ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಿಡಿದೆಳುತ್ತಿದ್ದ ಏಕೈಕ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್

ತುಮಕೂರು: ದಲಿತ ಸಮುದಾಯದ ಹಕ್ಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಿಡಿದೆಳುತ್ತಿದ್ದ ಏಕೈಕ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಅವರು ಎಂದು ಕರ್ನಾಟಕ ರಾಜ್ಯ ಎಸ್.ಸಿ,ಎಸ್.ಟಿ. ಸರ್ಕಾರಿ ನೌಕರರ ಸಮನ್ವಯ ಸಮಿತಿ ಗೌರವಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಡಾ.ವೈ.ಕೆ.ಬಾಲಕೃಷ್ಣಪ್ಪ ಸ್ಮರಿಸಿದರು.

ನಗರದಲ್ಲಿ ಕರ್ನಾಟಕ ರಾಜ್ಯ ಎಸ್ ಸಿ ಎಸ್.ಟಿ. ಸರ್ಕಾರಿ ನೌಕರರ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಲಿತ ನಾಯಕ ದಿ.ವಿ.ಶ್ರೀನಿವಾಸ್‍ಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ ಶೋಷಿತರ ಪರ ನೇರ, ನಿಷ್ಠುರ ರಾಜಕಾರಣಿಯಾಗಿದ್ದ ವಿ.ಶ್ರೀನಿವಾಸ್‍ಪ್ರಸಾದ್ ಅವರ ಸ್ಥಾನವನ್ನು ತುಂಬುವ ರಾಜಕಾರಣಿ ರಾಜ್ಯದಲ್ಲಿ ಬೇರೆ ಯಾರು ಇಲ್ಲ ಎಂದರು.

ಹೋರಾಟದಿಂದಲೇ ರಾಜಕಾರಣಿಯಾದ ವಿ.ಶ್ರೀನಿವಾಸ್ ಪ್ರಸಾದ್ ಅವರು, 1992ರಲ್ಲಿ ನಡೆದ ಬದನವಾಳು ದಲಿತರ ಹತ್ಯಾ ಕಾಂಡದ ವಿರುದ್ಧ ಸಂಸದರಾಗಿ ವಿ.ಶ್ರೀನಿವಾಸ್ ಪ್ರಸಾದ್ ಅವರು ಹೋರಾಟದ ನಾಯಕತ್ವ ವಹಿಸಿಕೊಳ್ಳುವ ಮೂಲಕ ಸಮು ದಾಯದ ಪರ ನಿಲ್ಲುವ ಧೈರ್ಯ ತೋರಿದ ಏಕೈಕ ರಾಜಕಾರಣಿ, ಇಂತಹ ಸಮುದಾಯದ ಪ್ರಜ್ಞೆ ಎಲ್ಲ ದಲಿತ ರಾಜಕಾರಣಿ ಗಳಿಗೆ ಅವಶ್ಯಕ ಎಂದರು.

ಬದನವಾಳು ಹತ್ಯಾಕಾಂಡ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ನಂಜನಗೂಡಿನಲ್ಲಿ ಸೇರಿದ್ದರು, ಪೆÇ್ರ.ರಾಮದಾಸ್, ರಾಜಶೇಖರ್ ಕೋಟಿ, ದೇವನೂರು ಮಹಾದೇವ್ ಸೇರಿದಂತೆ ಜಾತ್ಯಾತೀತವಾಗಿ ಎಲ್ಲ ಸಮುದಾಯದ ಮುಖಂಡರು ಭಾಗಿಯಾಗಿದ್ದರು, ಬದನವಾಳು ಘಟನೆ ವಿರುದ್ಧ ಮೈಸೂರಿನ ಎಲ್ಲ ಜಾತ್ಯಾತೀತ ಮನಸ್ಸುಗಳು ಹೋರಾಡಿದ್ದರ ಫಲವಾಗಿ ಆರೋಪಿಗಳಿಗೆ ಶಿಕ್ಷೆಯಾಯಿತು ಎಂದರು.

ರಾಜಕಾರಣಿಯಾಗಿ ದಲಿತ ಸಮುದಾಯದ ಪರವಾಗಿ ನಿಲ್ಲುವುದು, ಚುನಾವಣಾ ರಾಜಕಾರಣದಲ್ಲಿ ಸುಲಭವಾದ ವಿಚಾರವಲ್ಲ, ಮೇಲ್ವರ್ಗಗಳ ವಿರುದ್ಧ ಹೋರಾಡುತ್ತಲೇ ದಮನಿತರಿಗಾಗಿ ದುಡಿದ ಧೀಮಂತ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಅವರು ನಮ್ಮನ್ನು ಅಗಲಿರುವುದು ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದರು.

ಹೈಕೋರ್ಟ್ ವಕೀಲ ಹೆಚ್.ವಿ.ಮಂಜುನಾಥ್ ಮಾತನಾಡಿ ನಾಡಿನ ಧೀಮಂತ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ದಕ್ಕಬೇಕಿರುವ ಶ್ರದ್ಧಾಂಜಲಿ ಇದುವರೆಗೂ ಸಿಕ್ಕಿಲ್ಲ, ಹೋರಾಟದಿಂದ ರಾಜಕಾರಣಿಯಾದ ಶ್ರೀನಿವಾಸ್ ಪ್ರಸಾದ್ ಅವರು ಕೋಮುವಾದಿಗಳೊಂದಿಗೆ ಹೋದರು ಸೈದ್ಧಾಂತಿಕವಾಗಿ ರಾಜೀಯಾಗಲಿಲ್ಲ ಎಂದರು.

