
ತುಮಕೂರು : ಈಗಿನ ಹಿರಿಯ ಸಮಾಜವಾದಿ ಹಿನ್ನಲೆಯಿಂದ ಬಂದ ರಾಜಕಾರಣಿಗಳು ತಮ್ಮ ಕಿರಿಯ ಸಮಾಜವಾದಿಗಳ ಗೋರಿಯ ಮೇಲೆ ಮೆರೆಯುತ್ತಿರುವುದನ್ನು ನೋಡಿದರೆ ಏನು ತಗೊಂಡು ಹೊಡೆದರೂ ನಮ್ಮಂತಹವರ ಕೋಪ, ಸಿಡಿವು ಕಡಿಮೆಯಾಗುವುದಿಲ್ಲ.
ಈ ಸಮಾಜವಾದಿ ಹಿರಿಯ ರಾಜಕಾರಣಿಗಳಿಗೆ ನನ್ನಂತಹವನೂ ಸೇರಿದಂತೆ ಸಾವಿರಾರು ಕಿರಿಯ ಸಮಾಜವಾದಿಗಳು 70 ಮತ್ತು 80ರ ದಶಕದಲ್ಲಿ ಬಿಡುತ್ತಿದ್ದ ಸಮಾಜವಾದದ ಉದ್ದುದ್ದ ಭಾಷಣಗಳಿಗೆ ಅವರನ್ನು ನಮ್ಮ ತಲೆಯ ಮೇಲೆ ಹೊತ್ತು ವಿಧಾನಸೌಧ ಮೆಟ್ಟಿಲುಗಳನ್ನು ಹತ್ತುವಂತೆ ಮಾಡಿಬಿಟ್ಟೆವು.

ಅದೇನೋ ವಿಧಾನಸೌಧವೇ ಹಾಗೆಯೇನೋ ಅದರೊಳಗೆ ಹೋದ ಸಮಾಜವಾದಿ ರಾಜಕಾರಣಿಗಳು ಅವರನ್ನು ತಲೆ ಮೇಲೆ ಹೊತ್ತು ಅಲ್ಲಿಗೆ ಕಳಿಸಿದ ಕಿರಿಯ ಸಮಾಜವಾದಿಗಳನ್ನು, ಲೋಹಿಯಾವಾದಿಗಳನ್ನು ಕತ್ತೆ ಒದೆಯುವಂತೆ ಒದ್ದು ಬಿಟ್ಟು, ವಿಧಾನಸೌಧದ ದೊಡ್ಡ ದೊಡ್ಡ ಫಿಲ್ಲರ್‍ಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಸಮಾಜವಾದದ ಚಿಂತನೆ,ಲೋಹಿಯಾ ಚಿಂತನೆಗಳನ್ನು ಗಾಳಿಗೆ ತೂರಿ, ದಲಿತರ ಬಗ್ಗೆ, ರೈತರ ಬಗ್ಗೆ ಮಾತನಾಡುತ್ತಿದ್ದ ಇವರು ಬಾಯಿಯನ್ನು ಫೆವಿಕಿಕ್ ಹಾಕಿ ಅಟ್ಟಿಸಿಕೊಂಡು ಬಿಟ್ಟರು.
ಪಾಪ ಇವರ ಸಮಾಜವಾದಿ ಉದ್ದುದ್ದ ಭಾಷಣಗಳನ್ನು ಕೇಳಿ ಸಮಾಜವಾದ, ಲೋಹಿಯಾವಾದವನ್ನು ತಲೆ ಮೇಲೆ ಇಟ್ಟುಕೊಂಡು ಅಂದಿನಿಂದ ಇಂದಿನವರೆಗೂ ತಮಗಲ್ಲದಿದ್ದರೂ ಸಮಾಜದಲ್ಲಿ ಕಟ್ಟ ಕಡೆಯ ಬಡವನಿಗೆ, ರೈತನಿಗೆ, ಕಾರ್ಮಿಕನಿಗೆ ಕನಿಷ್ಟ ಮುಲಾಮನ್ನಾದರೂ ಹಚ್ಚುತ್ತಾರೆ ಎಂದುಕೊಂಡ ಕಿರಿಯ ಸಮಾಜವಾದಿ ಗೆಳೆಯರು ಇಂದು ವಿಧಾನಸೌಧದ ಮುಂದೆ ಹರಕಲು ಅಂಗಿ, ಕುರುಚಲು ಗಡ್ಡದೊಂದಿಗೆ ನಾವು ಬದಲಾವಣೆ ಬಯಸಿ ಕಳಿಸಿದ ಸಮಾಜವಾದಿ ರಾಜಕಾರಣಿಗಳು ಹೊರ ಬಂದು ನಮ್ಮನ್ನು ಕನಿಷ್ಠ ಚೆನ್ನಾಗಿದ್ದೀಯ ಎಂದಾದರೂ ಮಾತನಾಡಿಸುವ ಸೌಜನ್ಯವಿದೆಯೇ ಎಂಬುದನ್ನು ತಾಳ್ಮೆಯಿಂದ ಕಾಯುತ್ತಿರುವ ಕಿರಿಯ ಸಮಾಜವಾದಿಗಳನ್ನು ಈ ಹಿರಿಯ ಸಮಾಜವಾದಿ ರಾಜಕಾರಣಿಗಳು ಏನು ಮಾಡಿದ್ದಾರೆ ಎಂಬುದನ್ನು ನೋಡಿದರೆ ಎಂತಹವನಿಗೂ ಸಿಟ್ಟು, ಸೆಡವು ಬರುತ್ತದೆ.

