ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುತ್ತಿರುವ ವಿರುದ್ಧ ಸೆ.14ರಂದು ‘ಒಕ್ಕೂಟ ಉಳಿಸಿ ಆಂದೋಲನ’

ತುಮಕೂರು : ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನದ ವಿರುದ್ಧ ‘ಒಕ್ಕೂಟ ಉಳಿಸಿ ಆಂದೋಲ’ನದ ಪ್ರತಿಭಟನಾ ಸಭೆ ಸೆಪ್ಟಂಬರ್ 14ರಂದು ಬೆಂಗಳೂರಿನ ಕೆ.ಆರ್.ಸರ್ಕಲ್ ಬಳಿಯ ಯುವಿಸಿಇ ಅಲುಮ್ನಿ ಹಾಲ್‍ನ ಮುಂಭಾಗದ ಮೈದಾನದಲ್ಲಿ ಹಮ್ಮಿಕೊಂಡಿರುವುದಾಗಿ ಒಕ್ಕೂಟ ಉಳಿಸಿ ಆಂದೋಲನ ಸದಸ್ಯರುಗಳು ತಿಳಿಸಿದರು.

ತುಮಕೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ ಅವರು ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವು ಒಕ್ಕೂಟದ ವ್ಯವಸ್ಥೆಯನ್ನು ಮುಗಿಸುವ ದಿಕ್ಕಿನಲ್ಲಿ ವಿರೋಧ ಪಕ್ಷಗಳೇ ಇರಬಾರದು ಎಂದು ಬಗ್ಗು ಬಡಿಯುವ ಕೆಲಸ ನಿರಂತರವಾಗಿ ನಡೆಸುತ್ತಿದ್ದು, ವಿರೋಧ ಮಾಡುವ ಮುಖ್ಯಮಂತ್ರಿಗಳನ್ನು ಸಹ ಜೈಲಿಗೆ ಕಳಿಸುತ್ತಿದ್ದಾರೆ, ಮಾಧ್ಯಮದವರನ್ನು ಸಹ ಜೈಲಿಗೆ ಹಾಕಿದ್ದಾರೆ ಒಟ್ಟಿನಲ್ಲಿ ಅವರನ್ನು ಪ್ರಶ್ನಿಸುವವರು ಇರಬಾರದು ಎಂಬ ಧೋರಣೆ ಆವರದಾಗಿದೆ, ಇದನ್ನು ಹಿಮ್ಮೆಟ್ಟಿಸಲು ಜನಾಂದೋಲನವಾಗಬೇಕು, ಆ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಲ್ಲೂ ಜನಾಂದೋಲನದ ನಡೆಯಲಿದ್ದು, ಮೊದಲಿಗೆ ಸೆಪ್ಟಂಬರ್ 14ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದರು.

ಹತ್ತು ವರ್ಷ ಆಡಳಿತ ನಡೆಸಿದವರಿಗೆ ಈ ಬಾರಿ ಬಹುಮತ ಬರದಿದ್ದರೂ ಕೆಲವರ ಬೆಂಬಲದಿಂದ ಸರ್ಕಾರ ರಚಿಸಿದಾಗ ಅವರಿಗೆ ಬುದ್ದಿ ಬಂದಿದೆ ಎಂದುಕೊಂಡಿದ್ದೆವು, ಆದರೆ ಬುದ್ದಿ ಬಂದಿಲ್ಲ, ಸಂವಿಧಾನ ಬದಲಾವಣೆ, ಪ್ರಜಾಪ್ರಭುತ್ವ ಆಶಯ ನಿರ್ನಾಮ ಸೇರಿದಂತೆ ಅವರು ಏನು ಅಂದುಕೊಂಡಿದ್ದರೋ ಅದನ್ನೇ ಮಾಡಲು ಹೊರಟಿರುವುದರಿಂದ ಪ್ರತಭಟನಾ ಆಂದೋಲನವನ್ನು ಹಮ್ಮಿಕೊಂಡು ತೀವ್ರವಾಗಿ ಖಂಡಿಸುವ ಕಾಲ ಬಂದಿದೆ ಎಂದು ತಿಳಿಸಿದರು.

ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ ಬಹುತ್ವದ ಭಾರತವನ್ನು ಒಡೆಯುವ ಹುನ್ನಾರಗಳು ನಡೆಯುತ್ತಿದ್ದು, ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬಂದಿದ್ದು, ಸಂವಿಧಾನಾತ್ಮಕ ಹಕ್ಕನ್ನು ಮೊಟಕುಗೊಳಿಸಲು, ಒಕ್ಕೂಟ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಮೂಲಕ ದಾಳಿ ನಡೆಸುತ್ತಿದೆ, ಹಿಂದೆಯೂ ಸಹ ರಾಷ್ಟ್ರಪತಿಗಳನ್ನು, ರಾಜ್ಯಪಾಲರುಗಳನ್ನು ದರ್ಬಳಕೆ ಮಾಡಿಕೊಂಡಿದ್ದರೂ ಅದು ವೈಯಕ್ತಿಕ ರಾಜಕೀಯಕ್ಕಾಗಿ ಮಾಡಿದಂತಹವುದಾಗಿತ್ತು, ರಾಷ್ಟ್ರಪತಿಗಳ ಹುದ್ದೆ ಸಂವಿಧಾನಾತ್ಮಕವಾದ ಹುದ್ದೆ, ಆದರೆ ರಾಜ್ಯಪಾಲರ ಹುದ್ದೆ ನೇಮಕಾತಿ ಹುದ್ದೆ, ಈ ರಾಜ್ಯಪಾಲರ ಹುದ್ದೆಯನ್ನು ಎಲ್ಲಾ ಸರ್ಕಾರಗಳೂ ದುರ್ಬಳಕೆ ಮಾಡಿಕೊಂಡಿದ್ದಾವೆ ಎಂದು ಹೇಳಲಾಗುತ್ತಿದ್ದೆ, ಹಿಂದಿನ ದುರ್ಬಳಕೆ ಕೇವಲ ವ್ಯಕ್ತಿಗತ ದ್ವೇಷ ರಾಜಕಾರಣಕ್ಕಾಗಿ ಪದಚ್ಯುತಿಗೊಳಿಸಲು ಬಳಸಿಕೊಂಡಿದ್ದರೆ, ಈಗ ಇಡೀ ಪ್ರಜಾಪ್ರಭುತ್ವವನ್ನೇ ಅಸ್ಥಿರಗೊಳಿಸುವ, ಸಂವಿಧಾನವನ್ನು ದುರ್ಬಲಗೊಳಿಸಲು ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಇದು ಇಡೀ ಬಹುತ್ವವನೇ ನಾಶ ಮಾಡುವ ಹುನ್ನಾರವಾಗಿದೆ, ಅವರ ದ್ವೇಷ ರಾಜಕಾರಣ ಅಜೆಂಡಕ್ಕೆ ಬಗ್ಗದೆ ಇರುವ ವಿರೋಧ ಪಕ್ಷಗಳ ರಾಜಕೀಯವನ್ನು ಬಗ್ಗು ಬಡಿಯುವುದಕ್ಕಾಗಿ ‘ಇಡಿ’, ಐಟಿಯಂತ ಸಂಸ್ಥೆಗಳನ್ನು ಬಳಸಲಾಗುತ್ತಾ ವಿರೋಧ ಪಕ್ಷಗಳನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳುತ್ತಾರಲ್ಲ ಇದು ನಮಗೆ ಹೆಚ್ಚು ಆತಂಕಕಾರಿನ್ನುಂಟು ಮಾಡಿದೆ. ಈ ಮೂಲಭೂತವಾದಿ ಗುಣ ನಮ್ಮ ದೇಶದ ಬಹುತ್ವ ಭಾರತದ, ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಹೊಂದಿಕೊಳ್ಳುವುದಿಲ್ಲ. ಈ ಹಿನ್ನೆಯಲ್ಲಿ ಒಕ್ಕೂಟದ ವ್ಯವಸ್ಥೆಯನ್ನು ಉಳಿಸಿ ಎಂಬ ಆಂದೋನವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಪ್ರಜಾಸತ್ತಾತ್ಮಕವಾಗಿ ಬಹುಮತದೊಂದಿಗೆ ಆಯ್ಕೆಯಾದ ಸರ್ಕಾರಕ್ಕೆ ನೀಡುತ್ತಿರುವ ಕಿರುಕುಳ ಈಗಲೇ ನಿಲ್ಲುತ್ತದೆ ಎಂದು ಹೇಳಲಾಗದು, ನಿತ್ಯ ನಿತ್ಯ ಸುಳ್ಳುಗಳನ್ನು ಸತ್ಯವೆಂಬಂತೆ ನಂಬಿಸುವ ರೀತಿಯಲ್ಲಿ ಬಿಂಬಿಸಲಾಗುತ್ತಾ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವುದು ಬಹುತ್ವಕ್ಕೆ ಧಕ್ಕೆಯುಂಟು ಮಾಡುವ ಹುನ್ನಾರ ಇದಾಗಿದೆ ಎಂದರು.

