ತುಮಕೂರು : ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಇಂದೂ ಸಹ ತುಮಕೂರು ಪತ್ರಕರ್ತರ ಮೇಲೆ ಸಿಟ್ಟು-ಸಿಡುಕಿನಿಂದ ಮಾತನಾಡಿದ ಘಟನೆ ನಡೆಯಿತು.
ವಿ.ಸೋಮಣ್ಣ ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದಲೂ ತುಮಕೂರು ಪತ್ರಕರ್ತ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಸಿರನೇ ಸಿಟ್ಟು ಮಾಡಿಕೊಳ್ಳುವುದು, ಸಿಡುಕೋದು, ನಿಮ್ಮದೆಲ್ಲಾ ಗೊತ್ತಿದೆಯಣ್ಣ ನಾನು 40 ವರ್ಷ ರಾಜಕೀಯ ಮಾಡಿರೋನೋ ಎಂಬ ಬೆದರಿಕೆ ಮಾತುಗಳಿಂದ ಪತ್ರಕರ್ತರನ್ನು ತಿವಿಯಲು ವಿ.ಸೋಮಣ್ಣ ಮುಂದಾಗಿಯೇ ಇರುತ್ತಾರೆ.
ಚುನಾವಣೆ ಪ್ರಾರಂಭವಾದಗಿನಿಂದ ತುಮಕೂರು ಪತ್ರಕರ್ತರನ್ನು ಅರ್ಥ ಮಾಡಿಕೊಳ್ಳದ ವಿ.ಸೋಮಣ್ಣ ಬೆಂಗಳೂರಿನ ಗೋವಿದರಾಜನಗರದ ಸ್ಟೈಲ್‍ನಲ್ಲೇ ಗತ್ತು-ಗೈರತ್ತಿನಲ್ಲಿ ಪತ್ರಕರ್ತರನ್ನು ಮಾತನಾಡಿಸುವುದು, ಸಿಟ್ಟು ಕೋಪ ಮಾಡಿಕೊಂಡು ಏನು ಬರೆಕೊಳ್ಳುತ್ತೀರೋ ಬರ್ಕೊಳ್ಳಿ, ರೌಡಿ, ಡಾನ್ ಅಂತ ಬರೆದುಕೊಳ್ಳೀ ಎಂದು ಬೈಟ್ ತೆಗೆದುಕೊಳ್ಳಲು, ಸಂದರ್ಶನಕ್ಕೆ ಹೋದ ಪತ್ರಕರ್ತರಿಗೆ ಎತ್ತರ ಧ್ವನಿಯಲ್ಲಿ ಮುಖ ಗಂಟಿಟ್ಟುಕೊಂಡು ಮಾತನಾಡಿ ಪತ್ರಕರ್ತರಿಗೆ ಇರಿಸು-ಮುರಿಸು ಮಾಡಿ ಕಳಿಸಿದ ಉದಾಹರಣೆ ಚುನಾವಣೆ ಕಾಲದಲ್ಲಿ ಹಲವಾರು ಸಲ ನಡೆದಿದೆ.
ಇಷ್ಟೆಲ್ಲಾ ಆದರೂ ತುಮಕೂರು ಪತ್ರಕರ್ತರು ಸೋಮಣ್ಣನವರ ಬಗ್ಗೆ ಯಾವುದೇ ನೆಗೆಟೀವ್ ಸುದ್ದಿಗಳನ್ನು ಬರೆಯದೆ ಇವರ ಗೆಲುವಿಗೆ ಅಪಾರ ಬೆಂಬಲ ನೀಡಿದ ಪತ್ರಕರ್ತರನ್ನು ಲೋಕಸಭಾ ಚುನಾವಣೆ ಫಲಿತಾಂಶದ ದಿನವೂ ಪತ್ರಕರ್ತರಿಗೆ ಧಮಿಕಿ ಹಾಕಿದ್ದಲ್ಲದೆ, ನೀವೇನು ಅಂತ ಗೊತ್ತಿದೆ ಅಂತ ಸಿಟ್ಟು ಮಾಡಿಕೊಂಡೇ ಮಾತನಾಡಿ ಸೋಮಣ್ಣ ಗೆದ್ದು ಕೇಂದ್ರ ಸಚಿವರಾದರೂ ತುಮಕೂರು ಪತ್ರಕರ್ತರ ಮೇಲೆ ಕೆಂಡ ಕಾರುವುದನ್ನು ಬಿಟ್ಟಿಲ್ಲ.
ಇಂದು ಅವರ ನಿವಾಸ ಮಾರುತಿನಗರದಲ್ಲಿ ಪತ್ರಕರ್ತರಿಗೆ ಸೌಹಾರ್ಧಯುತವಾಗಿ ಬೆಳಗಿನ ಉಪಹಾರ ಏರ್ಪಡಿಸಿದ್ದ ಸಚಿವ ವಿ.ಸೋಮಣ್ಣ ಅವರು, ಪತ್ರಕರ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡದೆ ಜನರ ಮಧ್ಯೆಯೇ ಮಾತನಾಡಲು ಕುಳಿತಾಗ ಹಿರಿಯ ಪತ್ರಕರ್ತರಾದ ಹೆಚ್.ಎನ್.ಮಲ್ಲೇಶ್ ಅವರು ಇದೇನೂ ಕಾರ್ಯಕರ್ತರ ಸಭೇನಾ, ಪತ್ರಕರ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬಾರದಿತ್ತೆ ಎಂದು ಹೇಳಿದ್ದೇ ಪ್ರಮಾದವಾಯಿತ್ತೆನ್ನುವಂತೆ ಸಿಟ್ಟು ಸಿಟ್ಟು ಮಾಡಿಕೊಂಡು ರೀ ನೀವೇನು ಅಂತ ಗೊತ್ತೈತೆ, ನಾನು ಕಾರ್ಪೋರೇಷನ್ ಎಲೆಕ್ಷನಿಂದ ಹಿಡಿದು ಶಾಸಕನಾಗಿ, ಮಂತ್ರಿಯಾಗಿ 40ವರ್ಷ ರಾಜಕೀಯ ಮಾಡಿರೋನು ಅಂತ ಬೆಂಗಳೂರು ಗೋವಿಂದರಾಜನಗರದ ಗತ್ತಿನಲ್ಲಿ ಮಾತನಾಡಿದ್ದು ಇಂದು ಅಲ್ಲಿದ್ದ ಎಲ್ಲಾ ಪತ್ರಕರ್ತರಿಗೆ ಬೇಜಾರು ಮತ್ತು ಇರಿಸು-ಮುರುಸಾಗಿ ಸೋಮಣ್ಣನವರ ಮೇಲೆ ಮುಗಿ ಬಿದ್ದಾಗ, ಸಾಪ್ಟಾದ ಸೋಮಣ್ಣ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದರು.
ಸೋಮಣ್ಣನವರು ತುಮಕೂರಿನ ಪತ್ರಕರ್ತರು ರಾಜಧಾನಿ ಬೆಂಗಳೂರಿನ ಪತ್ರಕರ್ತರಲ್ಲ, ಇಲ್ಲಿನ ಪತ್ರಕರ್ತರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ.ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಈಗಿನ ಕೇಂದ್ರದ ಕ್ಯಾಬಿನೆಟ್ ಬೃಹತ್ ಕೈಗಾರಿಕೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಯವರನ್ನೇ ಬೆವರಿಳಿಸಿ ಕಳಿಸಿದಂತಹ ಪತ್ರಕರ್ತರಿದ್ದಾರೆ.
ಇಲ್ಲಿಯ ಪತ್ರಕರ್ತರ ತಿದಿ ಒತ್ತಿಕೊಂಡು ಹೋಗುವವರಲ್ಲ, ದೇಶದ, ರಾಜ್ಯದ ಆಗು-ಹೋಗುಗಳನ್ನು ವಿಶ್ಲೇಷಿಸಿ ಬರೆಯುವಂತಹವರಾಗಿದ್ದು, ಪ್ರಗತಿ ಪರ ಮತ್ತು ಪ್ರಜ್ಞಾವಂತಿಕೆ ಇರುವಂತಹ ಪತ್ರಕರ್ತರಾಗಿದ್ದಾರೆ.
ಈ ಹಿನ್ನಲೆಯಲ್ಲಿ ತುಮಕೂರಿನ ಪತ್ರಕರ್ತರ ಬಗ್ಗೆ ಸೋಮಣ್ಣನವರು ಇನ್ನು ಮುಂದಾದದರೂ ಹಗುರವಾಗಿ, ಸಿಟ್ಟಾಗಿ ಮಾತನಾಡುವುದನ್ನು ಬಿಟ್ಟು ವಿಶ್ವಾಸ, ಪ್ರೀತಿಯಿಂದ ನಡೆದುಕೊಳ್ಳುವುದು ಒಳ್ಳೆಯದು ಯಾಕೆಂದರೆ ಅವರು ಇನ್ನೂ ಐದು ವರ್ಷ ಈ ಜಿಲ್ಲೆಯ ಸಂಸದರಾಗಿ ಇರುವಂತಹವರು, ನನ್ನ ಬಗಲಲ್ಲಿ ಏನೇನೋ ಇದೆ ಎಂಬ ಭ್ರಮೆಯಿಂದ ವಿ.ಸೋಮಣ್ಣ ಹೊರ ಬಂದು ತುಮಕೂರು ಪತ್ರಕರ್ತರನ್ನು ರಾಜಧಾನಿ ಪ್ರತಕರ್ತರಂತೆ ಕಾಣುವ ಹಳದಿ ಕಣ್ಣಿನ ಪೊರೆ ಕಳಚಿಕೊಳ್ಳಬೇಕೆಂಬುದು ಎಲ್ಲಾ ಪತ್ರಕರ್ತರ ಒಕ್ಕೊರಲ ಧ್ವನಿಯಲ್ಲಿ ಹೇಳುತ್ತಿದ್ದೇವೆ.
ಒಳ್ಳೆಯ ಕೆಲಸವನ್ನು ಒಳ್ಳೆಯದೆಂದು, ಕೆಟ್ಟದನ್ನು ಕೆಟ್ಟದೆಂದು ಪತ್ರಕರ್ತರು ಹೇಳಲೇಬೇಕಾಗುತ್ತದೆ, ಅದನ್ನು ಸರಿ-ತಪ್ಪು ಯಾವುದು ಎಂಬುದನ್ನು ವಿ.ಸೋಮಣ್ಣನವರು ವಿಮರ್ಶೆ ಮಡಿಕೊಳ್ಳಲಿ ಎಂಬುದಷ್ಟೇ ಎಲ್ಲಾರ ಆಶಯ.
ತುಮಕೂರು ಪತ್ರಕರ್ತರ ಮೇಲೆ ಸಿಟ್ಟ್ಯಾಕೋ-ಸಿಡಿಕ್ಯಾಕೋ ಮುಂದಿನ ದಿನಗಳಲ್ಲಿ ಸೋಮಣ್ಣ ಮನಬಿಚ್ಚಿ ಮಾತನಾಡಲಿ. ತುಮಕೂರು ಗೋವಿಂದರಾಜನಗರವಲ್ಲ ಎಂಬುದು ಅರ್ಥ ಮಾಡಿಕೊಳ್ಳಲಿ.
ಏ ಜ್ಯೋತಿ ಜನರನ್ನು ನಿಯಂತ್ರಸಪ್ಪ ಎಂದ ಸೋಮಣ್ಣ.
ಪತ್ರಕರ್ತರಿಗೆ ಏರ್ಪಡಿಸಿದ್ದ ಬೆಳಗಿನ ಉಪಹಾರ ಸ್ಥಳದಲ್ಲಿ ಜನರು ತುಂಬಿ ಹೋಗಿದ್ದನ್ನು ಸ್ಥಳಕ್ಕೆ ಬಂದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಗಮನಿಸಿ ಏ.ಜ್ಯೋತಿ ಈ ಜನರನ್ನೆಲ್ಲಾ ನಿಯಂತ್ರಸಪ್ಪ, ಮೊದಲು ಪತ್ರಕರ್ತರು ತಿಂಡಿ ತಿನ್ನಲಿ ಎಂದು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಹೇಳಿದ್ದು ಅಷ್ಟು ಸರಿ ಕಾಣಿಸಲಿಲ್ಲ. ಸೋಮಣ್ಣನವರಿಗೆ ತಲೆ ತಿರುಗಿದೆ ಎಂದು ಅಲ್ಲಿಯೇ ಇದ್ದವರೊಬ್ಬರು ಗೊಣಗಿದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರು ಒಂದು ಶಾಸನ ಬದ್ಧ ಸ್ಥಾನವನ್ನು ಹೊಂದಿರುವಂತಹವರು, ಅಂತಹ ಶಾಸನ ಬದ್ಧವಾಗಿ ಆಯ್ಕೆಯಾಗಿರುವ ಶಾಸಕರಿಗೆ ವಿ.ಸೋಮಣ್ಣನವರು ಜನ ನಿಯಂತ್ರಿಸಿ ಎಂದು ಹೇಳಿದ್ದು ಎಷ್ಟು ಸರಿ.
ಹಾಗಾದರೆ ಇದುವರೆವಿಗೂ ಅವರು ಶಾಸಕರಾಗಿ, ಮಂತ್ರಿಯಾಗಿ ಏನು ಕಲಿತು ಬಂದರು, ಜನ ನಿಯಂತ್ರಿಸಲು ಅವರ ಭದ್ರತಾ ಸಿಬ್ಬಂದಿ, ಪೊಲೀಸರು, ಅವರ ಎಡ-ಬಲ ಕಾರ್ಯಕರ್ತರು ಇರಲಿಲ್ಲವೇ, ಶಾಸಕರಷ್ಟೇನಾ ಕಂಡಿದ್ದು ಎಂದು ಅಲ್ಲಿರುವ ಶಾಸಕರ ಬೆಂಬಲಿಗರು ಬೇಸರ ವ್ಯಕ್ತಪಡಿಸಿ, ಈ ವ್ಯಕ್ತಿಗೆ ಏನೋ ಆಗಿದೆ ಕಣ್ರಪ್ಪ ಎಂದು ಮಾತನಾಡಿಕೊಳ್ಳುತ್ತಿದ್ದರು.
ಇಷ್ಟೆಲ್ಲ ಆದ ನಂತರ ಅಲ್ಲಿ ಹೋಗಿದ್ದ ಪತ್ರಕರ್ತರು ತಮ್ಮ ಹಾಗೂ ಜಿಲ್ಲೆಯ ಪತ್ರಿಕೋದ್ಯಮದ ಗೌರವ ಉಳಿಸಿಕೊಳ್ಳುವ ಸಲುವಾಗಿ ಆದರೂ ಉಪಹಾರಗೃಹ ಬಹಿಷ್ಕಾರ ಮಾಡಬೇಕಿತ್ತು.