ಒಂದು ಕಾಲದಲ್ಲಿ ತೇಜಸ್ವಿ, ಲಂಕೇಶ್, ಕೆ.ರಾಮದಾಸ್, ನಂಜುಂಡಸ್ವಾಮಿ, ಪ್ರೊ.ಬಿ.ಕೃಷ್ಣಪ್ಪ, ಕೆ.ಎಂ.ಶಂಕರಪ್ಪ, ಕಾಳೇಗೌಡ ನಾಗವಾರ, ಬರೂರು ರಾಮಚಂದ್ರಪ್ಪ, ಕೀರಂನಾಗರಾಜು, ಶಿವಮೊಗ್ಗದ ಎನ್.ಡಿ.ಸುಂದರೇಶ್, ಚಂದ್ರಶೇಖರ ಪಾಟೀಲ್, ಅನುಸೂಯಮ್ಮ, ಸಾರಾ ಅಬೂಬುಕರ್, ಎಸ್.ಜಿ.ಸಿದ್ದರಾಮಯ್ಯ, ನಟ ಹನುಮಂತೇಗೌಡ, ಸಿ.ಕೆ.ಉಮಾಪತಿ ಇನ್ನೂ ಅನೇಕ ಸಮಾಜವಾದಿ ಗೆಳೆಯರು ಇವರನ್ನೆಲ್ಲಾ ವಿಧಾನಸೌಧಕ್ಕೆ ಕಳಿಸಲು ಪಟ್ಟಪಡಿಪಾಟಲು ಅವರಿಗೆ ಗೊತ್ತಿಲ್ಲವೇ.
ಈ ಮೇಲೆ ಹೇಳಿದ ಹೇಸರುಗಳು ಯಾವುದಕ್ಕೆ ಕಡಿಮೆ, ಇವರನ್ನೆಲ್ಲಾ ಬಳಸಿಕೊಂಡ ಈ ಹಿರಿಯ ಸಮಾಜವಾದಿ ರಾಜಕಾರಣಿಗಳು ಯಾರನ್ನೂ ಏನೂ ಮಾಡಲಿಲ್ಲ, ಈ ಸ್ಥಾನಕ್ಕೆ ಬರಲು ಹಗಲು ರಾತ್ರಿ ದುಡಿದ ಕಿರಿಯ ಸಮಾಜವಾದಿ, ಲೋಹಿಯಾವಾದಿಗಳನ್ನು ಕನಿಷ್ಟ ಕರೆದು ಬದುಕಿದ್ದೀರ, ಸತ್ತೀದ್ದೀರ ಎಂದು ಕೇಳುವ ಸೌಜ್ಯವಾದರೂ ಇದೆಯೇ?

ಇವರ ಹಿಂದೆ ಯಾರಿದ್ದಾರೆ, ಇವರೆಲ್ಲಾ ಈಗಿನ ತಲೆಮಾರಿನ ರಾಜಕಾರಣಿಗಳಂತೆ ಭ್ರಷ್ಟಚಾರ, ಲಂಚ, ಸೋಗಲಾಡಿತನಕ್ಕೆ ಯಾಕೆ ಸಮಾಜವಾದ, ತತ್ವ, ಸಿದ್ಧಾಂತ ಹೇಳಿಕೊಂಡು ವಿಧಾನಸೌಧದ ಮೆಟ್ಟಿಲು ಹತ್ತಬೇಕಿತ್ತು, ಸಮಾಜವಾದ, ಸಮತಾವಾದ ಮಾತನಾಡುವ ನೀವು ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲಿ ಗೆದ್ದು ವಿಧಾನಸೌಧಕ್ಕೆ ಹೋಗಿ ಏನು ಮಾಡಿದ್ದೀರಿ ಎಂಬುದನ್ನಾದರೂ ಅವಲೋಕನ ಮಾಡಿಕೊಂಡಿದ್ದರೆ ನಮ್ಮಂತಹ ಕಿರಿಯ ಸಮಾಜವಾದಿಗಳಿಗೆ, ಲೋಹಿಯಾವದಿಗಳಿಗೆ ಕನಿಷ್ಠ ಸಮಾದಾನವಾದರೂ ಆಗುತ್ತಿತ್ತು.
ಮೈಸೂರಿನಿಂದ ಬಂದಿದ್ದ ಹಿರಿಯ ಗೆಳೆಯರೂ, ಪ್ರಕರ ಚಿಂತಕರೂ, ಲೋಹಿಯಾವಾದಿಗಳೂ ಆದ ಕಾಳೇಗೌಡ ನಾಗವಾರ ಅವರು ಒಂದು ದಿನವೆಲ್ಲಾ ತುಮಕೂರಿನಲ್ಲಿ ಅವರ ಜೊತೆ ಓಡಾಡಿದೆವು, ಅವರ ಸರಳತೆ, ಅವರ ಸಮಾಜವಾದದ, ಲೋಹಿಯಾ ಚಿಂತನೆಗಳನ್ನು ಈ ನಾಡಿಗೆ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಅವರಿಗೆ ಕನಿಷ್ಠ ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನವೂ ಸಿಗಲಿಲ್ಲ, ನಿನ್ನೆ ತುಮಕೂರಿನ ರಸ್ತೆಯಲ್ಲಿ ಹೆಜ್ಜೆ ಹಾಕುವಾಗ ಏನ್ ಸಾರ್ ನೀವು ವೀಸಿನೂ ಆಗಲಿಲ್ಲ ಎಂದಾಗ, ನನ್ನ ಮುಖ ನೋಡಿ ಪಕಾರನೇ ನಕ್ಕು ಬಿಟ್ಟರು, ಬಾರಯ್ಯ ಆ ಕಾರಕೂನ ವೀಸಿ ಹುದ್ದೆ ಯಾರಿಗೆ ಬೇಕು ಎಂದರು, ಈ ಮಾತಿನ ಹಿಂದೆ ಅವರ ಮನದಾಳಲ್ಲಿ ಬಹಳ ಅರ್ಥಗಳನ್ನು ಕೊಡುತ್ತಿತ್ತು, ಮತ್ತೆ ಬಸವಲಿಂಗಪ್ಪ, ಜೆ.ಹೆಚ್.ಪಟೇಲರ ಒಡನಾಟವನ್ನು ಒತ್ತಿ ಹೇಳಿದರು.
ಇಂತಹ ಪ್ರಬುದ್ಧ, ಮೇರು ವ್ಯಕ್ತಿತ್ವದ ಸಮಾಜವಾದವನ್ನು ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸುತ್ತಿದ್ದ ರಾಜಕಾರಣಿಗಳ ಜೊತೆ ಇದ್ದರೂ ಅವರಿಗೆ ಏನೇಲ್ಲಾ ಆಗುವ ಆರ್ಹತೆ ಇದ್ದರೂ ಅವರೆಂದೂ ಅದರ ಬೆನ್ನು ಬಿದ್ದು ಹೋಗಲೇ ಇಲ್ಲ.
ಯಾಕೆಂದರೆ ಈ ನಾಡಿಗೆ ಕಾಳೇಗೌಡ ನಾಗವಾರ ಅವರು ಇತರೇ ಯೂನಿರ್ವಸಿಟಿ ಪ್ರೊಪೆಸರ್‍ಗಳು ಶಿಷ್ಯಕೋಟಿ ಕಟ್ಟಿಕೊಂಡು ಲಾಭಿ ನಡೆಸುವ ಗುಣವಾಗಲಿ, ರಾಜಕಾರಣೀಗಳ ಭಾಗಿಲಲ್ಲಿ ಅರ್ಜಿ ಹಿಡಿದು ನಿಲ್ಲುವುದಾಗಲಿ ಮಾಡಲಿಲ್ಲ. ಅವರು ತಮ್ಮ ಜೋರು ಧ್ವನಿಯ ಹೃದಯದ ಮಾತುಗಳಿಂದ ಸಮಾಜವಾದ ಮತ್ತು ಲೋಹಿಯಾವಾದವನ್ನು ಇಡೀ ಕರ್ನಾಟಕ್ಕೆ ಬುದ್ಧನ ಬೆಳಕಿನಂತೆ ಪ್ರಸರಿಸುವಂತೆ ಮಾಡಿದರು.
ಅವರು ಮೊನ್ನೆ ತುಮಕೂರಿನಲ್ಲಿ ಅಂಬೇಡ್ಕರ್ ಮತ್ತು ಬೂಸಾ ಸಾಹಿತ್ಯ ಎಂದ ಬಿ.ಬಸವಲಿಂಗಪ್ಪನವರ ಬಗ್ಗೆ ಅವರು ಎಷ್ಟು ಸರಳ ಭಾಷೆಯಲ್ಲಿ ಅವರಿಬ್ಬರನ್ನೂ ಹಿಡಿದಿಟ್ಟರು ಎಂದರೆ, ಅವರ ಭಾಷಣ ಮುಗಿದ ನಂತರ ತುಮಕೂರಿನ ಪ್ರಗತಿಪರರು, ಚಿಂತಕರು, ಶಿಕ್ಷಕರು, ಪ್ರೊಪೆಸರ್‍ಗಳು ಕಾಳೇಗೌಡ ನಾಗವಾರ ಅವರನ್ನು ಬಾಚಿ ತಬ್ಬಿಕೊಂಡು ಏನನ್ನೋ ಕಳೆದುಕೊಂಡಿದ್ದೆವು ಪಡೆದುಕೊಂಡಂತೆ ತಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಂಡರು.
ಇಂತಹ ಪ್ರಕರ ಜ್ಞಾನಿ, ಚಿಂತಕರ ಜೊತೆ ಒಂದು ದಿನ ಅವರೊಂದಿಗೆ ತುಮಕೂರಿನಲ್ಲಿ ಹೆಜ್ಜೆ ಹಾಕಿದ್ದು ನನ್ನಂತಹವನಿಗೆ ಮತ್ತುಷ್ಟು ಏನನ್ನಾದರೂ ಮಾಡೋಣ, ನಮ್ಮಲ್ಲಿರುವ ಒಳ್ಳೆಯದನ್ನು ಕೇಡು ಮತ್ತು ಕೆಡುಕನ್ನು ಬಯಸದೇ ಮಾಡೋಣ, ಮತ್ತೆ ಮತ್ತೆ ಕಾಳೇಗೌಡ ಅಂತಹವರನ್ನು ಮತ್ತಷ್ಟು ಚಿಂತನೆಗಳನ್ನು ಈಗಿನ ಯುವಕರಿಗೆ ತಲುಪಿಸುವ ಮತ್ತಷ್ಟು ಹೊರೆ, ಜವಾಬ್ದಾರಿ ನಮ್ಮಂತಹವರ ಮೇಲಿದೆ ಎನ್ನಿಸಿತು.
ಅವರು ನನ್ನೊಂದಿಗೆ ಎಷ್ಟೊಂದು ಸರಳವಾಗಿ, ಸರಳ ಭಾಷೆಯಲ್ಲಿ ಕೈ ಹಿಡಿದು ಬುದ್ಧನಂತೆ ನಡೆಸಿದ್ದನ್ನು ನೋಡಿದರೆ ಕುವೆಂಪು ಅವರು ಕೂರಿಸಿಕೊಂಡು ವಿಶ್ವಮಾನವ ಗೀತೆಯನ್ನು ಹೇಳಿಕೊಟ್ಟಿದ್ದು, ಲಂಕೇಶ್, ತೇಜಸ್ವಿ, ಕೆ.ಎಂ.ಶಂಕರಪ್ಪ ಕಿಷನ್ ಪಟ್ನಾಯಕ್ ಅವರುಗಳು ಕಾದ ಕಬ್ಬಿಣದಂತೆ ನಮಗೆ ಹೇಳುತ್ತಿದ್ದ ಮಾತುಗಳು ಅಲೆ ಅಲೆಯಾಗಿ ತೇಲಿ ಹೋದವು.

ಕಾಳೇಗೌಡ ನಾಗವಾರ ಅವರು ಕರುಡಾಗಿದ್ದ ನನ್ನ ಕಣ್ಣುಗಳನ್ನು, ಲದ್ದಿಯಾಗಿದ್ದ ಮೆದುಳನ್ನು, ಸುಮ್ಮನೆ ಇದ್ದ ಹೃದಯವನ್ನು ಬಡಿದೆಚ್ಚರಿಸಿ ಈ ಸಮಾಜಕ್ಕೆ, ಮುಂದಿನ ಜನಾಂಗಕ್ಕೆ ಏನನ್ನಾದರೂ ಮಾಡೋಣ ಎಂದು ಹೇಳಿ ಹೋದರು ಅನ್ನಿಸುತ್ತಾ ಇದೆ, ತುಮಕೂರಿನ ಸಮಾಜವಾದಿ, ಲೋಹಿಯಾವಾದಿ ಗೆಳೆಯರಿಗೆ ಏನನ್ನಿಸಿತೋ ನೋಡೋಣ, ಏನಾದರೂ ಮಾಡೋಣ, ನೀರು, ಗಾಳಿಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವಂತೆ ಒಳ್ಳೆಯ ಚಿಂತನೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಆದ್ಯ ಕರ್ತವ್ಯ ಅದಕ್ಕೆ ನಾವು ಈ ಡೋಂಗಿ ಸಾಮಜವಾದಿ ರಾಜಕಾರಣಿಗಳಿಗೆ ಅಂಕುಶದಿಂದ ತಿವಿಯದಿದ್ದರೆ, ಸಮಾಜವಾದಿಗಳು ಬೀದಿಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಸುಟ್ಟುಕೊಳ್ಳುವುದೋ ಅಥವಾ ಸುಡುವ ದಿನಗಳು ದೂರವೇನಿಲ್ಲ. ಈಗಲಾದರೂ ನಿಮ್ಮ ಮಂಗನಾಟ, ಹುಚ್ಚಾಟಗಳನ್ನು ಬಿಟ್ಟು ಆಗು ನೀ ಅನಿಕೇತನ ಅನ್ನುವಂತೆ ನಮ್ಮೆಲ್ಲಾ ಒಳ್ಳೆಯದನ್ನು ಉಳಿಸೋಣ ಬನ್ನಿ ಲೋಹಿಯಾವಾದಿಗಳೇ, ಸಮಾಜವಾದಿಗಳೆ, ಮನಸ್ಸಿನ ವ್ಯಾದಿಯಾಗಿ ಆಸ್ಪತ್ರೆ ಸೇರವುದು ಬೇಡ.
-ಪ್ರೀತಿಯಿಂದ ವೆಂಕಟಾಚಲ.ಹೆಚ್.ವಿ.
ವಿಶೇಷ ಸೂಚನೆ :ಕೆಲ ಪಿಳ್ಳೆ-ಪಿಸುಗ, ಹಲ್ಲಿ, ಓತಿಕ್ಯಾತ, ಹಾವರಾಣಿಗಳೆಲ್ಲಾ ಸಮಾಜವಾದವು ಗೊತ್ತಿಲ್ಲ, ಸಮಾಜವಾದಿಗಳೂ ಗೊತ್ತಿಲ್ಲದ ಇವರು ನಾವೇ ದೊಡ್ಡ ಸಮಾಜವಾದಿಗಳು ಎಂದು ಕೆಲವರನ್ನು ಆಡಿಕೊಳ್ಳುತ್ತಾ, ಗೇಲಿ, ಕಿಂಡಲ್ ಮಾಡುತ್ತಾ ನಗುತ್ತಿರುವುದನ್ನು ನನ್ನಂತಹವನು ಎಷ್ಟು ದಿನ ನೋಡಿಕೊಂಡಿರುವುದು, ಸಾಯುವುದೊಂದೇ ದಿನ, ಚಿಂತನೆಯ ರಣರಂಗದಲ್ಲಿ ಯುದ್ಧ ಸಾರಿದ್ದೇನೆ, ಬಾಲ ಮುದುರಿಕೊಳ್ಳದಿದ್ದರೂ, ಬಾಯಿ ಮುಚ್ಚಿಕೊಂಡಿರದಿದ್ದರೆ ಎಲ್ಲಾ ಬಿಚ್ಚಿ ಒಗೆಯಬೇಕಾಗುತ್ತದೆ.