ಲೇಖಕ ನಟರಾಜು ಬೂದಾಳ್ ಮಾತನಾಡಿ ಅನ್ನ, ಆಹಾರದ ಮೇಲಿನ ಹೆಸರಲ್ಲಿ ದೇಶದ ಶೇಕಡ 70ರಷ್ಟಿರುವ ಶೂದ್ರರ ಮೇಲೆ ದೊಡ್ಡ ಸಾಂಸ್ಕøತಿಕ ದುರಾಡಳಿತ ಪ್ರಾರಂಭವಾಗಿದೆ, ಎನ್‍ಇಪಿ ಮೂಲಕ ಶೂದ್ರರ ಶಿಕ್ಷಣವನ್ನು ಹಾಳು ಮಾಡಲು ಹೊರಟ್ಟಿದ್ದಾರೆ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಭಾಷಿಕವಾಗಿ ನಿರಾಕರಿಸುವ ಶಿಕ್ಷಣವನ್ನು ಹೇರುವ ಮೂಲಕ ನಿರಾಕರಣೆಗೆ ಒಳಪಡಿಸುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.

ಇದು ಸಮೂಹಕ್ಕಾಗುತ್ತಿರುವ ಅನ್ಯಾಯವಾಗಿದ್ದು, ಸಮೂಹದ ಬಳಿಗೆ ಹೋಗಿ ತಿಳಿಸುವ ಉದ್ದೇಶ ಇದಾಗಿದ್ದು, ಏಕ ಸ್ವಾಮಕ್ಕೆ ಒಳಗಾದರೆ ಎಲ್ಲಾವನ್ನೂ ಕಳೆದುಕೊಂಡು ಸರ್ವಾಧಿಕಾರವನ್ನು ಆಹ್ವಾನಿಸಿದಂತೆ ಈ ಹಿನ್ನಲೆಯಲ್ಲಿ ಇಡೀ ಸಮೂಹವನ್ನು ಎಚ್ಚರಿಸಲು ಈ ಆಂದೋಲವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸೆಪ್ಟಂಬರ್ 14ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಗಳ ಅಸ್ಮಿತೆ, ಹಕ್ಕು ಮತ್ತು ಪಾಲಿನ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನದ ಒಕ್ಕೂಟ ಉಳಿಸಿ ಆಂದೋಲನದ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ವಹಿಸಲಿದ್ದು, ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಸೇರಿದಂತೆ ಸಾಹಿತಿಗಳು, ಪ್ರಗತಿಪರರು, ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಡಿ.ಟಿ.ವೆಂಕಟೇಶ್, ವೈ.ಕೆ.ಬಾಲಕೃಷ್ಣಪ್ಪ, ನರಸೀಯಪ್ಪ, ಎನ್.ನಾಗಪ್ಪ, ಸಿ.ಕೆ.ಉಮಾಪತಿ, ನಟರಾಜ್ ಹೊನ್ನವಳ್ಳಿ, ಬಿ.ಹೆಚ್,ಗಂಗಾಧರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *