ತುಮಕೂರು: ಕಾಲೇಜಿನ ನಿಗಧಿತ ದಾಖಲಾತಿಗಿಂತಲೂ ಹೆಚ್ಚಿನ ಪ್ರವೇಶ ಪಡೆದಿದ್ದ ಐವತ್ತು ಮಕ್ಕಳನ್ನು ಏಕಾಎಕಿ ಬೇರೆ ಕಾಲೇಜಿಗೆ ಸೇರಿಸುವಂತೆ ಸೂಚಿಸಿರುವ ಸರ್ವೋದಯ ಶಿಕ್ಷಣ ಸಂಸ್ಥೆಯ ಅವಾಂತರ ಕುರಿತಂತೆ ಪರಿಹಾರೋಪಾಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಪಿಯು ಬೋರ್ಡ್ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಮುರುಳೀಧರ ಹಾಲಪ್ಪ ಅವರು, ಸರ್ವೋದಯ ಶಿಕ್ಷಣ ಸಂಸ್ಥೆಯವರು ಐವತ್ತು ಮಕ್ಕಳನ್ನು ಪಿಯು ಬೋಡ್ರ್ನ ನಿರ್ದೇಶಕರ ಸೂಚನೆಯಂತೆ ಹತ್ತಿರದ ಸರಕಾರಿ ಪಿಯು ಕಾಲೇಜಿಗೆ ಸೇರಿಸಲು ತೀರ್ಮಾನಿಸಿದ್ದಾರೆ. ಆದರೆ ಕೆಲ ಪೋಷಕರು ಒಪ್ಪುತ್ತಿಲ್ಲ. ಇರುವ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂತ್ರಿಗಳಾದ ಮಧು ಬಂಗಾರಪ್ಪ ಹಾಗೂ ಪಿಯು ಬೋರ್ಡ್ ಆಯುಕ್ತರಾದ ಸಿಂಧು ರೂಪೇಶ್ ಭಾ.ಆ.ಸೇ. ಅವರೊಂದಿಗೆ ಸಹ ಮಾತನಾಡಿದ್ದು, ಅವರು ಸಹ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಕಾರಿ ಕಾಲೇಜಿಗೆ ಪ್ರವೇಶ ಪಡೆಯುವಂತೆ ಸೂಚನೆ ನೀಡಿದ್ದಾರೆ ಎಂದರು.
ಸರ್ವೋದಯ ಶಿಕ್ಷಣ ಸಂಸ್ಥೆಯವರು ಮತ್ತೊಮ್ಮೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾನವೀಯ ಹಿನ್ನೆಲೆಯಲ್ಲಿ ಇದೊಂದು ಬಾರಿ ಅನುಮತಿ ನೀಡುವಂತೆ ಕೋರಿದ್ದಾರೆ. ಇಂದು ಸಂಜೆಯೊಳಗೆ ಪಿಯು ಬೋರ್ಡ್ ತನ್ನ ನಿರ್ಧಾರ ಪ್ರಕಟಿಸಲಿದೆ. ಒಂದು ವೇಳೆ ಹೆಚ್ಚುವರಿ ವಿದ್ಯಾರ್ಥಿಗಳನ್ನು ಸರ್ವೋದಯ ಕಾಲೇಜಿನಲ್ಲಿಯೇ ಮುಂದುವರೆಸಲು ಅವಕಾಶ ದೊರೆಯದಿದ್ದರೆ, ಆ ಮಕ್ಕಳನ್ನು ಸರಕಾರಿ ಕಾಲೇಜಿಗೆ ಸೇರಿಸಿಕೊಳ್ಳಲು ಇಲಾಖೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮಕ್ಕಳ ಭವಿಷ್ಯ ಹಾಳಾಗದಂತೆ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳುತ್ತೇವೆ. ಪೋಷಕರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡಿದ್ದೇನೆ.ಜುಲೈ 20ಕ್ಕೆ ದ್ವಿತೀಯ ಪಿಯು ಪ್ರವೇಶಕ್ಕೆ ಕೊನೆಯ ದಿನವಾಗಿದೆ. ಮಕ್ಕಳು,ಪೋಷಕರು ದೃತಿಗೆದಂತೆ ಭರವಸೆ ನೀಡಿದ್ದೇನೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಪಿಯು ವಿಭಾಗದ ಪ್ರಭಾರ ಡಿಡಿಪಿಐ ತ್ರಿವೇಣಿ,ಬಿ.ಪಿ, ಅಧೀಕ್ಷಕರಾದ ಸಂತೋಷ, ಕೇಸ್ ವರ್ಕರ್ ರಾಮಣ್ಣ, ಶ್ರೀಕೃಷ್ಣ ವಿದ್ಯಾಸಂಸ್ಥೆಯ ಮರಿಚನ್ನಮ್ಮ,ರೇವಣ್ಣಸಿದ್ದಯ್ಯ, ಭಾಗ್ಯಮ್ಮ, ಜಗದೀಶ್, ಎನ್.ಎಸ್.ಯು.ಐನ ರಾಜ್ಯ ಕಾರ್ಯದರ್ಶಿ ಜೈನ್, ಮುಖಂಡರಾದ ದಸ್ತಗೀರ್, ಖೈಫ್, ಮುಜಾಯಿದ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.