ತುಮಕೂರು : ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿನ್ನಿಪೇಟೆ ವಿ.ಸೋಮಣ್ಣ ಫಲಿತಾಂಶಕ್ಕೂ ಮುನ್ನವೇ ತುಮಕೂರನ್ನು ಖಾಲಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಿರುಗಾಳಿಯಂತೆ ಟಿಕೆಟ್ ಘೋಷಣೆಯಾದ ದಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ನಾನು ತುಮಕೂರು ಮಗ, ಸಿದ್ಧಗಂಗಾ ಮಠದ ಭಕ್ತ, ತುಮಕೂರನ್ನು ವಾರಣಾಶಿ ಮಾಡುತ್ತೇನೆ ಎಂದು ಚುನಾವಣೆಯ ದಂಡೆಯಾತ್ರೆ ಹೊರಟ ವಿ.ಸೋಮಣ್ಣ ತುಮಕೂರಿನಲ್ಲೇ ಮನೆ ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿಗಳಲ್ಲಿ ಹೇಳುತ್ತಿದ್ದರು.
ಅದೇ ರೀತಿ ವಿ.ಸೋಮಣ್ಣನವರ ಮಾರುತಿನಗರದ 40 ಅಡಿ ರಸ್ತೆಯಲ್ಲಿ ಮನೆ ಮಾಡಿರುವುದನ್ನು ತೋರಿಸಲು ಮನೆಯ ಬಳಿ ಪತ್ರಿಕಾಗೋಷ್ಠಿ ಕರೆದು ನಾನು ತುಮಕೂರಿನಲ್ಲಿ ಮನೆ ಮಾಡಿದ್ದೇನೆ, ಬೆಂಗಳೂರಿಗೆ ಓಡಿ ಹೋಗುವುದಿಲ್ಲ ಎಂದು ಖಚಿತ ಧ್ವನಿಯಲ್ಲಿ ಹೇಳಿದರು.
ನಾನು ಹೊರಗಿನವನ್ನಲ್ಲ, ಈ ಜಿಲ್ಲೆಯ ಸಚಿವರುಗಳೇ ಹೊರಗಿನವರು, ನಾನು ಮಠದ ಭಕ್ತನಾಗಿ ಈ ಜಿಲ್ಲೆಯವನಾಗಿದ್ದೇನೆ, ನಾನೇಗೆ ಹೊರಗಿನವನಾಗುತ್ತೇನೆ, ಮನೆ ಮಾಡಿದ್ದೇನೆ ದಿನದ 24 ಗಂಟೆಯೂ ಜನಸೇವೇಯೇ ಜನಾರ್ಧನ ಸೇವೆ ಎಂದು ಇಲ್ಲಿಯೇ ಉಳಿಯುತ್ತೇನೆ ಎಂದು ಹೇಳಿದ ಸೋಮಣ್ಣ ಈಗ ತುಮಕೂರಿನಲ್ಲಿ ಇಲ್ಲದೆ ಮಂಗಮಾಯವಾಗಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾರುತಿ ನಗರದಲ್ಲಿ ಮಾಡಿದ್ದ ಮನೆಯ ಬಾಗಿಲು ಮತ್ತು ಗೇಟಿಗೆ ಚುನಾವಣೆ ನಡೆದ ಮಾರನೆ ದಿನದಿಂದ ಬೀಗ ಜಡಿಯಲಾಗಿದೆ.
ಕನಿಷ್ಟ ಪಕ್ಷ ವಿ.ಸೋಮಣ್ಣ ಇರದಿದ್ದರೂ ಅವರ ಕಡೆಯವರಾದರೂ ಇದ್ದು ಬರುವ ಜನತೆಯ ಅಹವಾಲು ಮತ್ತು ಮನೆ ಖಾಲಿ ಮಾಡಿಲ್ಲ ಎಂಬುದನ್ನಾದರೂ ಜನರ ಬಳಿ ತೋರಿಸಿಕೊಳ್ಳಬೇಕಿತ್ತು.
ಆದರೆ ಈಗ ಮನೆಗೆ ಬೀಗ ಹಾಕಿರುವುದರಿಂದ ಲೋಕಸಭೆಯ ಫಲಿತಾಂಶ ಹೊರಬೀಳುವ ಮುನ್ನವೇ ವಿ.ಸೋಮಣ್ಣ ತುಮಕೂರು ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ದಿನದ 24 ಗಂಟೆಯೂ ಹೊರಾಂಡದ ವಿದ್ಯುತ್ ದ್ವೀಪ ಉರಿಯುತ್ತಲೇ ಇರುತ್ತದೆ, ಬಾಗಿಲು ಹಾಕಿದ ದಿನದಿಂದಲೂ ವಿದ್ಯುತ್ ದ್ವೀಪ ಆರಿಸಿಲ್ಲ.
ಇದರ ಅರ್ಥ ಏನು ಎಂದು ವಿ.ಸೋಮಣ್ಣನವರೇ ಹೇಳು ಬೇಕು, ತುಮಕೂರಿನಲ್ಲಿ ವಾಸವಿರಲೇ ಮನೆ ಮಾಡಿದ್ದೇನೆ ಎಂದು ಹೇಳಿದ ಅವರು, ಬಾಗಿಲು ಮತ್ತು ಗೇಟಿಗೆ ಬೀಗ ಜಡಿದು ಬೆಂಗಳೂರಿಗೆ ಹೋಗಿ ಕುಳಿತಿರುವುದರ ಮರ್ಮವೇನು ಎಂಬುದನ್ನು ತುಮಕೂರಿನ ಬಿಜೆಪಿ ನಾಯಕರು, ವರಿಷ್ಠರು, ವಿ.ಸೋಮಣ್ಣನವರ ಬೆಂಬಲಿಗರು ಹೇಳಬೇಕಿದೆ.
ಇನ್ನೂ ಫಲಿತಾಂಶ ಹೊರ ಬೀಳಲು 16 ದಿನ ಬಾಕಿಯಿದ್ದು ವಿ.ಸೋಮಣ್ಣನವರು ಫಲಿತಾಂಶಕ್ಕೆ ಎರಡು ಮೂರು ದಿನ ಮುಂಚೆ ಬಂದರೆ ಬರಬಹುದು ಎಂದು ಹೇಳಲಾಗುತ್ತಿದೆ.