ತುಮಕೂರು: ಸರಕಾರವು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯವಾದಿ ಕಾಂತರಾಜು ಅವರ ಮೂಲಕ ಮಾಡಿಸಿರುವ ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಂಪೂರ್ಣ ಲೋಪದೋಷದಿಂದ ಕೂಡಿದೆ.ಹಾಗಾಗಿ ಇದನ್ನು ಸರಕಾರ ಒಪ್ಪಿಕೊಳ್ಳಬಾರದು. ಹೊಸದಾಗಿ ವೈಜ್ಞಾನಿಕ ವಿಧಾನದ ಮೂಲಕ ಸಮೀಕ್ಷೆ ನಡೆಸಬೇಕು.ಅಲ್ಲದೆ ಕಾಂತರಾಜು ವರದಿಯ ಕೆಲ ಅಂಶಗಳು ಸೋರಿಕೆಯಾಗಿದ್ದು, ಇದು ವೀರಶೈವ-ಲಿಂಗಾಯಿತ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ.ಅಲ್ಲದೆ ವೀರಶೈವ, ಲಿಂಗಾಯಿತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ವೀರಶೈವ-ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನಕುಮಾರ್ ಪಟೇಲ್ ತಿಳಿಸಿದರು.
ಅಖಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ 24 ನೇ ಮಹಾ ಅಧಿವೇಶನ:
ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ವತಿಯಿಂದ ದಾವಣಗೆರೆಯ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಡಿಸೆಂಬರ್ 23 ಮತ್ತು 24 ರಂದು ಅಖಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ 24 ನೇ ಮಹಾ ಅಧಿವೇಶನದ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಮಹಾ ಅಧಿವೇಶನದಲ್ಲಿ ಕಾಂತರಾಜು ವರದಿ ಅವೈಜ್ಞಾನಿವಾಗಿರುವುದರಿಂದ ಮರು ಸಮೀಕ್ಷೆಗೆ ಒತ್ತಾಯಿಸಲಾಗುವುದು ಎಂದರು.
1904ರಲ್ಲಿ ಹಾನಗಲ್ ಕುಮಾರಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಮೊದಲ ಮಹಾ ಅಧಿವೇಶನ ನಡೆದಿದ್ದು, ಕಳೆದ 10 ವರ್ಷಗಳ ಹಿಂದೆ ಮೈಸೂರಿನ ಶಿವರಾತ್ರಿ ದೇಶಿಕೇಂದ್ರ ಮಹಾಸಂಸ್ಥಾನ ಮಠದಲ್ಲಿ 23ನೇ ಅಧಿವೇಶನ ನಡೆದಿತ್ತು. ಪ್ರತಿ ಐದು ವರ್ಷಗಳಿಗೊಮ್ಮೆ ಅಧಿವೇಶ ನಡೆಯುತ್ತಿದ್ದು, ಕರೋನದಿಂದಾಗಿ 24ನೇ ಅಧಿವೇಶವನ್ನು 2023ರ ಡಿಸೆಂಬರ್ 23-24 ರಂದು ನಡೆಸಲು ತೀರ್ಮಾನಿಸಿ, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಡಿಸೆಂಬರ್ 23ರ ಮದ್ಯಾಹ್ನ 12.30 ರಿಂದ 2.30ರವರೆಗೆ 24ನೇ ಮಹಾಅಧಿವೇಶನದ ಉದ್ಘಾಟನಾ ಸಮಾರಂಭ ಜರುಗಲಿದ್ದು,ವಿವಿಧ ಹರಗುರು ಚರಮೂರ್ತಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಅಧಿವೇಶನವನ್ನು ಸುತ್ತೂರಿನ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದು, ಮಹಾಸಭಾದ ರಾಜ್ಯಾಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಅಧ್ಯಕ್ಷತೆ ವಹಿಸುವರು.ಈಶ್ವರ ಖಂಡ್ರೆ, ಭೀಮಣ್ಣ ಖಂಡ್ರೆ ಸೇರಿದಂತೆ ಲಿಂಗಾಯಿತ ಸಮುದಾಯದ ಹಲವು ಸಚಿವರು,ಶಾಸಕರುಗಳು ಭಾಗವಹಿಸಲಿದ್ದಾರೆ.24ನೇ ಮಹಾ ಅಧಿವೇಶನಕ್ಕೆ 3 ಲಕ್ಷ ದಿಂದ 5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ತುಮಕೂರಿನಿಂದ ಸಹ 25 ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಲವರು ಸ್ವಯಂ ಪ್ರೇರಿತರಾಗಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೋಹನ್‍ಕುಮಾರ್ ಪಟೇಲ್ ತಿಳಿಸಿದರು.
ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದ 24ನೇ ಮಹಾ ಅಧಿವೇಶನಕ್ಕೆ ಸಮುದಾಯದ ಹಿರಿಯರಾದ ದಿವಂಗತ ಎಸ್.ನಿಜಲಿಂಗಪ್ಪ ಮತ್ತು ಜೆ.ಹೆಚ್.ಪಟೇಲ್ ವೇದಿಕೆ ಎಂದು ಹೆಸರುಗಳನ್ನು ಇಡಲಾಗಿದೆ.ಪ್ರಮುಖವಾಗಿ ಕರ್ನಾಟಕದಲ್ಲಿರುವ ವೀರಶೈವ-ಲಿಂಗಾಯಿತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕು.ರಾಜ್ಯ ಸರಕಾರದ ನ್ಯಾಯವಾದಿ ಕಾಂತರಾಜು ವರದಿಯನ್ನು ಸ್ವೀಕರಿಸಬಾರದು ಹಾಗೂ ವೈಜ್ಞಾನಿಕವಾಗಿ ಮತ್ತೊಮ್ಮೆ ಶೈಕ್ಷಣಿಕ, ಅರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಬೇಕು ಎಂಬ ನಿರ್ಣಯವನ್ನು ಅಧಿವೇಶನದಲ್ಲಿ ಕೈಗೊಳ್ಳಲಾಗುವುದು ಎಂದು ಮೋಹನ್‍ಕುಮಾರ್ ಪಟೇಲ್ ತಿಳಿಸಿದರು.
ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ,ವೀರಶೈವ-ಲಿಂಗಾಯಿತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸದ ಪರಿಣಾಮ ಕೇಂದ್ರ ಸರಕಾರ ನಡೆಸುವ ಯುಪಿಎಸ್ಸಿ,ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೀಸಲಾತಿ ಇಲ್ಲದಂತಾಗಿದೆ.ಐಎಎಸ್, ಐಪಿಎಸ ಅಧಿಕಾರಗಳ ಸಂಖ್ಯೆ ಕ್ಷೀಣಿಸಿದೆ.ಇದರ ವಿರುದ್ದ ಪ್ರಬಲ ಹೋರಾಟ ರೂಪಿಸುವ ನಿಟ್ಟಿನಲ್ಲಿ ಈ ಅಧಿವೇಶದ ಮಹತ್ವದ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ವೀರಶೈವ-ಲಿಂಗಾಯಿತ ಸಮಾಜದ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ಅಧಿವೇಶವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯಿತ ಮಹಾಸಭಾದ ದಕ್ಷಿಣಮೂರ್ತಿ, ಯದುಕುಮಾರ್,ಮಂಜುನಾಥ್, ಶಶಿಧರಯ್ಯ, ಮಂಜುನಾಥ್, ಗೋಪಾಲ್ ,ಮಮತ,ಯುವಘಟಕದ ಅಧ್ಯಕ್ಷ ರಕ್ಷಿತ್, ಮಹಿಳಾ ಘಟಕದ ಮಂಜುಳ, ವೀರಶೈವ ಬ್ಯಾಂಕಿನ ರುದ್ರೇಶ್ ಮತ್ತಿತರರ ಮುಖಂಡರು ಪಾಲ್ಗೊಂಡಿದ್ದರು.