ಬಸವಲಿಂಗಪ್ಪ ಅವರ ನಂತರ ಶ್ರೀನಿವಾಸ್ ಪ್ರಸಾದ್ ಅವರು ದಲಿತರ ಹಕ್ಕು, ಸ್ವಾಭಿಮಾನಕ್ಕೆ ದನಿಯಾದವರು, ದಲಿತರ ರಾಜ ಕಾರಣಕ್ಕೆ ಶ್ರೀನಿವಾಸ್ ಪ್ರಸಾದ್ ಅವರು ದಾರಿದೀಪ, ದಲಿತರು ಇಂದು ಒಳಗಾಗಿರುವ ರಾಜಕೀಯ ಭಿನ್ನ ದಾರಿಗೆ ಉತ್ತರವಾಗಿ ವಿ.ಶ್ರೀನಿವಾಸ್‍ಪ್ರಸಾದ್ ರಾಜಕಾರಣವಿದೆ ಎಂದರು.

ಬುದ್ಧ,ಬಸವ,ಅಂಬೇಡ್ಕರ್ ಅವರೊಂದಿಗೆ ಕುವೆಂಪು ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಬೇಕಿದೆ, ಬಸವಣ್ಣ ವಚನ ಕ್ರಾಂತಿಯು ಕಟ್ಟಿದ ಸಮಾಜವನ್ನು ಕುವೆಂಪು ಅಕ್ಷರದಿಂದ ಕಟ್ಟಿದರು, ಕುವೆಂಪು ಅವರನ್ನು ಜಾತಿ ಚೌಕಟ್ಟಿನಿಂದ ಹೊರತರದೇ ಹೋದರೆ ಬಸವಣ್ಣನಂತೆ ಜಾತಿಯ ಸಂಕೋಲೆಯಲ್ಲಿ ಬಂಧಿಯಾಗುತ್ತಾರೆ ಎಂಬ ಎಚ್ಚರವನ್ನು ಪ್ರಗತಿಪರರು ಹೊಂದಬೇಕೆಂದು ಕರೆ ನೀಡಿದÀರು.

ಕುವೆಂಪು ಅವರ ಸಾಹಿತ್ಯವನ್ನು ಓದಿದ್ದರೆ ಇಂದು ಇಂತಹ ಪಾಳೇಗಾರಿಕೆಯ ಸ್ಥಿತಿಯನ್ನು ಸಮುದಾಯ ಹೊಂದುತ್ತಿರಲಿಲ್ಲ, ಜಾತ್ಯಾತೀತ ಸಮಾಜಕ್ಕೆ ಶೋಷಿತರೆಲ್ಲ ಒಂದೇ ಎಂಬ ಮನೋಭಾವನೆಯನ್ನು ಇಂದಿನ ಯುವ ಸಮುದಾಯದಲ್ಲಿ ಮೂಡಿಸ ಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಉದ್ಯಮಿ ಡಿ.ಟಿ.ವೆಂಕಟೇಶ್ ಮಾತನಾಡಿ ದಲಿತರ ಸಾಕ್ಷಿ ಪ್ರಜ್ಞೆಯಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಜಕಾರಣಕ್ಕಾಗಿ ಅನೇಕ ನಿರ್ಧಾರ ಕೈಗೊಂಡರು, ಅದು ಇಂದಿನ ಕಾಲಘಟ್ಟದಲ್ಲಿ ಯುವ ಸಮುದಾಯಕ್ಕೆ ತಪ್ಪಾಗಿ ಕಂಡರೂ ಸ್ವಾಭಿಮಾನವನ್ನು ಬಿಟ್ಟು ಕೊಡದೇ ಅಧಿಕಾರವನ್ನು ಪಡೆದ ಛಲವನ್ನು ಯುವ ರಾಜಕಾರಣಿಗಳು ಮತ್ತು ಯುವ ಸಮೂಹ ಅರಿಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇತ್ತಿಚೆಗೆ ನಿವೃತ್ತರಾದ ಶಿಕ್ಷಣ ಇಲಾಖೆಯ ಗಂಗಾಧರಪ್ಪ, ರಾಮಚಂದ್ರಪ್ಪ (ಆರ್.ಸಿ) ರೇಷ್ಮೆ ಇಲಾಖೆಯ ಪ್ರಭುಕಾಳೆ ಅವರನ್ನು ಸಂಘಟನೆ ವತಿಯಿಂದ ಅಭಿನಂದಿಸಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.

ಈ ವೇಳೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಗರಾಜು, ಕೋಟೆಕಲ್ಲಪ್ಪ, ಚಿಕ್ಕಣ್ಣ, ಶಿವರಾಮ್, ಹನುಮಂತರಾಜು, ಹನು ಮಂತರಾಯಪ್ಪ, ಸುರೇಶ್, ಮಂಜಣ್ಣ, ಮಾರುತಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *