ಚುನಾವಣೆ ಗೆಲ್ಲುವ ಅಚಲ ವಿಶ್ವಾಸವಿದೆ – ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ

ತುಮಕೂರು: ನನ್ನ 45 ವರ್ಷಗಳ ಅನುಭವವನ್ನು ತುಮಕೂರು ಕ್ಷೇತ್ರಕ್ಕೆ ಧಾರೆ ಎರೆಯಲು ಬಿಜೆಪಿ, ಜೆಡಿಎಸ್ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ನೀರಾವರಿ, ಕುಡಿಯುವ ನೀರಿನ ಸೌಲಭ್ಯ, ಕೃಷಿ, ಶಿಕ್ಷಣ, ಮೂಲಸೌಕರ್ಯ, ಹೆದ್ದಾರಿ, ರೈಲ್ವೆ ಯೋಜನೆಗಳು, ಕೈಗಾರಿಕೆ, ಪ್ರವಾಸೋದ್ಯಮ ಮತ್ತಿತರ ಅಗತ್ಯ ಸೇವಾ, ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ಕ್ಷೇತ್ರದಾದ್ಯಂತ ಸುತ್ತಾಡಿ ಸಾವಿರಾರು ಜನರನ್ನು ಖದ್ದು ಭೇಟಿ ಮಾಡಿ ಮತಯಾಚಿಸಿದ್ದೇನೆ, ಅವರ ಸಮಸ್ಯೆ, ಬೇಡಿಕೆಗಳನ್ನು ಆಲಿಸಿದ್ದೇನೆ, ಎಲ್ಲಾ ಕಡೆ ಜನ ತುಂಬಾ ಪ್ರೀತಿ, ಅಭಿಮಾನ ತೋರಿಸಿದ್ದಾರೆ. ಜನರು ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬಾಳಲು ಅಗತ್ಯವಿರುವ ಕಾರ್ಯಕ್ರಮಗಳನ್ನು ನೀಡುತ್ತೇನೆ. ಈ ಬಾರಿ ತಮಗೆ ಗೆಲ್ಲುವ ಅಚಲ ವಿಶ್ವಾಸವಿದೆ. ಮೋದಿಯವರು ಪ್ರಧಾನಿಯಾಗುವಲ್ಲಿ ತುಮಕೂರು ಕ್ಷೇತ್ರದ ಕೊಡುಗೆಯೂ ಸೇರುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರು, ಗೃಹ ಸಚಿವ ಅಮಿತ್ ಶಾ ಅವರ ಸಂಪರ್ಕದೊಂದಿಗೆ ಕೆಲಸ ಮಾಡುತ್ತೇನೆ, ಕೇಂದ್ರದ ಯೋಜನೆಗಳನ್ನು ತುಮಕೂರಿಗೆ ತರುವ ಪ್ರಯತ್ನ ಮಾಡುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡೂ ಸರ್ಕಾರಗಳು ಪರಸ್ಪರ ಸಮನ್ವಯತೆಯಿಂದ ಸಾಗಿದಾಗಿ ಜನರಿಗೆ ಸೌಕರ್ಯ ಒದಗಿಸಬಹುದು, ಕೇಂದ್ರ ಸರ್ಕಾರದಿಂದ ಅನುದಾನ ತರಲು ಕಾನೂನಿನಲ್ಲಿ ಅದರದ್ದೇ ಆದ ಅವಕಾಶವಿದ್ದು ಅದನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತೇನೆ ಎಂದರು.

ಈ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ತುಂಬಾ ಬೆಂಬಲ ನಿಡಿದ್ದಾರೆ, ಇವರ ಸಹಾಯವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ ಸೋಮಣ್ಣ, ಚುನಾವಣೆಯಲ್ಲಿ ಆಯ್ಕೆಯಾದ ನಂತರ ಕಾಯಾ ವಾಚಾ ಮನಸಾ ಕೆಲಸ ಮಾಡಿ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದರು.

ಲೋಕಸಭಾ ಕ್ಷೇತ್ರದ ಉಸ್ತುವಾರಿಯೂ ಆದ ಮಾಜಿ ಸಚಿವ ಗೋಪಾಲಯ್ಯ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಹೆಚ್.ನಿಂಗಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮುಖಂಡರಾದ ಎಸ್.ಶಿವಪ್ರಸಾದ್, ಜೆಡಿಎಸ್ ನಗರ ಅಧ್ಯಕ್ಷ ವಿಜಯ್‍ಗೌಡ, ಜಿಲ್ಲಾ ಜೆಡಿಎಸ್ ರೈತ ಘಟಕ ಅಧ್ಯಕ್ಷ ರಂಗನಾಥ್, ಬಿಜೆಪಿ ಮಾಧ್ಯಮ ಪ್ರಮುಖ್ ಜೆ.ಜಗದೀಶ್, ಜೆಡಿಎಸ್ ವಕ್ತಾರ ಮಧು ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *