ತುಮಕೂರು : ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಇನ್ನೆರಡು ದಿನ ಭಾರಿ ಪ್ರಮಾಣದ ಗುಡುಗು-ಸಿಡಿಲು ಸಹಿತ ಗಾಳಿ-ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲಾ-ತಾಲ್ಲೂಕು-ಗ್ರಾಮ ಮಟ್ಟದ ಅಧಿಕಾರಿ-ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಈವರೆಗೆ ಶೇ.86ರಷ್ಟು ಅಧಿಕ ಮಳೆಯಾಗಿದ್ದು, ಪ್ರವಾಹ-ಭಾರಿ ಮಳೆಯಿಂದ ಯಾವುದೇ ಜನ-ಜಾನುವಾರುಗಳ ಜೀವ ಹಾನಿಯಾಗದಂತೆ ಮುಂಜಾಗ್ರತೆವಹಿಸಬೇಕು. ಭಾರಿ ಮಳೆ-ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು-ಮೈಕ್ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು. ನಿರಂತರ ಮಳೆಯಿಂದ ದುರ್ಬಲ ಮಣ್ಣಿನ ಮನೆ-ಕಟ್ಟಡ, ಮರದ ಕೊಂಬೆ, ಜಲಕಾಯ, ವಿದ್ಯುತ್ ವಸ್ತುಗಳಿಂದ ದೂರವಿರುವ ಬಗ್ಗೆ ಎಚ್ಚರವಹಿಸಲು ವ್ಯಾಪಕ ಪ್ರಚಾರ ನೀಡಬೇಕು. ಶಾಲಾ-ಅಂಗನವಾಡಿ ಮೇಲ್ಛಾವಣಿ-ಗೋಡೆ ಹಾಗೂ ನದಿ-ಹಳ್ಳ-ಕೆರೆ-ಕಟ್ಟೆ-ರಸ್ತೆ-ಸೇತುವೆ-ವಿದ್ಯುತ್ ಸಂಪರ್ಕ ಇತ್ಯಾದಿ ಮೂಲಭೂತ ಸೌಕರ್ಯಗಳ ಸುಸ್ಥಿತಿ ಬಗ್ಗೆ ಪರಿಶೀಲಿಸಬೇಕು. ಹಠಾತ್ ಪ್ರವಾಹವಾಗುವ ತಗ್ಗು ಪ್ರದೇಶದ ವಾರ್ಡ್-ಅಂಡರ್ ಪಾಸ್-ರಸ್ತೆಗಳ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಅರ್ಹ ಪ್ರಕರಣಗಳಿಗೆ ನಿಯಮಾನುಸಾರ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ತುರ್ತು ಪರಿಹಾರ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.