ನವದೆಹಲಿ : ಕೇಂದ್ರ ಜಲಶಕ್ತಿ ಮತ್ತು ರೇಲ್ವೆ ರಾಜ್ಯ ಖಾತೆಯ ಸಚಿವ ವಿ .ಸೋಮಣ್ಣನವರು ಇಂದು ನವದೆಹಲಿಯ ಸಂಸತ್ ಭವನದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಭೇಟಿಯ ಸಂದರ್ಭದಲ್ಲಿ ಕಳೆದ 8 ತಿಂಗಳಲ್ಲಿ ತಾವು ದೇಶವ್ಯಾಪಿ ಹಾಗೂ ರಾಜ್ಯವ್ಯಾಪಿ ಪ್ರವಾಸ ಮಾಡಿದ ಹಾಗು ರೇಲ್ವೆ ಇಲಾಖೆಯಲ್ಲಿನ ಅಭಿವೃದ್ದಿ ಬಗ್ಗೆ ಮಾಹಿತಿಯನ್ನು ಮಾನ್ಯ ಪ್ರಧಾನ ಮಂತ್ರಿಗಳಿಗೆ ವಿವರಿಸಿದ್ದಾರೆ.
ಅರುಣಾಚಲ ಪ್ರದೇಶ, ಆಸ್ಸಾಂ, ಛತೀಸ್ಗಡ್, ಜಾರ್ಖಂಡ್ ಮತ್ತು ಮಹಾತ್ವಾಕಾಂಕ್ಷಿ ಜಿಲ್ಲೆಗಳಿಗೆ ಭೇಟಿ ನೀಡಿದ್ದು ಅಲ್ಲಿನ ಅಭಿವೃದ್ಧಿ ಕಾರ್ಯಗಳು, ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಟಾನ ಮತ್ತು ಜನಸಾಮಾನ್ಯರಲ್ಲಿರುವ ಭಾವನೆಗಳ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಮಾನ್ಯ ಪ್ರಧಾನ ಮಂತ್ರಿಗಳಿಗೆ ತಿಳಿಸಿದ್ದಾರೆ.

ಕಳೆದ 8 ತಿಂಗಳಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಾದ, ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ ಮತ್ತು ಪುದುಚೇರಿ ರಾಜ್ಯಗಳಲ್ಲಿ ತಾವು ಪ್ರವಾಸ ಹಮ್ಮಿಕೊಂಡಿರುವ ಬಗ್ಗೆ ಮತ್ತು ಅಲ್ಲಿನ ರೇಲ್ವೆ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರ ತುಮಕೂರಿನಲ್ಲಿ ರೇಲ್ವೆ, ರಸ್ತೆ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿಯಲ್ಲಿ ಅನುಷ್ಟಾನಗೊಳ್ಳುತ್ತಿರುವ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿ, ತುಮಕೂರಿನ ಇನ್ನಷ್ಟು ಅಭಿವೃದ್ದಿಗೆ ಸಹಕಾರ ನೀಡುವಂತೆ ಮಾನ್ಯ ಪ್ರಧಾನಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣನವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಿಪಡಿಸಿ ತುಮಕೂರಿನ ಸರ್ವಾಂಗೀಣ ಅಭಿವೃದ್ದಿಗೆ ಮಾನ್ಯ ಪ್ರಧಾನಮಂತ್ರಿಗಳು ಬೆಂಬಲ ವ್ಯಕ್ತಪಡಿಸಿದ ಸಂತಸದ ವಿಚಾರವನ್ನು ಕೇಂದ್ರ ಸಚಿವ ವಿ. ಸೋಮಣ್ಣ ಹಂಚಿಕೊಂಡಿದ್ದಾರೆ.