ತುಮಕೂರು: ಕೇಂದ್ರ ವರಿಷ್ಠರು ಒಪ್ಪಿಗೆ ಸೂಚಿಸಿದರೆ ನಮ್ಮದೇನು ವಿ.ಸೋಮಣ್ಣನವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಮ್ಮ ಅಭ್ಯತರವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಅವರೊಬ್ಬರು ಹಿರಿಯರಿದ್ದಾರೆ. ಪಕ್ಷ ಒಟ್ಟಾಗಿ ಕೂತು ಚರ್ಚೆ ಮಾಡಲಿದೆ. ರಾಜ್ಯದ 28 ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿಯೇ ವರಿಷ್ಠರು ತೀರ್ಮಾನ ಮಾಡುತ್ತಾರೆ. ತುಮಕೂರು ಜಿಲ್ಲೆಗೆ ಸೋಮಣ್ಣ ಸ್ಪರ್ಧಿಸುವ ವಿಚಾರವೂ ಸಹ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.
ನಗರದ ಶ್ರೀ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶಕ್ತಿ ವಂದನಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದಾಗ ಪತ್ರಕರ್ತರರೊಂದಿಗೆ ಮಾತನಾಡಿದರು.
ನಂತರ ಶಕ್ತಿ ವಂದನಾ ಅಭಿಯಾನವನ್ನು ಶ್ರೀರಾಮ ಭಾವಚಿತ್ರಕ್ಕೆ ಹಾಗೂ ಬಿಜೆಪಿಯ ಹಿರಿಯ ಮುಖಂಡರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದ ಅವರು ಕಳೆದ ಒಂದು ವಾರದಿಂದ ರಾಯಚೂರ, ಯಾದಗಿರಿ, ಮಂಗಳೂರು, ಚಿಕ್ಕಮಗಳೂರು, ಹಾವೇರಿ, ಹುಬ್ಬಳ್ಳಿ ಪ್ರವಾಸ ಮುಗಿಸಿಕೊಂಡು ತುಮಕೂರಿಗೆ ಆಗಮಿಸಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರವನ್ನು ಗೆಲ್ಲುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ನರೇಂದ್ರ ಮೋದಿ ಅವರು 2047ನೇ ಇಸವಿಗೆ ವಿಕಸಿತ ಭಾರತವಾಗಿ ದೇಶ ಹೊರ ಹೊಮ್ಮುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮಹಿಳೆಯರ ಸಹಕಾರ ಸಿಗಬೇಕು. ಮಹಿಳೆಯರಿಗೆ ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ರಾಷ್ಟ್ರದ ಅತ್ಯುತ್ತಮ ಸ್ಥಾನಮಾನವಾಗ ರಾಷ್ಟ್ರಪತಿ ಹುದ್ದೆಗೆ ದಲಿತ ಮಹಿಳೆ ದ್ರೌಪತಿ ಮುರ್ಮು ಅವರನ್ನು ಬಿಜೆಪಿ ಸರ್ಕಾರ ಕೂರಿಸಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಲೋಕಸಭೆ, ವಿಧಾನಸಭೆಯಲ್ಲಿ ಮೀಸಲಾತಿ ಕಲ್ಪಿಸಲು ಚಿಂತನೆ ನಡೆದಿದೆ. ಈ ಸಂಬಂಧ ವಿಶೇಷ ಅಧಿವೇಶನ ಕರೆದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
2047 ರ ವೇಳೆಗೆ ಭಾರತವನ್ನು ಬಲಿಷ್ಟ ರಾಷ್ಟ್ರವಾಗಿ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ ಎಂದ ಅವರು, ದೇಶದಲ್ಲಿ ನಾಲ್ಕು ಜಾತಿಗಳಿವೆ. ಒಂದು ರೈತ, ಬಡವ, ಮಹಿಳೆ ಹಾಗೂ ಯುವ ಜನಾಂಗ. ಇವರೆಲ್ಲರ ಸಹಕಾರದಿಂದ ಈ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಬಿಜೆಪಿ ಅಂದರೆ ಅಲ್ಪಸಂಖ್ಯಾತ ವಿರೋಧಿ ಎಂಬುದಾಗಿ ವಿರೋಧ ಪಕ್ಷದವರು ಬಿಂಬಿಸುತ್ತಿದ್ದಾರೆ. ಆದರೆ, ತ್ರಿವಳಿ ತಲಾಕ್ ಒಡೆದು ಹಾಕುವ ಮೂಲಕ ಅಲ್ಪಸಂಖ್ಯಾತರಿಗೂ ನ್ಯಾಯ ಒದಗಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದರು.
ಲೋಕಸಭಾ ಚುನಾವಣಾ ಯಾವಾಗ ಬೇಕಾದರೂ ಬರಬಹುದು. ಹಾಗಾಗಿ ಪ್ರಧಾನಿ ಮೋದಿ ಅವರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು ಎಂದು ಅವರು ಕರೆ ನೀಡಿದರು.
ಫೆ. 22 ಅಥವಾ 23 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಕ್ತಿವಂದನಾ ಸಂವಾದ ಮಾಡಲಿದ್ದಾರೆ. ಪ್ರತಿ ಮಂಡಲದಿಂದ 500 ಮಹಿಳೆಯರು ತಪ್ಪದೆ ಭಾಗಿಯಾಗಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆ ಬರೀ ಸ್ಕ್ಯಾಮ್ ಅಷ್ಟೆ. 200 ಯೂನಿಟ್ ಉಚಿತ ವಿದ್ಯುತ್ ಭ್ರಮೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ ಅವರು, ರಾಜ್ಯದಲ್ಲಿ ಭೀಕರ ಬರ ಬಂದಿದೆ. ಬೆಳೆದ ಬೆಳೆಗೆ ಸರಿಯಾದ ನೀರು ಬೇಕಾಗುತ್ತದೆ. ಸರ್ಕಾರ ವಿದ್ಯುತ್ ಕೊಟ್ಟರೆ ಸಂಪೂರ್ಣವಾಗಿ ಬೆಳೆ ಕೈ ಸೇರಲಿದೆ. ಆದರೆ ವಿದ್ಯುತ್ ಕೊಡದ ಪರಿಣಾಮ ಬೆಳೆ ಕೈಸೇರಲಿಲ್ಲ. ಇದರಿಂದ ರಾಜ್ಯದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಟೀಕಿಸಿದರು.
ಉಚಿತ ಬಸ್ ಪ್ರಯಾಣ ಯೋಜನೆ ಉತ್ತಮ ಕೆಲಸ. ಆದರೆ ಮತ್ತೊಂದು ಕಡೆ ಗ್ರಾಮೀಣ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲಿಕ್ಕೆ ಆಗುತ್ತಿಲ್ಲ. ಕಾರಣ ಶೇ. 50 ರಷ್ಟು ಬಸ್ ಕಡಿತ ಮಾಡಿದ್ದಾರೆ. ಇದು ಇವರ ಗ್ಯಾರಂಟಿ ಯೋಜನೆ. ಇನ್ನೂ ಗೃಹಲಕ್ಷ್ಮಿ ಯೋಜನೆ ಸಮಪರ್ಕವಾಗಿ ತಲುಪುತ್ತಿಲ್ಲ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ, ಅನುಮಾನವೇ ಬೇಡ. ರಾಜ್ಯ ಸರ್ಕಾರ ಗ್ಯಾರಂಟಿ ಸ್ಕ್ಯಾಮ್ ಇದು. ರಾಜ್ಯ ಸರ್ಕಾರದ ಗ್ಯಾರಂಟಿ 2 ಲಕ್ಷ ಫಲಾನುಭವಿಗಳಿಗೂ ತಲುಪಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗಂಡಸಿ ಶಿವರಾಮ್ ಅವರು ಶೇ. 50 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಅವರದ್ದೇ ಸರ್ಕಾರ ಮೇಲೆ ಆರೋಪ ಮಾಡಿದ್ದಾರೆ. ಬಿಜೆಪಿ ಮೇಲೆ ಮಾಡಿದ್ದ ಆರೋಪ ದಾಖಲೆ ರಹಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಶಶಿಕಲಾ ಜೊಲ್ಲೆ, ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಡಿ. ಕೃಷ್ಣಕುಮಾರ್, ಹೆಚ್.ಡಿ. ರಾಜೇಶ್‍ಗೌಡ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ, ರಾಜ್ಯ ಸಹ ಸಂಚಾಲಕರಾದ ಗೀತಾ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪ, ರಾಜ್ಯ ಉಪಾಧ್ಯಕ್ಷರಾದ ಶರಣಮ್ಮ, ಅಂಬಿಕಾ ಹುಲಿನಾಯ್ಕರ್, ನವೀನ್, ವಿನಯ್ ಬಿದರೆ ಮತ್ತಿತರರು ಭಾಗವಹಿಸಿದ್ದರು.