳೆ ನೀರಿನಿಂದ ಜಲಾವೃತಗೊಂಡಿರುವುದಿಂದ ಕಾರುಗಳು ಸುಗಮವಾಗಿ ಚಲಿಸಲಾಗದೆ ಗುಂಡಿಗಳ ಕೆಸರಿನಲ್ಲಿ ಸಿಲುಕಿಕೊಂಡು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಈ ಭಾಗದ ಜನತೆ ಅನುಭವಿಸುತ್ತಿದ್ದರೂ ಗಮನ ಹರಿಸದಿರುವ ಆಡಳಿತಶಾಹಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಹೀಗೆಯಾದರೆ ಬಿದ್ದು ಸಾವನ್ನಪಿದರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ.

ತೊರೆಮಾವಿನಹಳ್ಳಿ ಗೇಟ್‍ನಿಂದ ನಾಲ್ಕೈದು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಇಷ್ಟೊಂದು ಅದ್ವಾನಗೊಂಡಿದ್ದರೂ ಸಹ ಯಾವೊಬ್ಬ ಜನಪ್ರತಿನಿಧಿಯಾಗಲೀ, ಅಧಿಕಾರಿಗಳಾಗಲೀ ಗಮನ ಹರಿಸದಿರುವುದು ವಿಪರ್ಯಾಸಕರ ಸಂಗತಿ.

ಈಗಲಾದರೂ ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ. ಕೃಷ್ಣಪ್ಪ, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಹದಗೆಟ್ಟು ಅದ್ವಾನಗೊಂಡಿರುವ ಈ ರಸ್ತೆ ಬಗ್ಗೆ ಗಮನ ಹರಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಮೂಲಕ ಈ ಭಾಗದ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಈ ಹಳ್ಳಿಗಳ ಜನರ ಮನವಿಯಾಗಿದೆ.

Leave a Reply

Your email address will not be published. Required fields are marked *