ತುಮಕೂರು: ತುಮಕೂರು ಲೋಕಸಭಾಕ್ಷೇತ್ರದ ಎನ್.ಡಿ.ಎಅಭ್ಯರ್ಥಿ ವಿ.ಸೋಮಣ್ಣ ಅವರು ಮಂಗಳವಾರ ನಗರದ ನ್ಯಾಯಾಲಯ ಆವರಣದಲ್ಲಿ ವಕೀಲರನ್ನು ಭೇಟಿಯಾಗಿ ಚುನಾವಣೆಯಲ್ಲಿ ಮತ ನೀಡುವಂತೆ ಕೋರಿದರು.
ಈ ವೇಳೆ ವಕೀಲರೊಂದಿಗೆ ಮಾತನಾಡಿದ ವಿ.ಸೋಮಣ್ಣನವರು, ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷದ ಆಡಳಿತದಲ್ಲಿ ದೇಶದ ಪ್ರಗತಿಪರ ಚಿಂತನೆ, ದೂರ ದೃಷ್ಟಿ ಚಿಂತನೆಯಿಂದಾಗಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಮಾಜಿ ಪ್ರಧಾನಿ ದೇವೆಗೌಡರು ಸೇರಿದಂತೆ ಹಲವು ನಾಯಕರು ನಿರ್ಧಾರ ಮಾಡಿ, ಚುನಾವಣೆಯಲ್ಲಿ ಮೋದಿಯವರಿಗೆ ಶಕ್ತಿ ತುಂಬಲು ಬೆಂಬಲ ನೀಡಿದ್ದಾರೆ. ಈ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುವ, ಸಮರ್ಥರಿಗೆ ದೇಶದ ಆಡಳಿತ ಚುಕ್ಕಾಣಿ ನೀಡಬೇಕಾದ ಅತಿ ಮಹತ್ವದ ಚುನಾವಣೆ ಎಂದರು.
ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಅನುಸರಿಸುತ್ತಿರುವ ಭಾರತ ದೇಶವು ದೇಶ ವಿದೇಶಗಳಲ್ಲಿ ಕೀರ್ತಿ ಪಡೆಯಲು ಪ್ರಧಾನಿ ಮೋದಿಯವರ ಆಡಳಿತ ವೈಖರಿ, ದೇಶ ಮುನ್ನಡೆಸುವ ಸಾಮಥ್ರ್ಯ ಕಾರಣ ನ್ಯಾಯವನ್ನು ಎತ್ತಿ ಹಿಡಿಯುವ ವಕೀಲರು ದೇಶದ ಸ್ಥಿತಿಗತಿ ಬಗ್ಗೆ ಅರಿವಿರುವ ನೀವು ಪ್ರಧಾನಿ ಮೋದಿಯವರನ್ನು ಬೆಂಬಲಿಸಲು ಈ ಚುನಾವಣೆಯಲ್ಲಿ ತಮಗೆ ಮತ ನೀಡಿ ಆಯ್ಕೆಯಾಗಲು ಸಹಕರಿಸುವಂತೆ ಮನವಿ ಮಾಡಿದರು.
ತುಮಕೂರು ನಗರದಲ್ಲಿ ಉತ್ತಮ, ಜನಾನುರಾಗಿ ಶಾಸಕರಾಗಿ ಜ್ಯೋತಿಗಣೇಶ್ ಅವರಿದ್ದಾರೆ, ಅವರೊಂದಿಗೆ ಸೇರಿ ನಗರದ ಅಭಿವೃದ್ಧಿಗೆ, ಭವಿಷ್ಯದ ಉತ್ತಮ ಚಿಂತನೆಗಳಿಗೆ ವಕೀಲರು ಕೈ ಜೋಡಿಸಬೇಕೆಂದು ವಿ.ಸೋಮಣ್ಣ ಮನವಿ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಬಿಜೆಪಿ ರೈತ ಮೋರ್ಚಾಉಪಾಧ್ಯಕ್ಷರೂ ಆದ ವಕೀಲ ಬ್ಯಾಟರಂಗೇಗೌಡ, ತುಮಕೂರು ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಪಾಲಾಕ್ಷ, ಖಜಾಂಚಿ ಸುಜಾತ, ಹಿರಿಯ ವಕೀಲರಾದ ದೊಡ್ಡಮನೆ ಗೋಪಾಲಗೌಡ, ಹಿಮಾನಂದ್, ಬಿಜೆಪಿ ಕಾನೂನು ಪ್ರಕೋಷ್ಟರಾಜ್ಯ ಸಂಚಾಲಕ ವಸಂತಕುಮಾರ್, ಭೋಜಕುಮಾರ್, ಜೆ.ಕೆ.ಅನಿಲ್, ಮಸಣಾಪುರ ಚಂದ್ರಪ್ಪ, ಸೋರೆಕುಂಟೆ ವೀರಣ್ಣ, ಶ್ರೀನಿವಾಸ್, ಟಿ.ಶೇಖರ್, ರವಿಗೌಡ ಮೊದಲಾದವರು ಹಾಜರಿದ್ದರು.