ಸ್ವದೇಶಿ ಉತ್ಪನ್ನ ಬಳಸಿ ಪರದೇಶಿ ಪದಾರ್ಥ ವರ್ಜಿಸಿ- ಜ್ಯೋತಿಗಣೇಶ್ ಮನವಿ

ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಚಿಂತನೆ, ಅವರ ನೇತೃತ್ವದ ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಿಂದ ಇಂದು ಭಾರತ ಸರ್ವಾಂಗೀಣವಾಗಿ ಬೆಳವಣಿಗೆ ಆಗುತ್ತಿದೆ. ದೇಶವನ್ನು ಅಭದ್ರಗೊಳಿಸಲು ವಿದೇಶಿ ಶಕ್ತಿಗಳು ಎಷ್ಟೇ ಸಂಚು ರೂಪಿಸಿದರೂ ನಾವು ಸುಭದ್ರವಾಗಿರಲು ಮೋದಿ ಸರ್ಕಾರದ ದಿಟ್ಟ ಆಡಳಿತವೇ ಕಾರಣ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಬಿಜೆಪಿಯ ಸೇವಾ ಪಾಕ್ಷಿಕ್ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೋದಿ ವಿಕಾಸ್ ಮ್ಯಾರಥಾನ್‍ಗೆ ಚಾಲನೆ ನೀಡಿ, ವಿಶ್ವವಿದ್ಯಾಲಯ ಬಳಿಯಿಂದ ನಗಪಾಲಿಕೆ ಆವರಣದವರೆಗೆ ನಡೆದ ಜನಜಾಗೃತಿ ನಡಿಗೆ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಈ ತಿಂಗಳ 17ರಿಂದ ಗಾಂಧಿ ಜಯಂತಿಯ ಅಕ್ಟೋಬರ್ 2ರವರೆಗೆ ಬಿಜೆಪಿಯಿಂದ ಸೇವಾ ಪಾಕ್ಷಿಕ್ ಹೆಸರಿನಲ್ಲಿ ದೇಶಾದ್ಯಂತ ಬಿಜೆಪಿಯಿಂದ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಬಿಜೆಪಿಯಿಂದ ಈಗಾಗಲೇ ಎಲ್ಲೆಡೆ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ದೇವಸ್ಥಾನ, ಉದ್ಯಾನವನಗಳ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಮತ್ತಷ್ಟು ಸೇವಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಲ್ಲಿ ಸೇವಾ ಪ್ರೇರಣೆ ಮೂಡಿಸುವ ಉದ್ದೇಶವಾಗಿದೆ ಇದಾಗಿದೆ. ಪ್ರಧಾನಿ ಮೋದಿಯವರ ಚಿಂತನೆಗಳು, ಕಾರ್ಯಕ್ರಮಗಳಿಂದಾಗಿ ಇಂದು ಭಾರತ ವೇಗವಾಗಿ ಬೆಳವಣಿಗೆಯಾಗುತ್ತಿದ್ದು 2047ರ ವೇಳೆಗೆ ಭಾರತ ವಿಶ್ವಗುರು ಆಗುವತ್ತ ಸಾಗುತ್ತಿದೆ. ದೇಶದ ಆರ್ಥಿಕತೆ ವಿಶ್ವದಲ್ಲಿ 3-4ಕ್ಕೆ ಸ್ಥಾನಕ್ಕೆ ಬಂದಿದೆ. 11 ವರ್ಷಗಳ ಮೋದಿ ಸರ್ಕಾರದ ಯೋಜನೆಗಳು ಹಾಗೂ ಉತ್ತಮ ಆಡಳಿತ ದೇಶವನ್ನು ಸುಭದ್ರವಾಗಿಸಿದೆ. ದೇಶದ ಮತ್ತಷ್ಟು ಪ್ರಗತಿಗಾಗಿ ಎಲ್ಲರೂ ಮೋದಿ ಸರ್ಕಾರಕ್ಕೆ ಬಲ ತುಂಬಬೇಕು ಎಂದು ಜ್ಯೋತಿಗಣೇಶ್ ಹೇಳಿದರು.

ಮೆರಾಥಾನ್‍ನಲ್ಲಿ ಭಾಗವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಪ್ರಧಾನಿ ಮೋದಿಯವರ ಜನ್ಮದಿಂದ ಗಾಂಧಿ ಜಯಂತಿವರೆಗೆ ಜಿಲ್ಲೆಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ದಿನ ಸ್ವದೇಶ ಪದಾರ್ಥಗಳನ್ನೇ ಬಳಸಿ ಸ್ಥಳೀಯ ಉತ್ಪಾದನೆಗಳಿಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವದೇಶಿ ಉತ್ಪನ್ನಗಳನ್ನು ಹೆಚ್ಚೆಚ್ಚು ಬಳಿಸಿ, ವಿದೇಶಿ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ದೇಶೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *