ತುಮಕೂರು : ಇಂದೂ ಸಹ ಗುಬ್ಬಿಯಲ್ಲಿ ಗೂ ಬ್ಯಾಕ್ ವಿ ಸೋಮಣ್ಣ ಅಭಿಯಾನ ನಡೆಯಿತು.
ಜಿಲ್ಲೆಯಲ್ಲಿ ಬಿಜೆಪಿಯಿಂದ ಲೋಕಸಭಾ ಟಿಕೆಟ್‍ಗಾಗಿ ಮಾಜಿ ಸಚಿವರುಗಳಾದ ಜೆ.ಸಿ.ಮಾಧುಸ್ವಾಮಿ ಮತ್ತು ವಿ.ಸೋಮಣ್ಣ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ವಿ.ಸೋಮಣ್ಣ ಗೋ ಬ್ಯಾಕ್ ಎಂಬ ಅಭಿಯಾನ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಮಾಜಿ ಸಚಿವ ವಿ.ಸೋಮಣ್ಣ ಹೊರಗಿನವರಾಗಿದ್ದು, ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಪ್ರತಿಭಟನೆ ನಡೆಯುತ್ತಿದ್ದು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಅಭಿಯಾನ ನಡೆಸುತ್ತಿದ್ದಾರೆ.

ನಿನ್ನೆ ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ವಿ.ಸೋಮಣ್ಣ ಅಭಿಯಾನ ಪ್ರಾರಂಭಿಸಿದ್ದರು, ಸೋಮಣ್ಣ ಹೊರಗಿನವರಾಗಿದ್ದು ಅವರಿಗೆ ಟಿಕೆಟ್ ನೀಡಬಾರದು ವಿ.ಸೋಮಣ್ಣನವರ ಪರ ನಿಂತಿರುವ ಸಂಸದ ಜಿ.ಎಸ್.ಬಸವರಾಜು ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದರು.
ಇಂದು ಗುಬ್ಬಿಯಲ್ಲಿ ಗೋ ಬ್ಯಾಕ್ ಚಳುವಳಿ ಪ್ರಾರಂಭವಾಗಿದ್ದು ಹೊರಗಿನವರಿಗೆ ಟಿಕೆಟ್ ನೀಡಿದರೆ ಸೋಲು ಖಚಿತ ಎಂದು ಜೆ.ಸಿ.ಮಾಧುಸ್ವಾಮಿ ಈ ಹಿಂದೆ ಹೊರಗಿನವರು ಬಂದು ನಿಂತು ಸೋತಿರುವುದನ್ನು ಪತ್ರಿಕಾಗೋಷ್ಠಿಯಲ್ಲಿ ವಿ.ಸೋಮಣ್ಣನವರಿಗೆ ಟಿಕೆಟ್ ನೀಡಿಕೆಯನ್ನು ವಿರೋಧಿಸಿದ್ದರು.

ಇನ್ನ ಕೆಲವೇ ಗಂಟೆಗಳಲ್ಲಿ ಬಿಜೆಪಿ ಲೋಕಸಭಾ ಟಿಕೆಟ್ ಘೋಷಣೆಯಾಗುವುದು. ಬಿ.ಎಸ್.ಯಡಿಯೂರಪ್ಪನವರು ಜೆ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿ.ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಟಿಕೆಟ್ ನೀಡಬೇಕೆಂದು ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಚುನಾವಣೆಯ ಟಿಕೆಟ್ ಇಂದು ಘೋಷಣೆಯನ್ನು ಒಂದೆರಡು ದಿನ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತುಮಕೂರಿನ ಹಾಲಿ ಸಂಸದರಾದ ಜಿ.ಎಸ್.ಬಸವರಾಜು, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿ.ಸುರೇಶ್‍ಗೌಡ ಅವರು ಜೆ.ಸಿ.ಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಮೊದಲಿನಿಂದಲೂ ಸ್ಥಳೀಯರಿಗೆ ಟಿಕೆಟ್ ನೀಡುತ್ತಾ ಬಂದಿದ್ದು, ಈ ಬಾರಿ ಹೊರಗಿನವರಿಗೆ ಟಿಕೆಟ್ ನೀಡುವರೇ ಎಂಬ ಕುತೂಹಲ ಕ್ಷಣ ಕ್ಷಣಕ್ಕೂ ಹೊಲೆಯ ಮೇಲಿನ ಕಾದ ಹೆಂಚಿನಂತೆ ಕಾವು ಪಡೆಯುತ್ತಾ ಇದೆ.